ರಿಯಾಯಿತಿ ವಂಚಿತ ಹಿರಿಯ ನಾಗರಿಕರಿಂದ 2022-23ರಲ್ಲಿ ರೈಲ್ವೆಗೆ 2,242 ಕೋಟಿ ರೂ.ಗಳ ಹೆಚ್ಚುವರಿ ಪಾವತಿ: ವರದಿ
ಹೊಸದಿಲ್ಲಿ: ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಸ್ಥಗಿತಗೊಳಿಸಿರುವುದರಿಂದ ಅವರು ತಮ್ಮ ರೈಲು ಪ್ರಯಾಣಕ್ಕೆ ಪೂರ್ಣ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಈ ಸೌಲಭ್ಯವನ್ನು ನಿಲ್ಲಿಸಿರುವುದರಿಂದ ರೈಲ್ವೆಯು 2022, ಎ.1 ಮತ್ತು 2023, ಮಾ.30ರ ನಡುವೆ 2,242 ಕೋ.ರೂ.ಗಳ ಹೆಚ್ಚುವರಿ ಆದಾಯವನ್ನು ಗಳಿಸಿದೆ. ಈ ಮೊತ್ತ ರೈಲುಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಂದ ಬಂದಿದೆ ಎಂದು thewire.in ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ಮಾರ್ಚ್ನಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿಯನ್ನು ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಲಾಕ್ಡೌನ್ಗಳು ಅಂತ್ಯಗೊಂಡಿದ್ದರೂ ಹಿರಿಯ ನಾಗರಿಕರ ರಿಯಾಯಿತಿಯನ್ನು ಮರುಸ್ಥಾಪಿಸಲಾಗಿಲ್ಲ. 60 ವರ್ಷ ಮೇಲ್ಪಟ್ಟ ಪುರುಷರಿಗೆ ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಿಯಾಯಿತಿ ಅನ್ವಯಿಸುತ್ತಿತ್ತು.
ಕಳೆದ ಹಣಕಾಸು ವರ್ಷದಲ್ಲಿ ಸುಮಾರು ಎಂಟು ಕೋಟಿ ಹಿರಿಯ ನಾಗರಿಕರು ಪೂರ್ಣ ಶುಲ್ಕವನ್ನು ತೆತ್ತು ರೈಲು ಟಿಕೆಟ್ಗಳನ್ನು ಖರೀದಿಸಿದ್ದಾರೆ ಎಂದು ಮಧ್ಯಪ್ರದೇಶದ ಚಂದ್ರಶೇಖರ ಗೌಡ ಅವರು ಪಡೆದುಕೊಂಡಿರುವ ಆರ್ಟಿಐ ಉತ್ತರದಲ್ಲಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಂದ 5,062 ಕೋಟಿ ರೂ.ಗಳ ಒಟ್ಟು ಆದಾಯ ಸಂಗ್ರಹವಾಗಿದ್ದು,ಇದು ರಿಯಾಯತಿಗಳನ್ನು ಸ್ಥಗಿತಗೊಳಿಸಿದ್ದರಿಂದ ಗಳಿಸಲಾಗಿರುವ ಹೆಚ್ಚುವರಿ 2,242 ಕೋ.ರೂ.ಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.
2020-22ರ ಅವಧಿಯಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಂದ ಸಂಗ್ರಹಿಸಲಾದ ಒಟ್ಟು ಆದಾಯ 3,464 ಕೋಟಿ ರೂ.ಗಳಾಗಿದ್ದು,ಇದರಲ್ಲಿ ರಿಯಾಯಿತಿ ಸ್ಥಗಿತದಿಂದ ಹೆಚ್ಚುವರಿಯಾಗಿ ಬಂದಿರುವ 1,500 ಕೋಟಿ ರೂ.ಗಳು ಸೇರಿವೆ.
ರಿಯಾಯಿತಿ ಸೌಲಭ್ಯದ ಪುನರುಜ್ಜೀವನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಎ.28ರಂದು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.c