ಬಿಲ್ಕಿಸ್‌ ಬಾನು ಪ್ರಕರಣ: ಶಿಕ್ಷಿತರ ಕ್ಷಮಾದಾನ ಕಡತ ಸಲ್ಲಿಕೆಗೆ ಕೊನೆಗೂ ಒಪ್ಪಿಕೊಂಡ ಕೇಂದ್ರ, ಗುಜರಾತ್ ಸರ್ಕಾರ

Update: 2023-05-03 07:58 GMT

ಹೊಸದಿಲ್ಲಿ: ಗುಜರಾತ್‌ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ 11 ಮಂದಿಯ ಕ್ಷಮಾದಾನಕ್ಕೆ ಸಂಬಂಧಿಸಿದ ಕಡತಗಳು ಹಾಗೂ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಬದ್ಧ ಎಂದು ಕೇಂದ್ರ ಸರ್ಕಾರ ಹಾಗೂ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿವೆ ಎಂದು timesofindia ವರದಿ ಮಾಡಿದೆ.

ಈ ಸಂಬಂಧದ ಮಾಹಿತಿ ಮೇಲೆ ಯಾವುದೇ ವಿಶೇಷ ಹಕ್ಕನ್ನು ಪ್ರತಿಪಾದಿಸುವುದಿಲ್ಲ ಎಂದು ಹೇಳಿವೆ. ಇದಕ್ಕೂ ಮುನ್ನ ಎಪ್ರಿಲ್ 18ರಂದು ವಿಚಾರಣೆ ನಡೆಯುವ ವೇಳೆ ಉಭಯ ಸರ್ಕಾರಗಳು ಈ ಮಾಹಿತಿ ಮೇಲೆ ವಿಶೇಷ ಹಕ್ಕು ಹೊಂದಿರುವುದಾಗಿ ಪ್ರತಿಪಾದಿಸಿದ್ದವು. ಮೂಲ ಕಡತವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ಪುನರ್ ವಿಮರ್ಶೆಗೆ ಮನವಿ ಮಾಡುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಬೇಕು ಎಂದು ಕೋರಿದ್ದವು.

ಸುಪ್ರೀಂ ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಶಿಕ್ಷಿತರ ಪೈಕಿ ಒಬ್ಬನಿಗೆ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಮತ್ತು ಇತರ ಆಪಾದಿತರು ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಮಾರ್ಚ್ 27ರಂದು ಪ್ರಕರಣದ ಸಂಬಂಧ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ: ನಾವು ಪ್ರಕರಣದ ವಿಚಾರಣೆ ನಡೆಸುವುದು ಅವರಿಗೆ ಬೇಕಿಲ್ಲ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಕುರಿತು ಸುಪ್ರೀಂಕೋರ್ಟ್

Similar News