ಐಪಿಎಲ್ ನಿಂದ ಹೊರನಡೆದ ಲಕ್ನೋ ತಂಡದ ನಾಯಕ ಕೆ.ಎಲ್.ರಾಹುಲ್

Update: 2023-05-03 09:47 GMT

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಕ್ನೊ ಸೂಪರ್ ಜೇಂಟ್ಸ್ ತಂಡ ಆಡಿದ ಕೊನೆಯ ಪ್ರಾಥಮಿಕ ಘಟ್ಟದ ಪಂದ್ಯದಲ್ಲಿ ತೀವ್ರ ತೊಡೆ ಗಾಯಕ್ಕೆ ಒಳಗಾಗಿರುವ ನಾಯಕ ಕೆ.ಎಲ್.ರಾಹುಲ್, ಐಪಿಎಲ್2023 ಋತುವಿನ ಉಳಿದ ಪಂದ್ಯಗಳನ್ನಾಡುವುದು ಬಹುತೇಕ ಅಸಂಭವ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಿರಿಯ ವೇಗದ ಬೌಲರ್ ಜಯದೇವ್ ಉನದ್ಕತ್ ಕೂಡಾ ಗಂಭೀರವಾದ ತೋಳಿನ ಗಾಯದಿಂದ ಬಳಲುತ್ತಿದ್ದು, ಅವರೂ ಕೂಡಾ ಐಪಿಎಲ್‌ನ ಉಳಿದ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.

ಜೂನ್ 7-11ರ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶುರುವಾಗುವುದಕ್ಕೂ ಮುನ್ನ ಹಿರಿಯ ಬ್ಯಾಟರ್-ಕೀಪರ್ ಕೆ.ಎಲ್.ರಾಹುಲ್ ಅವರನ್ನು ಸನ್ನದ್ಧಗೊಳಿಸುವುದು ಬಿಸಿಸಿಐ ಕ್ರೀಡಾ ವಿಜ್ಞಾನ ಹಾಗೂ ವೈದ್ಯಕೀಯ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ ಎಂದೂ ಹೇಳಲಾಗಿದೆ.

ಮಾರ್ಕಸ್ ಸ್ಟೋಯ್ನಿಸ್ ಬೌಲಿಂಗ್‌ನಲ್ಲಿ ಫಾಫ್ ಡು ಪ್ಲೆಸಿಸ್ ಬೌಂಡರಿಯತ್ತ ಹೊಡೆದ ಚೆಂಡನ್ನು ಕ್ಷೇತ್ರ ರಕ್ಷಣೆ ಮಾಡಲು ಧಾವಿಸಿದ್ದ ರಾಹುಲ್ ನೆಲಕ್ಕೆ ಬಿದ್ದು, ಅವರ ತೊಡೆಗೆ ಗಂಭೀರ ಗಾಯವಾಗಿತ್ತು.

"ಕೆ.ಎಲ್.ರಾಹುಲ್ ಸದ್ಯ ಲಕ್ನೊದಲ್ಲಿ ತಂಡದೊಂದಿಗಿದ್ದು, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಅಲ್ಲಿಂದ ತಂಡವನ್ನು ತೊರೆಯಲಿದ್ದಾರೆ. ಬಿಸಿಸಿಐಗೆ ಮೀಸಲಾಗಿರುವ ಮುಂಬೈನ ವೈದ್ಯಕೀಯ ಸಂಸ್ಥೆಯಲ್ಲಿ ಅವರ ಸ್ಕ್ಯಾನ್ ಮಾಡಲಾಗುತ್ತದೆ. ಅವರ ಹಾಗೂ ಜಯದೇವ್ ಉನದ್ಕತ್ ಅವರ ಪ್ರಕರಣಗಳನ್ನು ಬಿಸಿಸಿಐ ತಾನೇ ನಿರ್ವಹಿಸಲಿದೆ" ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಇರುವ ಬಿಸಿಸಿಐನ ಹೆಸರೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆ.ಎಲ್.ರಾಹುಲ್‌ಗೆ ಈವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದೂ ಮೂಲಗಳು ಖಚಿತಪಡಿಸಿವೆ.

Similar News