ತಮಿಳುನಾಡು: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ದಲಿತರು ಮೃತ್ಯು

ಹೊಣೆಗಾರಿಕೆಯಿಂದ ನುಣುಚಿಕೊಂಡ ಪಂಚಾಯತ್

Update: 2023-05-03 12:16 GMT

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಮಿಂಜೂರ್ ಪಟ್ಟಣ ಪಂಚಾಯತ್ನಲ್ಲಿ ನೈರ್ಮಲ್ಯ ಕಾರ್ಮಿಕರಿಬ್ಬರು ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದು, ಕಾರ್ಮಿಕರ ದಿನವಾದ ಮೇ 1ರಂದೇ ಈ ಘಟನೆ ಸಂಭವಿಸಿದೆ.

ಮೃತರ ಪೈಕಿ ಗೋವಿಂದನ್ (45) ಪಟ್ಟಣ ಪಂಚಾಯತ್ನಲ್ಲಿ ಕಾಯಂ ಉದ್ಯೋಗಿಯಾಗಿದ್ದರೆ,ಸುಭರಾಯಲು (58) ತಾತ್ಕಾಲಿಕ ಸ್ವೀಪರ್ ಆಗಿದ್ದರು. ಮೇ 1ರಂದು ರಜಾದಿನವಾಗಿದ್ದರಿಂದ ಹೆಚ್ಚುವರಿ ಆದಾಯಕ್ಕಾಗಿ ಖಾಸಗಿ ಗುತ್ತಿಗೆದಾರನ ಬಳಿ ಕೆಲಸಕ್ಕೆ ಹೋಗಿದ್ದರು ಎಂದು ಪಂಚಾಯತ್ ಅಧಿಕಾರಿಗಳು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಸೋಮವಾರ ಅಪರಾಹ್ನ ಮಿಂಜೂರಿನ ಇಮ್ಯಾನುಯೆಲ್ ಹೈಯರ್ ಸೆಕೆಂಡರಿ ಸ್ಕೂಲ್ ನ ಸೆಪ್ಟಿಕ್ ಟ್ಯಾಂಕ್ ಪ್ರವೇಶಿಸಿದ ಬಳಿಕ ಗೋವಿಂದನ್ ಮತ್ತು ಸುಭರಾಯಲು ಮೃತರಾಗಿದ್ದಾರೆ ಎಂದು ತಿಳಿಸಿದ ಪೊಲೀಸರು, ಸೆಪ್ಟಿಕ್ ಟ್ಯಾಂಕ್ಗೆ ಇಳಿಯುವ ಮುನ್ನ ಶಾಲೆಯು ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಿರಲಿಲ್ಲ ಎಂದು ದೃಢಪಡಿಸಿದರು.

ಮೃತ ಕಾರ್ಮಿಕರನ್ನು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಗೆ ತೊಡಗಿಸಿದ್ದಕ್ಕಾಗಿ ಶಾಲೆಯ ಅಧಿಕಾರಿ ಸೈಮನ್ ಸಿ.ವಿಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು,ಅವರನ್ನು ಕೆಲಸಕ್ಕೆ ನಿಯೋಜಿಸಿದ್ದ ಖಾಸಗಿ ಗುತ್ತಿಗೆದಾರನಿಗಾಗಿ  ಪೊಲೀಸರು ಹುಡುಕಾಡುತ್ತಿದ್ದಾರೆ.

‘ಖಾಸಗಿ ಗುತ್ತಿಗೆದಾರ ಮತ್ತು ಪಂಚಾಯತ್ ನೌಕರರು ಪರಸ್ಪರ ಸಂಪರ್ಕಕ್ಕೆ ಬಂದಿದ್ದು ಹೇಗೆ ಎನ್ನುವುದು ನನಗೆ ಗೊತ್ತಿಲ್ಲ. ಪ್ರತಿ ವಾರ ಹಾಜರಾತಿ ಹಾಕುವಾಗ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನಲ್ಲಿ ತೊಡಗಬೇಡಿ,ಅದು ಅಪಾಯಕಾರಿ ಎಂದು ನಾವು ಅವರಿಗೆ ಹೇಳುತ್ತಲೇ ಇರುತ್ತೇವೆ. ಮೇ 1ರಂದು ರಜಾದಿನವಾಗಿದ್ದರಿಂದ ನಾಲ್ಕು ಕಾಸು ಹೆಚ್ಚು ಸಂಪಾದಿಸಲು ಅವರು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಗುತ್ತಿಗೆದಾರನ ಜೊತೆಗೆ ತೆರಳಿದ್ದಿರಬೇಕು’ ಎಂದು ಮಿಂಜೂರ್ ಪಂಚಾಯತ್ನ ಕಾರ್ಯ ನಿರ್ವಾಹಕ ಅಧಿಕಾರಿ ವೆಟ್ರಿ ಅರಸನ್ ಸುದ್ದಿಸಂಸ್ಥೆಗೆ ತಿಳಿಸಿದರು.

ಮೃತರು ಹಣಕ್ಕಾಗಿ ಹೆಚ್ಚುವರಿ ಕೆಲಸದಲ್ಲಿ ತೊಡಗಿಕೊಂಡಿದ್ದರು ಎನ್ನುವುದು ಬೇರೆ ಮಾತು,ಆದರೆ ಈಗಲೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನಲ್ಲಿ ತೊಡಗಿಕೊಳ್ಳುವವರು ಇದ್ದಾರೆ ಎನ್ನುವುದು ಇಂತಹ ಸಾವುಗಳಿಗೆ ಮೂಲಕಾರಣವಾಗಿದೆ ಎಂದು ಹೇಳಿದ ತಮಿಳುನಾಡು ಅಸ್ಪೃಶ್ಯತೆ ನಿವಾರಣಾ ರಂಗದ ಪ್ರಧಾನ ಕಾರ್ಯದರ್ಶಿ ಕೆ.ಸಾಮ್ಯುವೆಲ್ ರಾಜ್, ತಾವು ತಮ್ಮ ಕಾರ್ಮಿಕರಿಗೆ ಇಂತಹ ಕೆಲಸಗಳಲ್ಲಿ ತೊಡಗದಂತೆ ಅರಿವು ಮೂಡಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಪಂಚಾಯತ್ ಅಧಿಕಾರಿಗಳು ತಾವು ಸುರಕ್ಷಿತರಾಗಿರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರ ಹೊಣೆಗಾರಿಕೆ ಅಲ್ಲಿಗೇ ಮುಗಿಯುವುದಿಲ್ಲ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಇನ್ನೂ ನಿರ್ಮೂಲನಗೊಂಡಿಲ್ಲ ಮತ್ತು ಅದರ ಹೊಣೆಗಾರಿಕೆಯನ್ನು ಸರಕಾರವು ಹೊರಬೇಕು. ಸರಕಾರವು ಇಂತಹ ಸಾವುಗಳನ್ನು ತಡೆಯಲು ನೈಮಲ್ಯ ಕಾರ್ಮಿಕರಿಗೆ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ರೋಬಾಟ್ ನಂತಹ ಯಂತ್ರಗಳನ್ನು ಲಭ್ಯವಾಗಿಸಬೇಕು ಎಂದರು.

ಓರ್ವ ಕಾರ್ಮಿಕ ಮೊದಲು ಸೆಪ್ಟಿಕ್ ಟ್ಯಾಂಕ್ನಲ್ಲಿ ಇಳಿದ ಬಳಿಕ ವಿಷಾನಿಲ ಸೇವನೆಯಿಂದ ಪ್ರಜ್ಞೆಯನ್ನು ಕಳೆದುಕೊಂಡಿರಬೇಕು ಮತ್ತು ಆತನನ್ನು ರಕ್ಷಿಸಲು ಇನ್ನೋರ್ವನೂ ಟ್ಯಾಂಕ್ನಲ್ಲಿ ಇಳಿದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

Similar News