ಕಡಿಮೆ ಜಾಹೀರಾತು: ಶೇ 97.6 ಕುಸಿತ ಕಂಡ ಅದಾನಿ ಒಡೆತನದ ಎನ್‌ಡಿಟಿವಿಯ ಲಾಭಾಂಶ
ಬೆಂಗಳೂರು: ಅದಾನಿ ಸಂಸ್ಥೆಯ ಒಡೆತನದಲ್ಲಿರುವ NDTV ವಾಹಿನಿಯು ಮಾರ್ಚ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಲಾಭದಲ್ಲಿ ಶೇ 97.6ರಷ್ಟು ಕುಸಿತ ದಾಖಲಿಸಿದೆ. ಜಾಹೀರಾತುಗಳು ಕಡಿಮೆಗೊಂಡಿರುವುದೇ ಈ ನಷ್ಟಕ್ಕೆ ಕಾರಣವೆನ್ನಲಾಗಿದೆ ಎಂದು reuters.com ವರದಿ ಮಾಡಿದೆ.
ಮಾರ್ಚ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಎನ್‌ಡಿಟಿವಿ ಗಳಿಸಿದ ನಿವ್ವಳ ಲಾಭ ರೂ. 59 ಲಕ್ಷ ಆಗಿದ್ದು ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆ ರೂ. 24.16 ಕೋಟಿ ಲಾಭ ಗಳಿಸಿತ್ತು.
ಜಾಗತಿಕವಾಗಿ ಕಂಪೆನಿಗಳು ತಮ್ಮ ಜಾಹೀರಾತುಗಳಿಗೆ ಮಾಡುವ ವೆಚ್ಚವನ್ನು ಕಡಿತಗೊಳಿಸಿರುವ ಕಾರಣ ಸಂಸ್ಥೆಯ ಕಾರ್ಯನಿರ್ವಹಣೆಯಿಂದ ದೊರೆತ ಆದಾಯವು ಶೇ 35.5ರಷ್ಟು ಕುಸಿತ ಕಂಡು ರೂ. 66.96 ಕೋಟಿಗೆ ಇಳಿಕೆಯಾಗಿದೆ. ಒಟ್ಟು ವೆಚ್ಚಗಳು ಶೇ5.9ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟಿವಿ18 ಬ್ರಾಡ್‌ಕಾಸ್ಟ್ ಲಿಮಿಟೆಡ್ ಕೂಡ ತನ್ನ ತ್ರೈಮಾಸಿಕ ಲಾಭದಲ್ಲಿ ಇಳಿಕೆಯಾಗಿರುವ ಕುರಿತು ವರದಿ ಮಾಡಿತ್ತು.