×
Ad

ವರುಣಾ: ಬಿಜೆಪಿಗೆ ಸೋಮಣ್ಣ ಟಾನಿಕ್, ಆದರೆ ಸಿದ್ದರಾಮಯ್ಯ ದಾರಿ ಸುಗಮ

ಘನತೆಯ ಸೋಲಿಗೆ ಸಜ್ಜಾಗುತ್ತಿರುವ ವಸತಿ ಸಚಿವ ?

Update: 2023-05-04 17:05 IST

ರಾಜ್ಯದ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಘನತೆಯ ಸೋಲಾಗುವ ಲಕ್ಷಣ ಗೋಚರಿಸುತ್ತಿದೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಹೀನಾಯ ಸೋಲು ಖಚಿತ ಎನ್ನುವ ಹತ್ತು ದಿನಗಳ ಹಿಂದಿನ ವಾತಾವರಣ ಈಗ ಬದಲಾಗಿದೆ. ವಿ.ಸೋಮಣ್ಣರಿಗೆ ಘನತೆಯ ಸೋಲು ಖಚಿತ ಎನ್ನುವ ಮಟ್ಟಕ್ಕೆ ಬಿಜೆಪಿಯ ಪರಿಸ್ಥಿತಿ ಸುಧಾರಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಕಾಯಕ ನೆಲ ಆಗಿರುವ ಕಾರಣದಿಂದ ವರುಣಾ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಇದೇ ವರುಣಾ ಕ್ಷೇತ್ರ ಎನ್ನುವ ಹೆಮ್ಮೆ ಈಗಲೂ ಕ್ಷೇತ್ರದ ಮತದಾರರಲ್ಲಿ ಮನೆ ಮಾಡಿದೆ.

ವಿ.ಸೋಮಣ್ಣ ಅವರನ್ನು ಏಕಾಏಕಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದಾಗ “ಬಲಿ ಪಶು” ಎನ್ನುವ ಮಾತು ಸ್ವತಃ ಬಿಜೆಪಿ ಕಾರ್ಯಕರ್ತರ ಬಾಯಲ್ಲೇ ಬಂದಿತ್ತು. “ತಾನು ಬಲಿ ಪಶು” ಎಂದು ಬಿಜೆಪಿ ಕಾರ್ಯಕರ್ತರು ನಂಬುವ ರೀತಿಯಲ್ಲಿ ಸ್ವತಃ ವಿ.ಸೋಮಣ್ಣ ಅವರೇ ನಾನಾ ಸಂದರ್ಭಗಳಲ್ಲಿ ಪರೋಕ್ಷವಾಗಿ ಮಾತನಾಡಿದ್ದರು. ಟಿಕೆಟ್ ಘೋಷಣೆಯಾಗುವ ಕೆಲವೇ ದಿನಗಳ ಮೊದಲು, “ಸಿದ್ದರಾಮಣ್ಣನ ಎದುರು ನಾನೇಕೆ ಚುನಾವಣೆಗೆ ನಿಲ್ಲಬೇಕು?” ಎಂದು ಸೋಮಣ್ಣ ಬಹಿರಂಗವಾಗಿ ಗುಡುಗಿದ್ದರು.
ಟಿಕೆಟ್ ಘೋಷಣೆಯಾಗಿ ಚುನಾವಣೆ ಪ್ರಚಾರಕ್ಕೆ ಇಳಿದ ಮೇಲೂ ಸೋಮಣ್ಣ ಅವರು ಒಂದು ಪ್ರಚಾರದ ಸಭೆಯಲ್ಲಿ, “ನಾನು ಒಂದು ಕ್ಷೇತ್ರ ಕೇಳಿದ್ದೆ. ಆದ್ರೆ ಎರಡು ಕ್ಷೇತ್ರ ಕೊಟ್ಟು ಬಿಟ್ಟಿದ್ದಾರೆ. ಒಂದು ಕ್ಷೇತ್ರದಲ್ಲಿ ಚುನಾವಣೆ ಮಾಡುವುದೇ ಬಲು ಕಷ್ಟ. ಎರಡು ಕ್ಷೇತ್ರ ಅಂದರೆ ತಮಾಷೆನಾ” ಎಂದು ಮಾತನಾಡಿರುವ ವಿಡಿಯೊ ವರುಣಾ ಕ್ಷೇತ್ರದ ತುಂಬ ಹರಿದಾಡುತ್ತಿದೆ.

ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರೂ ವರುಣಾ ಕ್ಷೇತ್ರದ ಪ್ರಚಾರ ಮುಗಿಸಿ ವಾಪಸ್ಸಾಗಿದ್ದಾರೆ.

ಈ ಹಿಂದಿನ ಯಾವ ಚುನಾವಣೆಗಳಲ್ಲೂ ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಕಾಣದ ಹುಮ್ಮಸ್ಸು ಈ ಬಾರಿ ಕಾಣುತ್ತಿದೆ. ಏಕೆ ಹೀಗೆ ಎಂದು ಕೇಳಿದರೆ, “ಪ್ರತಿ ಬಾರಿ ಬಿಜೆಪಿ ಕೆಲಸಕ್ಕೆ ಬಾರದ ಅಭ್ಯರ್ಥಿಗಳನ್ನು ಇಲ್ಲಿಂದ ಕಣಕ್ಕೆ ಇಳಿಸುತ್ತಿತ್ತು. ಈ ಬಾರಿ ಪರಿಚಯದ ವ್ಯಕ್ತಿಯನ್ನು ವರುಣಾಕ್ಕೆ ಕರೆ ತಂದು ನಿಲ್ಲಿಸಿದ್ದಾರೆ” ಎನ್ನುವ ಉತ್ತರ ಬಿಜೆಪಿ ಕಾರ್ಯಕರ್ತರ ಬಾಯಲ್ಲಿ ಬರುತ್ತಿದೆ. ಜತೆಗೆ ಲಿಂಗಾಯತ ಮತದಾರರು ಹೆಚ್ಚಾಗಿರುವ ಚಿಕ್ಕಳ್ಳಿ, ಸುತ್ತೂರು, ಬೆಳಗುಂದ, ಬಿಳಿಗೆರೆ ಮುಂತಾದ ಬೂತ್‌ಗಳಲ್ಲಿ ಸೋಮಣ್ಣರ ಪರವಾದ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ ಇರ‍್ಯಾರೂ ಸಿದ್ದರಾಮಯ್ಯರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ.

“ಸಿದ್ದರಾಮಣ್ಣ ಕೆಲಸ ಮಾಡಿದ್ದಾರೆ. ಇವರ ಮಗ ಡಾ.ಯತೀಂದ್ರ ಕೈಗೆ, ಬಾಯಿಗೆ ಸಿಗ್ತಾನೇ ಇರ್ತಾರೆ. ಆದ್ರೆ, ಸೋಮಣ್ಣ ನಮ್ಮವರು” ಎನ್ನುವ ಆಸೆಯನ್ನು ಲಿಂಗಾಯತ ಸಮುದಾಯದ ಯುವಕರು ವ್ಯಕ್ತಪಡಿಸುತ್ತಿದ್ದಾರೆ.  ಇವೆಲ್ಲವೂ ಸೇರಿ, “ಸೋಮಣ್ಣ ಹೀನಾಯವಾಗಿ ಸೋಲುತ್ತಾರೆ” ಎನ್ನುವ ಮೊದಲಿನ ಪರಿಸ್ಥಿತಿ ಕರಗಿ, “ಸೋಮಣ್ಣ ಕೂಡ ಫೈಟ್ ಕೊಡ್ತಾರೆ” ಎನ್ನುವ ಮಾತು ಹುಟ್ಟಿಕೊಂಡಿದೆ.

ಸಿದ್ದರಾಮಯ್ಯ ಅವರ ವಿಚಾರಕ್ಕೆ ಬಂದರೆ “ಇವ ನಮ್ಮವ-ಇವ ನಮ್ಮವ” ಎನ್ನುವ ಮಾತು ಕ್ಷೇತ್ರದಲ್ಲಿ ಎಲ್ಲಾ ಹೋಬಳಿಗಳಲ್ಲೂ ಸಾಮಾನ್ಯವಾಗಿದೆ. ವರುಣಾ ಕ್ಷೇತ್ರದ ಜತೆಗೆ ಸಿದ್ದರಾಮಯ್ಯ ಮತ್ತು ಇವರ ಪುತ್ರ ಡಾ.ಯತೀಂದ್ರ ಅವರು ಕಳೆದ 40 ವರ್ಷಗಳಿಂದ ಹೊಂದಿರುವ ಒಡನಾಟ ಮತ್ತು ಭಾವನಾತ್ಮಕ ಬೆಸುಗೆ “ಇವ ನಮ್ಮವ” ಎನ್ನುವ ಭಾವನೆ ಆಳವಾಗಿ ಬೇರೂರಲು ಕಾರಣ ಎನ್ನುವ ಮಾತನ್ನು ಆ ಜಾತಿ-ಈ ಜಾತಿ ಎನ್ನದೆ 30 ವರ್ಷ ದಾಟಿದ ಯಾರನ್ನೇ ಕೇಳಿದರೂ ಹೇಳುತ್ತಾರೆ. ತಮ್ಮ ಬಾಳು ಬೆಳಗಿದ ವರುಣಾ ನಾಲೆಯಿಂದ ತಮ್ಮ ಜಮೀನುಗಳು ಕಂಗೊಳಿಸುತ್ತಿರುವುದರ ಕಡೆಗೆ ಲಿಂಗಾಯತ ಸಮುದಾಯದ ಯುವಕರು, ಹಿರಿಯರು ಬೊಟ್ಟು ಮಾಡುತ್ತಾ ಇದೆಲ್ಲಾ ಆಗಿದ್ದು ಸಿದ್ದರಾಮಯ್ಯ ಅವರಿಂದ ಎನ್ನುವ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ಈ ಕಾರಣಕ್ಕೆ ವಿ.ಸೋಮಣ್ಣ ಅವರ ಪರವಾದ ಅಭಿಪ್ರಾಯಗಳು ಲಿಂಗಾಯತ ಸಮುದಾಯದಲ್ಲಿ ಇದ್ದರೂ ಕೂಡ, ಅದು ಸಿದ್ದರಾಮಯ್ಯ ಅವರನ್ನು ವಿರೋಧಿಸುವ ಮಟ್ಟದ್ದಲ್ಲ. ಬಿಳಿಗೆರೆ, ಬೆಳಗುಂದ ಸೇರಿ ಹಲವು ಗ್ರಾಮಗಳ ಲಿಂಗಾಯತ ಮುಖಂಡರುಗಳು ಡಾ.ಯತೀಂದ್ರ ನೇತೃತ್ವದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೂ ಇದೇ ಕಾರಣಕ್ಕೆ. ಹೀಗಾಗಿ ಸಿದ್ದರಾಮಯ್ಯ ಅವರೂ ಲಿಂಗಾಯತ ಮತಗಳನ್ನು ಸಾಕಷ್ಟು ಪ್ರಮಾಣದಲ್ಲೇ ಪಡೆಯುತ್ತಾರೆ ಎನ್ನುವುದು ಸ್ಥಳೀಯ ಲಿಂಗಾಯತ ಮುಖಂಡರ ಮಾತಾಗಿದೆ.

ದಲಿತ ಮತ್ತು ಹಿಂದುಳಿದ ಮತಗಳ ಬ್ಯಾಂಕ್ ಇಲ್ಲಿ ನಿರ್ಣಾಯಕ. ಅಮಿತ್ ಶಾ, ಯಡಿಯೂರಪ್ಪ ಅವರು ಮಂಗಳವಾರ ಪ್ರಚಾರ ನಡೆಸಿದ ಹೊಸಕೋಟೆ ಮುಂತಾದ ಏರಿಯಾಗಳಲ್ಲಿ ಈಗಲೂ ಪ್ರತಿ ನೂರು ಮೀಟರ್‌ಗೆ ಒಂದರಂತೆ ಅಂಬೇಡ್ಕರ್ ಕಟೌಟ್‌ಗಳು ಎದೆ ಎತ್ತಿ ನಿಂತಿವೆ. ಅಮಿತ್ ಶಾ ಬಂದು ಹೋದ ಬಳಿಕ ಇಲ್ಲಿನ ಮತದಾರರನ್ನು ಮಾತಾಡಿಸಿದರೆ, “ಸಿದ್ದರಾಮಯ್ಯ ನಮ್ಮ ಹೆಮ್ಮೆ, ಸ್ವಾಭಿಮಾನದ ಸಂಕೇತ” ಎನ್ನುವ ಮಾತನ್ನೇ ಆಡುತ್ತಾರೆ. ಜತೆಗೆ ತಮ್ಮ ಊರಿನಲ್ಲಿರುವ ಸಮುದಾಯ ಭವನ, ಸರ್ಕಾರಿ ಮನೆಗಳು ಇತ್ಯಾದಿಗಳ ಕಡೆಗೆ ಬೊಟ್ಟು ಮಾಡಿ ಇದೆಲ್ಲಾ ಸಿದ್ದರಾಮಣ್ಣನ ಕಾಲ್ದಲ್ಲೇ ಆಗಿದ್ದು, ಡಾ.ಯತೀಂದ್ರ ಅವರು ಬಂದ ಮೇಲೆ ಇವೆಲ್ಲಾ ಆದವು ಎಂದು ಅಪ್ಪ-ಮಗನ ಹೆಸರು ಹೇಳುತ್ತಾರೆ.

ಡಾ.ಯತೀಂದ್ರ ಅವರು ಬೈಕ್‌ಗಳಲ್ಲೇ ನಮ್ಮ ಮನೆ ಬಾಗಿಲಿಗೆ ಬಂದು ಬಿಡ್ತಾರೆ, ಅವರು ಮಾತ್ರ ಕೈ ಬಾಯಿಗೆ ಸಿಗ್ತಾನೇ ಇರ್ತಾರೆ. ಮದ್ವೆ, ಮುಂಜಿ, ಆಸ್ಪತ್ರೆ, ತಿಥಿ, ಶಾಲಾ ಶುಲ್ಕ ಅಂತೆಲ್ಲಾ ಮನೆ ಬಾಗಿಲಿಗೆ ಹೋದರೆ ಬರಿಕೈಲಿ ವಾಪಾಸ್ ಕಳುಹಿಸಲ್ಲ ಎನ್ನುವ ಮಾತು ಇಲ್ಲಿನವರ ಬಾಯಲ್ಲಿ ಸಾಮಾನ್ಯ.

ಆದರೆ, ಹತ್ತು ದಿನಗಳ ಹಿಂದಕ್ಕೆ ಹೋಲಿಸಿದರೆ ಇಲ್ಲಿ ವಿ.ಸೋಮಣ್ಣರ ಪರಿಸ್ಥಿತಿ ಸುಧಾರಿಸಿದೆ. ಇದು ತನಗೆ ಎಚ್ಚರಿಕೆಯ ಗಂಟೆ ಎಂದು ಕಾಂಗ್ರೆಸ್ ಭಾವಿಸುತ್ತದಾ ಕಾದು ನೋಡಬೇಕು. 

ಕ್ಷೇತ್ರದಲ್ಲಿ ಎಲ್ಲೇ ಸುತ್ತಿದರೂ ಹಳದಿ, ನೀಲಿ ಬಾವುಟಗಳ ಜತೆಗೆ ಕಾಂಗ್ರೆಸ್ ಬಾವುಟಗಳು ಒಟ್ಟೊಟ್ಟಾಗಿ ಕಾಣಿಸುತ್ತವೆ. ಇದು ದಲಿತ-ಹಿಂದುಳಿದ ಜಾತಿ, ಸಮುದಾಯಗಳ ಮತಗಳು ಕಾಂಗ್ರೆಸ್ ಜತೆಗಿವೆ ಎನ್ನುವ ಸಂದೇಶ ಕೊಡುತ್ತವೆ.

ಆದರೆ, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡ್ ಗಳು ಇನ್ನೂ ಇಲ್ಲಿನ ಮನೆಗಳಿಗೆ ತಲುಪಿಲ್ಲ. ನೀಲಿ, ಹಳದಿ ಮತ್ತು ಕಾಂಗ್ರೆಸ್ ಬಾವುಟ ಹಿಡಿದ ಕೈಗಳಲ್ಲಿ ಪಕ್ಷದ ಗ್ಯಾರಂಟಿ ಕಾರ್ಡ್ ಗಳು, ಕಾಂಗ್ರೆಸ್ ಭರವಸೆ-ಸಾಧನೆಗಳ ಕರಪತ್ರ ಕಾಣುತ್ತಿಲ್ಲ.

ಡಬಲ್ ಎಂಜಿನ್ ಸರ್ಕಾರದ ಡೈಲಾಗ್ ಬಿಜೆಪಿಯವರ ಪ್ರಚಾರದಲ್ಲಿ ಜೋರಾಗಿ ಕಾಣುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಡಬಲ್ ವೈಫಲ್ಯಗಳನ್ನು ಮುಂದಿಟ್ಟು “ಬಿಜೆಪಿ ಏಕೆ ಸೋಲಬೇಕು” ಎಂದು ಮತದಾರರ ಜಗುಲಿಯಲ್ಲಿ, ಅರಳಿ ಮರದ ಕಟ್ಟೆಯಲ್ಲಿ, ಬಸ್ಟಾಂಡ್‌ಗಳಲ್ಲಿ ಜನರ ಜತೆ ಚರ್ಚಿಸುತ್ತಿರುವ ವಿದ್ಯಾರ್ಥಿಗಳು ತಂಡ ತಂಡವಾಗಿ ಇಡೀ ಕ್ಷೇತ್ರ ತುಂಬ ಓಡಾಡುತ್ತಿದ್ದಾರೆ. ಆದರೆ, ಈ ತಂಡಗಳ ಕೈಯಲ್ಲಿ ಕಾಂಗ್ರೆಸ್ ಕರಪತ್ರಗಳಿಲ್ಲ. ದೊಡ್ಡದಾದ ಬಿಜೆಪಿ ವೈಫಲ್ಯಗಳ ಪಟ್ಟಿ ಇದೆ. ನಾನಾ ಜನಪರ ಸಂಘಟನೆಗಳ, ವಿದ್ಯಾರ್ಥಿ ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಪಿಹೆಚ್‌ಡಿ ವಿದ್ಯಾರ್ಥಿಗಳ ತಂಡ ಇವರು ಎನ್ನುವುದು ಅವರನ್ನು ಮಾತಾಡಿಸಿದಾಗ ಗೊತ್ತಾಯಿತು.

ಹಾಗೆಯೇ, ತಿಪಟೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಗತಿಪರ ನಿಲುವಿನ ಯುವ ಕಾಂಗ್ರೆಸ್ ಮುಖಂಡ ಶಶಿಧರ್ ಅವರ 40 ಮಂದಿಯ ತಂಡ ಸದ್ದಿಲ್ಲದೆ ದೊಡ್ಡ ಮಟ್ಟದ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಚುನಾವಣಾ ವಾರ್ ರೂಮ್ ಕಣ್ಣು ತೆರೆಯುವುದಕ್ಕೆ ಆರು ತಿಂಗಳ ಮೊದಲೇ ತಿಪಟೂರಿನಲ್ಲಿ ವಾರ್ ರೂಮ್ ತೆರೆದು ಶಶಿಧರ್ ಕೆಲಸ ಶುರು ಮಾಡಿದ್ದರು. ಸುಮಾರು 25 ಸಾವಿರ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ ಖಜಾನೆಗೆ ತುಂಬಿಸಿದ್ದ ಶಶಿಧರ್ ತಮಗೆ ಟಿಕೆಟ್ ಸಿಗದಿದ್ದಾಗ ಅಷ್ಟೂ ಮತಗಳ ಬ್ಯಾಂಕನ್ನು ತಿಪಟೂರು ಕಾಂಗ್ರೆಸ್ ಅಭ್ಯರ್ಥಿ ಷಡಾಕ್ಷರಿ ಅವರ ಮಡಿಲಿಗೆ ಅರ್ಪಿಸಿ ತಮ್ಮ ನುರಿತ ಮತ್ತು ತರಬೇತಿ ಪಡೆದ ತಂಡದ ಜತೆಗೆ ವರುಣಾ ಕ್ಷೇತ್ರಕ್ಕೆ ಬಂದು ಸಿದ್ದರಾಮಯ್ಯ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ.

“ಸಿದ್ದರಾಮಯ್ಯ ಅವರು ನಿಜ ಶರಣ ಸರ್. ಸಿದ್ದರಾಮಯ್ಯ ಅವರ ನಡೆ, ನುಡಿಯಲ್ಲಿ ಬಸವಣ್ಣರ ಆಶಯಗಳು ಇವೆ” ಎನ್ನುವುದನ್ನು ನಾನು 20 ವರ್ಷಗಳಿಂದ ಗಮನಿಸಿದ್ದೇನೆ. ಈ ಕಾರಣಕ್ಕೆ ಇವರು ಗೆಲ್ಲಬೇಕು ಎಂದು ಬಯಸಿದ್ದೇನೆ"  ಎಂದು ಲಿಂಗಾಯತ ಸಮುದಾಯದ ಭರವಸೆಯ ಯುವ ನಾಯಕ ಶಶಿಧರ್ ಹೇಳುತ್ತಾರೆ.

ಹೀಗೆ ನಾನಾ ವಿಚಾರಧಾರೆಗಳ ವಿದ್ಯಾರ್ಥಿ ಸಂಘಟನೆಗಳು, ಕಾರ್ಯಕರ್ತರು, ರೈತ-ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರ ಪಡೆ ಹೆಚ್ಚು ಅರ್ಥಪೂರ್ಣವಾಗಿ, ಸಮರ್ಥವಾಗಿ ಬಿಜೆಪಿ ಸೋಲಿಸಲು, ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ನಾನಾ ಹಂತಗಳಲ್ಲಿ ಶ್ರಮಿಸುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ಚುನಾವಣೆಗೆ 5 ದಿನ ಬಾಕಿ ಇದೆ. ವಿ.ಸೋಮಣ್ಣ ಅವರು ಅಂತಿಮವಾಗಿ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆಗೆ ಜಾರಿದ್ದಾರೆ.

ಚಾಮರಾಜನಗರ ಅಥವಾ ವರುಣಾ. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಎರಡೂ ಕಡೆಗೆ ಹಣ ಹಂಚುವುದು, ಎರಡೂ ಕಡೆಯೂ ಓಡಾಡುವುದು ಅಸಾಧ್ಯದ ಕೆಲಸ ಎನ್ನುವುದು ಅವರೇ ಹೇಳಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇನ್ನೂ ಪೂರ್ಣಾವಧಿಯಾಗಿ ವರುಣಾಗೆ ಬಂದು ನಿಂತಿಲ್ಲ. ಇವರು ಬಂದು ನಿಂತ ಘಳಿಗೆಯಿಂದ ಈ ಕ್ಷಣದ ವರುಣಾದ ಚಿತ್ರಣ ತಲೆಕೆಳಗಾಗಬಹುದು. ಆ ಹೊತ್ತಿಗೆ ವಿ.ಸೋಮಣ್ಣ ಅವರು ಚಾಮರಾಜನಗರ ಕ್ಷೇತ್ರವೇ ತಮಗೆ ಸೇಫ್ ಎಂದು ಭಾವಿಸಬಹುದು. ಹಾಗಂತ, ಕಾಂಗ್ರೆಸ್ ಮೈ ಮರೆತರೆ “ಕೆರ‍್ಕೊಂಡು ಗಾಯ ಮಾಡಿಕೊಂಡಂತಾಗುತ್ತದೆ”.

Similar News