×
Ad

ಮಣಿಪುರ್:‌ ಮತ್ತೆ ಹಲವೆಡೆ ಹಿಂಸಾಚಾರ; ಸೇನೆಯಿಂದ ಪಥಸಂಚಲನ

Update: 2023-05-04 18:38 IST

ಇಂಫಾಲ್‌: ಪರಿಶಿಷ್ಟ ಪಂಗಡ ಸ್ಥಾನಮಾನ ಕುರಿತಂತೆ ಕೋರ್ಟ್‌ ಆದೇಶವೊಂದನ್ನು ವಿರೋಧಿಸಿ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಳೆದನಂತರ ಉಂಟಾಗಿರುವ ಗಲಭೆಗಳಿಂದ ಮಣಿಪುರ ನಲುಗಿ ಹೋಗಿದೆ. ಇಂದು ಗಲಭೆಪೀಡಿತ ಪ್ರದೇಶಗಳಲ್ಲಿ ಸೇನೆ ಫ್ಲ್ಯಾಗ್‌ ಮಾರ್ಚ್‌ ನಡೆಸಿದೆ. ಕಳೆದ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಫಾಲ್‌, ಚರಚಂದಪುರ್‌ ಮತ್ತು ಕಂಗ್‌ಪೊಕ್ಪಿ ಎಂಬಲ್ಲಿ ಗಲಭೆಗಳು ನಡೆದಿವೆ. ರಾಜ್ಯದಲ್ಲಿ ಮೊಬೈಲ್‌ ಇಂಟರ್ನೆಟ್‌ ಅನ್ನೂ ಸರ್ಕಾರ ಸ್ಥಗಿತಗೊಳಿಸಿದೆ.

ಇಂದು ಕೂಡ ಇಂಫಾಲ್‌ನ ಕೆಲ ಕಡೆಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ. ‌ಅರೆಸೇನಾಪಡೆಗಳ ಜೊತೆಗೆ ಸೇನಾಪಡೆಗಳನ್ನೂ ನಿಯೋಜಿಸಲಾಗಿದ್ದು. ಗಲಭೆಪೀಡಿತ ಪ್ರದೇಶಗಳಲ್ಲಿ ಸುಮಾರು 9000 ಜನರನ್ನು ರಕ್ಷಿಸಿ ಸೇನಾ ಶಿಬಿರಗಳು ಮತ್ತು ಸರ್ಕಾರಿ ಕಚೇರಿ ಆವರಣಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಬುಡಕಟ್ಟುಯೇತರ ಮೀಟೀಸ್ ಸಮುದಾಯವು ಬುಡಕಟ್ಟು ಪಂಗಡದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದರೆ ಅದನ್ನು ವಿರೋಧಿಸಿ ಚುರಾಚಂದಪುರ ಜಿಲ್ಲೆಯ ಟೋರ್ಬುಂಗ್ ಪ್ರದೇಶದಲ್ಲಿ ಅಖಿಲ ಮಣಿಪುರ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ (ಎಟಿಎಸ್‌ಯುಎಂ) ಕರೆಯಂತೆ ನಡೆದ ಬುಡಕಟ್ಟು ಐಕ್ಯಮತ್ಯ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಸಂದರ್ಭ ಬುಡಕಟ್ಟು ಸಮುದಾಯಗಳು ಹಾಗೂ ಬುಡಕಟ್ಟುಯೇತರ ಸಮುದಾಯಗಳ ಜನರ ನಡುವೆ ಘರ್ಷಣೆ ನಡೆದಿದೆ.

Similar News