×
Ad

ಉತ್ತರ ಪ್ರದೇಶದಲ್ಲಿ ಇನ್ನೊಬ್ಬ ಗ್ಯಾಂಗ್‌ಸ್ಟರ್‌ ಎನ್‌ಕೌಂಟರ್‌ನಲ್ಲಿ ಹತ್ಯೆ

Update: 2023-05-04 19:06 IST

ಮೀರತ್:‌ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಇನ್ನೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್‌ ನಡೆಸಿ ಹತ್ಯೆಗೈದಿದೆ. ನೊಯ್ಡಾ, ಗಾಝಿಯಾಬಾದ್ ಮತ್ತು ದಿಲ್ಲಿ ಪ್ರಾಂತ್ಯದಲ್ಲಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಗ್ಯಾಂಗ್‌ಸ್ಟಾರ್‌ ಅನಿಲ್‌ ದುಜನ ಎಂಬಾತನನ್ನು ಇಂದು ಮೀರತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ.

ಆತನ ವಿರುದ್ಧ 60ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಿದ್ದವು. ಒಂದು ವಾರದ ಹಿಂದೆಯಷ್ಟೇ ಆತ ಜಾಮೀನಿನ ಮೇಲೆ ಹೊರಬಂದಿದ್ದ. ನಂತರ  ಆತ ಆರೋಪಿಯಾಗಿದ್ದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬನಿಗೆ ಬೆದರಿಕೆಯೊಡ್ಡಲು ಆರಂಭಿಸಿದ್ದ ಹಾಗೂ ಆತನನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಮೂಲಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ ಆತನನ್ನು ಬಂಧಿಸಲು ನಿರ್ಧರಿಸಿತ್ತು. ಆದರೆ ಈ ವೇಳೆ ದುಜನ ಮತ್ತಾತನ ಗ್ಯಾಂಗ್‌ನ ಸದಸ್ಯರು ಪ್ರತಿರೋಧ ತೋರಿದ್ದು ಆಗ ನಡೆದ ಗುಂಡಿನ ಚಕಮಕಿ ಆತನ ಸಾವಿಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ಮೀರತ್‌ನ ಹಳ್ಳಿಯೊಂದರಲ್ಲಿ ಪೊದೆಗಳಿಂದ ಆವೃತವಾಗಿದ್ದ ಕಿರಿದಾದ ರಸ್ತೆಯೊಂದರಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಆತ ಮತ್ತಾತನ ಗ್ಯಾಂಗ್‌ ಸದಸ್ಯರು ಅಲ್ಲಿ ಅವಿತು ಅಲ್ಲಿಗೆ ಆಗಮಿಸಿದ ಎಸ್‌ಟಿಎಫ್‌ ಸಿಬ್ಬಂದಿಗಳತ್ತ ಗುಂಡು ಹಾರಿಸಿದಾಗ ಪೊಲೀಸ್‌ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ ತಿಂಗಳಿನಲ್ಲಿ ಬಿಎಸ್‌ಪಿ ನಾಯಕ ಉಮೇಶ್‌ ಪಾಲ್‌  ಹತ್ಯೆ ಪ್ರಕರಣದ ಸಾಕ್ಷಿಯನ್ನು ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಪುತ್ರ ಅಸದ್‌ ಅಹ್ಮದ್‌ ಸಾಯಿಸಿದ್ದರೆ, ಕಳೆದ ತಿಂಗಳು ಅಸದ್‌ನನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿತ್ತು. ಇದರ ಬೆನ್ನಲ್ಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅತೀಕ್‌ ಅಹ್ಮದ್‌ ಮತ್ತಾತನ ಸಹೋದರನ ಹತ್ಯೆ ನಡೆದಿತ್ತು.

Similar News