ಕೃತಕ ಬುದ್ಧಿಮತ್ತೆ ಚಾಲಿತ ವಂಚನೆಗಳಿಗೆ ಭಾರತ ಅಗ್ರ ಬಲಿಪಶು: ಹಣ ಕಳೆದುಕೊಳ್ಳುತ್ತಿರುವ ಶೇ.83ರಷ್ಟು ಭಾರತೀಯರು
ಹೊಸದಿಲ್ಲಿ,ಮೇ 4: ಕೃತಕ ಬುದ್ಧಿಮತ್ತೆ (AI) ಸಾಧನಗಳ ಹೆಚ್ಚುತ್ತಿರುವ ಬಳಕೆ ಮತ್ತು ಸ್ವೀಕೃತಿಯು ಚಿತ್ರಗಳು, ವೀಡಿಯೊಗಳು, ಪರಿಚಿತರು ಮತ್ತು ಸಂಬಂಧಿಕರ ಧ್ವನಿಗಳಲ್ಲಿ ಕೈವಾಡವನ್ನು ಸರಳವಾಗಿಸಿದೆ. ಸೈಬರ್ ದಾಳಿಕೋರರು ಜನರನ್ನು ವಂಚಿಸಲು ಎಐ ಆಧಾರಿತ ಧ್ವನಿ ತಂತ್ರಜ್ಞಾನವನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚಿಗೆ ಹೊರಬಿದ್ದಿದೆ. ಭಾರತವು ಅತ್ಯಂತ ಹೆಚ್ಚಿನ ಬಲಿಪಶುಗಳನ್ನು ಹೊಂದಿರುವ ದೇಶವಾಗಿದೆ ಮತ್ತು ಶೇ.83ರಷ್ಟು ಭಾರತೀಯರು ಇಂತಹ ವಂಚನೆಗಳಿಂದಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಸೂಚಿಸಿದೆ ಎಂದು livemint.com ವರದಿ ಮಾಡಿದೆ.
ವಂಚಕರು ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರ ಧ್ವನಿಯನ್ನು ಅನುಕರಿಸಲು ಕೃತಕ ಬುದ್ದಿಮತ್ತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಗಣನೀಯ ಸಂಖ್ಯೆಯ ಭಾರತೀಯರು ಇಂತಹ ವಂಚನೆಗಳ ಬಲಿಪಶುಗಳಾಗುತ್ತಿದ್ದಾರೆ. ಬಹುಪಾಲು ಭಾರತೀಯರಿಗೆ (ಶೇ.69) ನಿಜವಾದ ಮಾನವ ಧ್ವನಿ ಮತ್ತು ಎಐ-ಉತ್ಪಾದಿತ ಧ್ವನಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಮೆಕ್ಫೀ ವರದಿಯು ತಿಳಿಸಿದೆ.
ಇದಲ್ಲದೆ ,‘ದಿ ಆರ್ಟಿಫಿಷಿಯಲ್ ಇಂಪೋರ್ಟರ್ ’ ಎಂಬ ಶೀರ್ಷಿಕೆಯ ವರದಿಯಂತೆ ಸುಮಾರು ಅರ್ಧದಷ್ಟು (ಶೇ.47) ಭಾರತೀಯ ವಯಸ್ಕರು ಸ್ವತಃ ಇಂತಹ ವಂಚನೆಗಳಿಗೆ ಬಲಿಯಾಗಿದ್ದಾರೆ ಅಥವಾ ಬಲಿಯಾದವರ ಬಗ್ಗೆ ತಿಳಿದಿದ್ದಾರೆ. ಈ ಶೇಕಡಾವಾರು ಜಾಗತಿಕ ಸರಾಸರಿ (ಶೇ.25)ಗಿಂತ ಸರಿಸುಮಾರು ದುಪ್ಪಟ್ಟಾಗಿದೆ.
ಎಐ ತಂತ್ರಜ್ಞಾನವು ಆನ್ಲೈನ್ ಧ್ವನಿ ವಂಚನೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ವ್ಯಕ್ತಿಯೋರ್ವನ ಧ್ವನಿಯ ತದ್ರೂಪಿಯನ್ನು ಸೃಷ್ಟಿಸಲು ಕೇವಲ ಮೂರು ಸೆಕೆಂಡ್ಗಳ ಆಡಿಯೋ ಸಾಕು. ಭಾರತ ಸೇರಿದಂತೆ ಏಳು ದೇಶಗಳ 7,054 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು ಎಂದು ವರದಿಯು ಒತ್ತಿ ಹೇಳಿದೆ.
ಶೇ.83ರಷ್ಟು ಭಾರತೀಯರು ಎಐ ಧ್ವನಿ ವಂಚನೆಗಳಿಗೆ ಗುರಿಯಾಗಿ ಹಣವನ್ನು ಕಳೆದುಕೊಂಡಿದ್ದು,ಅವರ ಪೈಕಿ ಶೇ.48ರಷ್ಟು ಜನರು 50,000 ರೂ.ಗೂ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ ಎನ್ನುವುದನ್ನು ಮೆಕ್ಫೀ ಅಧ್ಯಯನವು ಕಂಡುಕೊಂಡಿದೆ.
ಎಐ ಅಗಾಧವಾದ ಸಾಧ್ಯತೆಗಳನ್ನು ಒದಗಿಸುತ್ತಿದೆಯಾದರೂ ತಮ್ಮ ದುರುದ್ದೇಶಪೂರಿತ ಕೃತ್ಯಗಳಿಗಾಗಿ ಸೈಬರ್ ಅಪರಾಧಿಗಳನ್ನು ಅದನ್ನು ಬಳಸಿಕೊಳ್ಳಬಹುದು. ಎಐ ಸಾಧನಗಳ ಸರಳತೆ ಮತ್ತು ಲಭ್ಯತೆಯು ವಂಚನೆಗಳನ್ನು ಸುಲಭವಾಗಿಸಿದೆ ಎನ್ನುತ್ತಾರೆ ಮೆಕ್ಫೀಯ ಸಿಟಿಒ ಸ್ಟೀವ್ ಗ್ರಾಬ್ಮನ್.
ಪ್ರತಿಯೋರ್ವ ವ್ಯಕ್ತಿಯ ಧ್ವನಿಯು ವಿಶಿಷ್ಟವಾಗಿರುವುದರಿಂದ ವಿಶ್ವಾಸಾರ್ಹತೆಯ ಸಾಬೀತಿಗಾಗಿ ಅದನ್ನು ಬಯೊಮೆಟ್ರಿಕ್ ಬೆರಳಚ್ಚು ಎಂದು ಪರಿಗಣಿಸಬಹುದಾಗಿದೆ. ಆದರೆ ಶೇ.86ರಷ್ಟು ವಯಸ್ಕ ಭಾರತೀಯರು ಕನಿಷ್ಠ ವಾರಕ್ಕೊಮ್ಮೆಯಾದರೂ ಆನ್ಲೈನ್ನಲ್ಲಿ ಅಥವಾ ರೆಕಾರ್ಡ್ ಮಾಡಿದ ಟಿಪ್ಪಣಿಗಳ ಮೂಲಕ (ಸಾಮಾಜಿಕ ಮಾಧ್ಯಮಗಳು,ಧ್ವನಿ ಟಿಪ್ಪಣಿಗಳು ಇತ್ಯಾದಿಗಳಲ್ಲಿ) ತಮ್ಮ ಧ್ವನಿ ಡೇಟಾವನ್ನು ಹಂಚಿಕೊಳ್ಳುವ ಪ್ರಚಲಿತ ಅಭ್ಯಾಸವು ಧ್ವನಿ ತದ್ರೂಪಿ ಸೃಷ್ಟಿಯನ್ನು ಸೈಬರ್ ಅಪರಾಧಿಗಳ ಪಾಲಿಗೆ ಪ್ರಬಲ ಅಸ್ತ್ರವನ್ನಾಗಿಸಿದೆ.
ಮೆಕ್ಫೀ ಪ್ರಕಾರ ಭಾರತೀಯ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಬಹುಪಾಲು (ಶೇ.66) ಜನರು ಹಣದ ತುರ್ತು ಅಗತ್ಯವಿರುವ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ವಾಯ್ಸ್ಮೇಲ್ ಅಥವಾ ವಾಯ್ಸ್ನೋಟ್ಗೆ ತಾವು ಪ್ರತಿಕ್ರಿಯಿಸುವುದಾಗಿ ಒಪ್ಪಿಕೊಂಡಿದ್ದಾರೆ.
ಡೀಪ್ಫೇಕ್ಗಳು (ಚಿತ್ರಗಳು ಅಥವಾ ವೀಡಿಯೊಗಳ ತಿರುಚುವಿಕೆ) ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಯು ಆನ್ಲೈನ್ನಲ್ಲಿಯ ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಮಾಡಿದೆ. ಶೇ.27ರಷ್ಟು ಭಾರತೀಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಮತ್ತು ಶೇ.43ರಷ್ಟು ಜನರು ಸುಳ್ಳುಮಾಹಿತಿಗಳ ಪ್ರಸರಣ ಹೆಚ್ಚುತ್ತಿರುವ ಬಗ್ಗೆ ಆತಂಕವನ್ನು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.