ಪೊಲೀಸರ ದೌರ್ಜನ್ಯದಿಂದ ನೊಂದ ಕುಸ್ತಿಪಟುಗಳಿಂದ ಪದಕಗಳು, ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುವ ಬೆದರಿಕೆ
ಹೊಸದಿಲ್ಲಿ,ಮೇ 4: ದಿಲ್ಲಿ ಪೊಲೀಸರ ದೌರ್ಜನ್ಯದಿಂದ ಮನ ನೊಂದಿರುವ ಪ್ರತಿಭಟನಾನಿರತ ಕುಸ್ತಿಪಟುಗಳು ತಾವು ಗೆದ್ದಿರುವ ಪದಕಗಳು ಮತ್ತು ಪದ್ಮಶ್ರೀ ಸೇರಿದಂತೆ ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದಾರೆ. ತಾವು ಇಂತಹ ಅವಮಾನವನ್ನು ಸಹಿಸಿಕೊಳ್ಳಬೇಕಿದ್ದರೆ ಈ ಗೌರವಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದ್ದಾರೆ.
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಕುಸ್ತಿಪಟುಗಳು ಮಲಗಲು ಹಾಸಿಗೆಗಳನ್ನು ತರುತ್ತಿದ್ದಾಗ ಗಲಾಟೆಯು ಆರಂಭಗೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ಅಂತಹ ವಸ್ತುಗಳನ್ನು ತರಲು ನಿಯಮಗಳು ಅನುಮತಿಸುವುದಿಲ್ಲವಾದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸರು ಆ ಬಗ್ಗೆ ಪ್ರಶ್ನಿಸಿದ್ದರು.
ಪುರುಷ ಪೊಲೀಸ್ ಅಧಿಕಾರಿಗಳು ತಮ್ಮನ್ನು ನಿಂದಿಸಿದರು ಮತ್ತು ತಳ್ಳಿದ್ದರು,ಇದರಿಂದಾಗಿ ತಾವು ಕಣ್ಣೀರು ಹಾಕುವಂತಾಯಿತು ಎಂದು ವಿನೇಶ ಫೋಗಟ್ ಮತ್ತು ಸಾಕ್ಷಿ ಮಲಿಕ್ ತಿಳಿಸಿದರು. ಗಲಾಟೆಯಲ್ಲಿ ಸಂಗೀತಾ ಫೋಗಟ್ ಅವರ ಸೋದರ ದುಷ್ಯಂತ ಸೇರಿದಂತೆ ಇಬ್ಬರು ಕುಸ್ತಿಪಟುಗಳು ಗಾಯಗೊಂಡಿದ್ದಾರೆ.
‘ಕುಸ್ತಿಪಟುಗಳನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವುದಾದರೆ ಈ ಪದಕಗಳನ್ನಿಟ್ಟುಕೊಂಡು ನಾವೇನು ಮಾಡುವುದು? ಅದಕ್ಕಿಂತ ನಾವು ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಹಾಗೂ ಎಲ್ಲ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರಕಾರಕ್ಕೆ ಮರಳಿಸುತ್ತೇವೆ ’ಎಂದು ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ ಪುನಿಯಾ ತಿಳಿಸಿದರು.
ವಿನೇಶ,ಸಾಕ್ಷಿ ಮತ್ತು ಪುನಿಯಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನಕ್ಕೆ ಭಾಜನರಾಗಿದ್ದರೆ,ಸಾಕ್ಷಿ (2017) ಮತ್ತು ಪುನಿಯಾ (2019) ಅವರು ಪದ್ಮಶ್ರೀ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
‘ಪೊಲೀಸರು ನಮ್ಮನ್ನು ತಳ್ಳಾಡುವಾಗ,ನಿಂದಿಸುವಾಗ,ನಮ್ಮಾಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾಗ ನಾವು ಪದ್ಮಶ್ರೀ ಪುರಸ್ಕೃತರು ಎನ್ನುವುದನ್ನು ಅವರು ನೋಡಿರಲಿಲ್ಲ. ಅವರು ನಮ್ಮಾಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ಪುತ್ರಿಯರು ಬೀದಿಗಳಲ್ಲಿ ಕುಳಿತು ಕರುಣೆಗಾಗಿ ಬೇಡುತ್ತಿದ್ದಾರೆ,ಆದರೆ ಅವರಿಗೆ ನ್ಯಾಯವನ್ನೊದಗಿಸಲು ಯಾರೂ ತಲೆ ಕೆಡಿಸಿಕೊಂಡಿಲ್ಲ ’ಎಂದು ಪುನಿಯಾ ಹೇಳಿದರು.
ಓರ್ವ ಅಪ್ರಾಪ್ತ ವಯಸ್ಕೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳಗಳನ್ನು ನೀಡಿದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲುಎಫ್ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ ಸಿಂಗ್ ಅವರ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಎ.23ರಿಂದ ಇಲ್ಲಿಯ ಜಂತರ್ ಮಂತರ್ನಲ್ಲಿ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದ್ದಾರೆ. ವಿಷಯವು ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ಬ್ರಿಜ್ಭೂಷಣ ವಿರುದ್ಧ ದಿಲ್ಲಿ ಪೊಲೀಸರು ಈಗಾಗಲೇ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಬ್ರಿಜ್ಭೂಷಣ,ಕುಸ್ತಿಪಟುಗಳ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕುಸಿಪಟುಗಳಿಗಾಗಿ ಮಡಚುವ ಹಾಸಿಗೆಗಳನ್ನು ಆಪ್ ನಾಯಕ ಸೋಮನಾಥ ಭಾರ್ತಿ ತಂದಿದ್ದರು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
‘ಹಾಸಿಗೆಗಳಿಗಾಗಿ ನಾವು ಆರ್ಡರ್ ಮಾಡಿದ್ದೆವು,ಸೋಮನಾಥ ಭಾರ್ತಿಯಲ್ಲ. ಅವರು ಹಾಸಿಗೆಗಳನ್ನು ತಂದಿದ್ದರು ಎಂದೇ ಇಟ್ಟುಕೊಳ್ಳೋಣ,ನಮಗೆ ಮಲಗುವ ಹಕ್ಕೂ ಇಲ್ಲವೇ? ಹಾಸಿಗೆಗಳನ್ನು ತರುವ ಮೂಲಕ ನಾವು ಅಪರಾಧವನ್ನು ಮಾಡಿದ್ದೇವೆಯೇ? ಅದರಲ್ಲಿ ಬಾಂಬ್ ಅಥವಾ ಶಸ್ತ್ರಗಳಿದ್ದವೇ? ದಿಲ್ಲಿ ಪೊಲೀಸರ ವರ್ತನೆಯು ತುಂಬ ಆಕ್ರಮಣಕಾರಿಯಾಗಿತ್ತು ’ಎಂದು ವಿನೇಶ ಹೇಳಿದರು.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರೂ ಗುರುವಾರ ಕುಸ್ತಿಪಟುಗಳೊಂದಿಗೆ ಪ್ರತಿಭಟನೆಗೆ ಕುಳಿತಿದ್ದರು.