ಉಗ್ರರೊಂದಿಗಿನ ಕಾಳಗದಲ್ಲಿ ಐವರು ಯೋಧರು ಮೃತ: ಸಂತಾಪ ಸೂಚಿಸದ ಮೋದಿ, ಅಮಿತ್‌ ಶಾ

'ಪಕ್ಷದ ಪ್ರಚಾರದಲ್ಲಿ ನಿರತರಾಗಿ ದೇಶದ ಆಡಳಿತ ಮರೆತಿದ್ದಾರೆ': ಪ್ರಧಾನಿ, ಗೃಹಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2023-05-06 09:33 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಕಾಂಡಿ ಕೊಟ್ರಂಕಾ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದರಕರೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಐವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದ ಘಟನೆ ಶುಕ್ರವಾರ ನಡೆದಿದೆ. ಆದರೆ, ಈವರೆಗೂ ಸೇನಾ ಸಿಬ್ಬಂದಿಗಳ ಸಾವಿಗೆ  ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ಸರ್ಕಾರದ ಉನ್ನತ ನಾಯಕರು ಯಾವುದೇ ಸಂತಾಪ ಟ್ವೀಟ್‌ ಹಾಕಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ರಾಜೌರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿಶೇಷ ಪಡೆಗಳ ಐವರು ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಸ್ಮೃತಿ ಇರಾನಿ, ಜೆಪಿ ನಡ್ಡಾ ಯಾವುದೇ ಟ್ವೀಟ್‌ ಹಾಕಿಲ್ಲ ಎಂದು Alt News ಸಹ ಸಂಸ್ಥಾಪಕ ಮಹಮ್ಮದ್‌ ಝುಬೈರ್‌ ಟ್ವೀಟ್‌ ಮಾಡಿ ಟೀಕಿಸಿದ್ದಾರೆ. 

ಅದೇ ವೇಳೆ, ಪ್ರಧಾನಿ ಮೋದಿ ಅವರು ಕರ್ನಾಟಕ ಚುನಾವಣೆ ಬಗ್ಗೆ 33(18+15) ಟ್ವೀಟ್ ಮಾಡಿದ್ದಾರೆ. ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ 5 ಟ್ವೀಟ್ ಗಳನ್ನು ಮರು ಟ್ವೀಟ್ ಮಾಡಿದ್ದಾರೆ ಎಂದು ಝುಬೈರ್ ತಿಳಿಸಿದ್ದಾರೆ. ಇನ್ನು, ಸ್ಮೃತಿ ಇರಾನಿ ಅವರು ಕರ್ನಾಟಕ ಚುನಾವಣೆ ಕುರಿತ 14 ಟ್ವೀಟ್ ಗಳನ್ನು ರಿಟ್ವೀಟ್ ಮಾಡಿದ್ದಾರೆ. ಜೆಪಿ ನಡ್ಡಾ ಅವರು 20 ಕ್ಕೂ ಹೆಚ್ಚು ಟ್ವೀಟ್, ರೀಟ್ವೀಟ್ ಗಳನ್ನು ಮಾಡಿದ್ದಾರೆ.

ಈ ಎಲ್ಲಾ ನಾಯಕರ ಟ್ವಿಟರ್‌ ಖಾತೆಗಳ ಸ್ಕ್ರೀನ್‌ ರೆಕಾರ್ಡ್‌ ವಿಡಿಯೋ ಕೂಡಾ ಹಂಚಿಕೊಂಡಿರುವ ಝುಬೈರ್‌, ಯಾವುದೇ ಸಂತಾಪದ ಟ್ವೀಟ್‌ ಹಾಕಿಲ್ಲ ಎನ್ನುವ ತಮ್ಮ ಟೀಕೆಗೆ ಪುರಾವೆಯನ್ನು ನೀಡಿದ್ದಾರೆ. 

ಅದೇ ವೇಳೆ, ರಾಜೌರಿ ಸೆಕ್ಟರ್‌ನಲ್ಲಿ ಹುತಾತ್ಮರಾದ ಸೈನಿಕರ ಕುರಿತು ವಿರೋಧ ಪಕ್ಷದ ನಾಯಕರ ಕೆಲವು ಸಂತಾಪ ಟ್ವೀಟ್‌ಗಳು ಎಂದು ಪ್ರಿಯಾಂಕಾ ಗಾಂಧಿ, ಅರವಿಂದ ಕೇಜ್ರಿವಾಲ್‌, ರಾಹುಲ್‌ ಗಾಂಧಿ, ಹಿಮಾಚಲ ಸಿಎಂ (ಸುಖ್ವಿಂದರ್ ಸಿಂಗ್ ಸುಖು) ಮೊದಲಾದವರು ಹಾಕಿರುವ ಸಂತಾಪದ ಟ್ವೀಟ್‌ ಗಳ ಸ್ಕ್ರೀನ್‌ ಶಾಟ್‌ ಅನ್ನು ಝುಬೈರ್‌ ಹಂಚಿಕೊಂಡಿದ್ದಾರೆ. 

ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಷ್ಟ್ರೀಯ ಮಾಧ್ಯಮ ವಕ್ತಾರ ಪ್ರಶಾಂತ್‌ ಪ್ರತಾಪ್‌ ಸಿಂಗ್‌, “ಇದು ಮೊದಲ ಬಾರಿ ಅಲ್ಲ” ಎಂದು ಹೇಳಿದ್ದಾರೆ. 

“ಇದು ಮೊದಲ ಬಾರಿ ಅಲ್ಲ. 2023 ರ ಏಪ್ರಿಲ್ 20 ರಂದು 5 RR ಯೂನಿಟ್ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಾಗ ಪ್ರಧಾನಿ ಸಂತಾಪ ಸೂಚಿಸುವುದನ್ನು ತಪ್ಪಿಸಿಕೊಂಡಿದ್ದಾರೆ. ಕೇವಲ 15 ದಿನಗಳಲ್ಲಿ ಎರಡನೇ ಉಗ್ರರ ದಾಳಿ ಆಗಿದೆ, ಅದೂ, ಪಾಕಿಸ್ತಸಾನ ವಿದೇಶಾಂಗ ಸಚಿವರು ಭಾರತಕೆ ಭೇಟಿ ನೀಡುತ್ತಿರುವ ವೇಳೆಯಲ್ಲೇ. ಮೋದಿ ಆಡಳಿತದಲ್ಲಿ ಭಾರತೀಯ ಸೈನಿಕರ ಸಾವಿನ ಸಂಖ್ಯೆ ದ್ವಿಗುಣಗೊಂಡಿದೆ. ಅದಾಗ್ಯೂ, 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಪುಲ್ವಾಮಾ ದಾಳಿಯ ಹುತಾತ್ಮರ ಹೆಸರಿನಲ್ಲಿ ಮತ ಕೇಳುವ ಅವಕಾಶವನ್ನು ಪ್ರಧಾನಿ ಬಿಟ್ಟಿಲ್ಲ.” ಎಂದು ಪ್ರಶಾಂತ್‌ ಪ್ರತಾಪ್‌ ಟ್ವೀಟ್‌ ಮಾಡಿದ್ದಾರೆ. 

"ಆರ್ಟಿಕಲ್ 370 ರದ್ದತಿಯಿಂದ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ" ಎಂಬ ನಿರೂಪಣೆಯು ವಿಫಲವಾಗುತ್ತದೆ, ಹಾಗಾಗಿ ಸೈನಿಕರ ಸಾವಿಗೆ ಸಂತಾಪ ಸೂಚಿಸುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

Similar News