×
Ad

ಮಣಿಪುರ: ಮತ್ತೆ ಹಿಂಸಾಚಾರ; ಗುಂಡೇಟಿಗೆ ನಾಲ್ವರು ಬಲಿ

Update: 2023-05-06 14:14 IST

ಇಂಫಾಲ್‌ : ಮಣಿಪುರದಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಭದ್ರತಾ ಪಡೆಯಗಳು ಚುರಚಂದಪುರ ಎಂಬಲ್ಲಿ ಮೀಟೀ ಸಮುದಾಯಗಳ ಜನರ ತೆರವು ಕಾರ್ಯಾಚರಣೆ ನಡೆಸುತ್ತಿರುವ ವೇಳೆಗೆ ನಾಲ್ಕು ಜನರನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು indianexpress ವರದಿ ಮಾಡಿದೆ.

ಮೃತರಲ್ಲಿ ತೆರಿಗೆ ಸಹಾಯಕರಾದ ಲೆಟ್ಮಿಂಥಂಗ್‌ ಹಾವೊಕಿಪ್‌ ಎಂಬವರೂ ಸೇರಿದ್ದಾರೆ ಎಂದು ಐಆರ್‌ಎಸ್‌ ಅಸೋಸಿಯೇಶನ್‌ ಮಾಹಿತಿ ನೀಡಿದೆಯಲ್ಲದೆ ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಹತ್ಯೆಯನ್ನು ಯಾವುದೇ ಉದ್ದೇಶ ಅಥವಾ ಸಿದ್ಧಾಂತ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರಾಜ್ಯದ ಬಹುಸಂಖ್ಯಾತ ಮೀಟೀ ಸಮುದಾಯ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಘರ್ಷಣೆಗಳು ಸಂಭವಿಸಿದೆ. ಬುಧವಾರದಿಂದ ಉದ್ವಿಗ್ನ ಸ್ಥಿತಿಯಲ್ಲಿದ್ದ ರಾಜ್ಯದಲ್ಲಿ ಪರಿಸ್ಥಿತಿ ಇನ್ನೇನು ಹತೋಟಿಗೆ ಬಂದಿದೆ ಎಂದು ಹೇಳಲಾಗುತ್ತಿರುವ ಸಂದರ್ಭವೇ ಮತ್ತೆ ನಾಲ್ವರು ಬಲಿಯಾಗಿರುವುದು ಸಾಕಷ್ಟು ಭೀತಿಯ ವಾತಾವರಣ ಸೃಷ್ಟಿಸಿದೆ.

ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಕುಕಿಗಳು ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದರೆ,  ಬುಡಕಟ್ಟು ಜನರು ಅಧಿಕವಾಗಿರುವ ಸ್ಥಳಗಳಲ್ಲಿ ಮೀಟೀಗಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆ.

ಚುರಚಂದಪುರದಲ್ಲಿ ಮೀಟೀಗಳ ತೆರವು ಕಾರ್ಯಾಚರಣೆಗೆ ಬುಡಕಟ್ಟು ಸಮುದಾಯದವರು ಅಡ್ಡಿಪಡಿಸಿದಾಗ ಗುಂಡು ಹಾರಾಟ ನಡೆದಿದೆ.

ಪಟ್ಟಣದ ಮುಖ್ಯ ರಸ್ತೆಯಾದ ಟಿಡಿಮ್‌ ರೋಡ್‌ ಎಂಬಲ್ಲಿ ನೂರಾರು ಜನರು ತೆರವು ಕಾರ್ಯಾಚರಣೆಗೆ ವಿರೋಧಿಸಿ ಅಡ್ಡಿ ಪಡಿಸಿದ್ದರು. ರಕ್ಷಣಾ ಪಡೆಗಳು ಗುಂಡು ಹಾರಿಸದಂತೆ ಮಾಡಲು ಎದುರಿಗೆ ಮಹಿಳೆಯರನ್ನೂ ನಿಲ್ಲಿಸಲಾಗಿತ್ತು ಆದರೂ ಗುಂಡು ಹಾರಾಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಗ್ರಾಮವೊಂದರಲ್ಲಿ ಕೆಲ ಜನರು ಬೆಂಕಿಹಚ್ಚಲು ಯತ್ನಿಸುತ್ತಿರುವುದನ್ನು ತಡೆದ ರಜೆ ಮೇಲಿದ್ದ ಸಿಆರ್‌ಪಿಎಫ್‌ ಕಾನ್‌ಸ್ಟೇಬಲ್‌ ಒಬ್ಬರನ್ನು  ಗುಂಡಿಕ್ಕಿ ಸಾಯಿಸಿದ ಘಟನೆಯ ಬೆನ್ನಲ್ಲೇ ಈಗ ಮತ್ತೆ ನಾಲ್ಕು ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ.

Similar News