ಮಣಿಪುರ ಹಿಂಸಾಚಾರಕ್ಕೆ 54 ಸಾವು; ಹಿಂಸಾಪೀಡಿತ ಪ್ರದೇಶಗಳು ಸಂಪೂರ್ಣ ಸೇನೆಯ ನಿಯಂತ್ರಣದಲ್ಲಿ

ಮಣಿಪುರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಕೇಂದ್ರ

Update: 2023-05-06 11:19 GMT

ಇಂಫಾಲ್‌: ಮಣಿಪುರದ (Manipur) ಮೀಟಿ ಸಮುದಾಯ ಮತ್ತು ಬುಡಕಟ್ಟು ಕುಕಿ ಸಮುದಾಯಗಳ ಜನರ ನಡುವೆ ಬುಧವಾರದಿಂದ ನಡೆಯುತ್ತಿರುವ ಘರ್ಷಣೆಗಳು ಹಾಗೂ ವ್ಯಾಪಕ ಹಿಂಸಾಚಾರದಲ್ಲಿ ಇಲ್ಲಿಯ ತನಕ ಮೃತಪಟ್ಟವರ ಸಂಖ್ಯೆ 54 ಎಂದು ಅಧಿಕಾರಿಗಳು ತಿಳಿಸಿದ್ದರೂ ವಾಸ್ತವದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರಬಹುದೆಂಬ  ಶಂಕಿಸಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ಹಾಗೂ ಶಸ್ತ್ರಸಜ್ಜಿತ ಗುಂಪುಗಳಿಂದ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 355 ಅನ್ವಯ ರಾಜ್ಯದ ಸುರಕ್ಷತೆಯ ಜವಾಬ್ದಾರಿಯ್ನು ಶುಕ್ರವಾರ ಸಂಜೆಯಿಂದ ಕೇಂದ್ರ ಸರಕಾರವೇ ವಹಿಸಿಕೊಂಡಿದೆ. ಈ ಕ್ರಮದಿಂದ ಕೇಂದ್ರ ಸರಕಾರಕ್ಕೆ ಆಂತರಿಕ ಸಮಸ್ಯೆ ಹಾಗೂ ಬಾಹ್ಯ ಆಕ್ರಮಣವನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳುವ ಅಧಿಕಾರ ದೊರೆಯುತ್ತದೆ.

ರಾಜ್ಯದ ಚುರಚಂದಪುರ್‌ನಲ್ಲಿ ಶುಕ್ರವಾರ ಸಂಜೆ ಭದ್ರತಾ ಪಡೆಗಳು ಮೀಟಿ ಸಮುದಾಯದವರ ತೆರವು ಕಾರ್ಯಾಚರಣೆ ನಡೆಸುತ್ತಿರುವ ವೇಳೆ  ನಾಲ್ಕು ಜನರನ್ನು ಗುಂಡಿಟ್ಟು ಸಾಯಿಸಲಾದ ಘಟನೆ ನಡೆದಿದೆ.

ಶನಿವಾರ ಬೆಳಿಗ್ಗೆ ರಾಜ್ಯದಲ್ಲಿ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವಂತೆ ಕಂಡುಬಂದಿದ್ದು ಕೆಲವೆಡೆ ಅಂಗಡಿ ಹಾಗೂ ಮಾರುಕಟ್ಟೆಗಳು ತೆರೆದಿವೆ ಹಾಗೂ ವಾಹನಗಳ ಓಡಾಟವೂ ಕಂಡುಬಂದಿದೆ.

ಎಲ್ಲಾ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಜನರು ಅಂಗಡಿಗಳಿಗೆ ಬಂದು ಅಗತ್ಯ ಸಾಮಾನುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.

ಶುಕ್ರವಾರ ರಾತ್ರಿ ಚುರಚಂದಪುರ್‌ ಜಿಲ್ಲೆಯಲ್ಲಿ ನಡೆದ ಏರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐದು ಮಂದಿ ಗುಡ್ಡಗಾಡು ಪ್ರದೇಶದ ತೀವ್ರಗಾಮಿಗಳು ಹತರಾದರೆ ಇಂಡಿಯಾ ರಿಸರ್ವ್‌ ಬೆಟಾಲಿಯನ್‌ನ ಇಬ್ಬರು ಜವಾನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ತೊರ್ಬುಂಗ್‌ ಎಂಬಲ್ಲಿ ತೀವ್ರಗಾಮಿಗಳು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಜವಾನರು ಪ್ರತಿ ಗುಂಡು ಹಾರಿಸಿದಾಗ ಒಬ್ಬ ತೀವ್ರಗಾಮಿ ಮೃತಪಟ್ಟು ಇಬ್ಬರು ಜವಾನರು ಗಾಯಗೊಂಡಿದ್ದಾರೆ.

ಇಲ್ಲಿಯ ತನಕ 13,000 ಜನರನ್ನು ರಕ್ಷಿಸಿ ಸುರಕ್ಷಿತ ತಾಣಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಸೇನೆಯು ಚುರಚಂದಪುರ್‌, ಮೊರೆಹ್‌, ಕಚ್ಕಿಂಗ್‌ ಮತ್ತು ಕಂಗ್ಕೊಕ್ಪಿ ಜಿಲ್ಲೆಗಳನ್ನು ತನ್ನ ನಿಯಂತ್ರಣಕ್ಕೆ ತಂದಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಜೊತೆಗೆ ಎರಡು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹಿಂಸೆಯನ್ನು ಹತ್ತಿಕ್ಕಲು ಹೆಚ್ಚುವರಿ ಡಿಜಿಪಿ (ಗುಪ್ತಚರ) ಅಶುತೋಷ್‌ ಸಿನ್ಹಾ ಅವರನ್ನು ಆಪರೇಷನಲ್‌ ಕಮಾಂಡರ್‌ ಆಗಿ ನೇಮಿಸಲಾಗಿದೆ.

ಇದನ್ನೂ ಓದಿ: ಹಿಂಸಾಪೀಡಿತ ಮಣಿಪುರದಿಂದ ಅಸ್ಸಾಂಗೆ ವಲಸೆ ಹೋದ 1,000ಕ್ಕೂ ಅಧಿಕ ಮಂದಿ

Similar News