ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ: ಆರತಿ ಕೃಷ್ಣ
ಉಡುಪಿ, ಮೇ 6: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಅನಿವಾಸಿ ಕನ್ನಡಿಗರ ಸಂಪೂರ್ಣ ವ್ಯವಹಾರ ನೋಡಿಕೊಳ್ಳಲು ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾ ಲಯ ವೊಂದನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ ಎಂದು ಕೆಪಿಸಿಸಿ ಎನ್‌ಆರ್‌ಐ ಘಟಕದ ಕಾರ್ಯದರ್ಶಿ ಆರತಿ ಕೃಷ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಐ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯದೊಂದಿಗೆ, ‘ಪ್ರವಾಸಿ ಭಾರತೀಯ ದಿನಸ್’ ಮಾದರಿಯಲ್ಲಿ ಪ್ರತಿವರ್ಷ ಕನ್ನಡಿಗರಿಗಾಗಿ ‘ಕನ್ನಡ ನಮ್ಮದು-ಕನ್ನಡಿಗರು ನಾವು’ ಕಾರ್ಯಕ್ರಮವನ್ನು ಆಯೋಜಿಸುವ ಕುರಿತೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದವರು ವಿವರಿಸಿದರು.
ಅನಿವಾಸಿ ಕನ್ನಡಿಗರು ಹೊರದೇಶಗಳಲ್ಲಿ ತೊಂದರೆಗೆ ಸಿಲುಕಿಕೊಂಡಾಗ, ಅದರಲ್ಲೂ ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಮಸ್ಯೆಗೆ ಸಿಲುಕಿದಾಗ ಪರಿಹಾರಕ್ಕಾಗಿ ವಿಶೇಷ ಯೋಜನೆಯನ್ನು ರೂಪಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.
ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಮುಂದೆ ಬಂದರೆ, ಅಥವಾ ರಾಜ್ಯದಲ್ಲಿ ಶಾಶ್ವತವಾಗಿ ನೆಲೆ ಸಲು ಬಯಸಿದರೆ ಅವರಿಗೆ ಉತ್ತೇಜನ ನೀಡಲು 1,000 ಕೋಟಿ ಆವರ್ತನ ನಿಧಿಯನ್ನು ಕಾದಿರಿಸುವ ಪ್ರಸ್ತಾಪ ವನ್ನೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಎನ್‌ಆರ್‌ಐ ವಿಭಾಗವನ್ನು ಬಲಪಡಿಸುವ, ಅನಿವಾಸಿ ಕನ್ನಡಿಗರಿಗೆ ಎನ್‌ಆರ್‌ಐ ಕಾರ್ಡು ವಿತರಿಸುವ ಹಾಗೂ ಅನಿವಾಸಿ ಕನ್ನಡಿಗರ ಸಂಪೂರ್ಣ ಮಾಹಿತಿಗಳನ್ನು ದಾಖಲಿಸಲು ಕ್ರಮಗಳನ್ನು ಕೈಗೊಳ್ಳುವ ಕುರಿತೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದು ಚಿಕ್ಕಮಗಳೂರು ಮೂಲದ ಆರತಿ ಕೃಷ್ಣ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಿವಾಸಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಉಡುಪಿ ಶೇಖ್ ವಹೀದ್ ಉಪಸ್ಥಿತರಿದ್ದರು.