ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ವೇಳೆ ವಿದ್ಯುತ್ ಕಡಿತ !
ಬರಿಪಾದ, ಮೇ 6: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬರಿಪಾದದಲ್ಲಿರುವ ಮಹಾರಾಜ ಶ್ರೀರಾಮ್ ಚಂದ್ರ ಭಂಜ್‌ದೇವ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಮುರ್ಮು ಅವರು ಭಾಷಣ ಮಾಡುತ್ತಿರುವ ಸಂದರ್ಭ ವಿದ್ಯುತ್ ಕೈಕೊಟ್ಟ ಘಟನೆ ನಡೆದಿದೆ. ಆದರೆ, ಮೈಕ್ ಕೆಲಸ ಮಾಡುತ್ತಿದ್ದುದರಿಂದ ಅವರು ಮಾತು ಮುಂದುವರಿಸಿದ್ದರು.
ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಪೂರ್ವಾಹ್ನ 11.56ರಿಂದ ಅಪರಾಹ್ನ 12.05ರ ವರೆಗೆ ವಿದ್ಯುತ್ ಕಡಿತವಾಗಿತ್ತು. ಜನರೇಟರ್ ಕಾರ್ಯ ನಿರ್ವಹಿಸದೇ ಇರುವುದರಿಂದ ಸಭಾಂಗಣದಲ್ಲಿ ಕತ್ತಲೆ ತುಂಬಿತ್ತು. ಈ ನಡುವೆ ರಾಷ್ಟ್ರಪತಿ ಅವರು ಪೋಡಿಯಂನಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲೈಟ್‌ನಿಂದ ಭಾಷಣ ಮುಂದುವರಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಭಿಕರು ಕೂಡ ಕತ್ತಲೆಯಲ್ಲೇ ಅವರ ಭಾಷಣ ಕೇಳಿದರು.
ವಿದ್ಯುತ್ ಕಡಿತಕ್ಕೆ ವಿಶ್ವವಿದ್ಯಾನಿಲಯದ ಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ವಿದ್ಯುತ್ ಕಡಿತಕ್ಕಾಗಿ ಎಲೆಕ್ಟ್ರೀಷಿಯನ್ ಜಯಂತ್ ತ್ರಿಪಾಠಿ ಅವರನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಲೋಪದೋಷಗಳ ತನಿಖೆಗೆ ಹಾಗೂ ಜವಾಬ್ದಾರಿ ನಿಗದಿಪಡಿಸಲು ಪಿಜಿ ಕೌನ್ಸಿಲ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ.
VIDEO | President Droupadi Murmu continued her speech during the power outage at MSCB University in Mayurbhanj’s Baripada. pic.twitter.com/NSchUHbCzG
— Press Trust of India (@PTI_News) May 6, 2023