×
Ad

ಮಹಿಳಾ ಕುಸ್ತಿಪಟುಗಳಿಗೆ ರೈತರ ಬೆಂಬಲ: ಮೇ 8ರಂದು ದಿಲ್ಲಿ ತಲುಪಲಿರುವ ರೈತರು

Update: 2023-05-06 23:43 IST

ಹೊಸದಿಲ್ಲಿ, ಮೇ 6: ಎಪ್ರಿಲ್ 23ರಿಂದ ಧರಣಿ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಲು ಸಾವಿರಾರು ರೈತರು ಮೇ 8ರಂದು ಜಂತರ್ ಮಂತರ್‌ಗೆ ತಲುಪಲಿದ್ದಾರೆ. 

ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಡಬ್ಲ್ಯುಎಫ್‌ಐ ವರಿಷ್ಠ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ  ರೈತರು  ಸಂಯಕ್ತ ಕಿಸಾನ್ ಮೋರ್ಚಾದ ಅಡಿಯಲ್ಲಿ ಕುಸ್ತಿಪಟುಗಳಿಗೆ ಬೆಂಬಲ ನೀಡಲಿದ್ದಾರೆ. 

‘‘ನಾವು 40 ರೈತರ ಸಂಘಟನೆಗಳು ಪಾಲ್ಗೊಂಡ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದೇವೆ. ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಲು ಸಾವಿರಾರು ಸಂಖ್ಯೆಯಲ್ಲಿ ದಿಲ್ಲಿ ತಲುಪಲು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ’’ ಎಂದು ಹರ್ಯಾಣದ ಯುವ ರೈತ ನಾಯಕ ಅಭಿಮನ್ಯು ಕೋಹರ್ ಅವರು ಹೇಳಿದ್ದಾರೆ. 

ಮೇ 3ರಂದು ಮಧ್ಯರಾತ್ರಿ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಘರ್ಷಣೆ ನಡೆದು, ಕೆಲವರು ಗಾಯಗೊಂಡ ಬಳಿಕ ರೈತರ ಸಂಘಟನೆಗಳು ಈ ನಿರ್ಧಾರ ತೆಗೆದುಕೊಂಡಿವೆ. ಈ ಘಟನೆ ಸಂಭವಿಸುವುದಕ್ಕಿಂತ ಮೊದಲು ಪೊಲೀಸರು ಪ್ರತಿಭಟನಾ ಸ್ಥಳದ ಸುತ್ತ ಭಾರೀ ತಡೆ ಗೋಡೆಗಳನ್ನು ನಿರ್ಮಿಸಿದ್ದರು. ಅಲ್ಲದೆ, ಪತ್ರಕರ್ತರಿಗೆ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಅನಂತರ ಮೇ 4ರಂದು ಮುಂಜಾನೆ ಪೊಲೀಸರು ತಡೆಗೋಡೆಗಳನ್ನು ತೆರವುಗೊಳಿಸಿದ್ದರು. 
ಆರೋಪಿ ಪೊಲೀಸರನ್ನು ಕೂಡಲೇ ಅಮಾನತುಗೊಳಿಸುವಂತೆ ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಆಗ್ರಹಿಸಿದ್ದಾರೆ. 
‘‘ಪೋಕ್ಸೊ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರೂ ಪೊಲೀಸರು ಇದುವರೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ವಿಚಾರಣೆ ನಡೆಸಿಲ್ಲ’’ ಎಂದು ಕೊಹರ್ ತಿಳಿಸಿದ್ದಾರೆ. 

Similar News