×
Ad

ವಿಶ್ವ ರೆಡ್ಕ್ರಾಸ್ ದಿನ : ಮೇ 8

Update: 2023-05-08 13:44 IST

‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯ ವಾಕ್ಯದಿಂದ ಜಗತ್ತಿನಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುವ ರೆಡ್ ಕ್ರಾಸ್ ಸಂಸ್ಥೆ, ತನ್ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ರನ್ನು ಸ್ಮರಿಸುವ ಉದ್ದೇಶಕ್ಕಾಗಿಯೇ ಮೇ 8ನ್ನು ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ನಾವೆಲ್ಲಾ ಸೇರಿ ದೇಶ, ಜಾತಿ, ಮತ, ಜನಾಂಗ, ಕುಲ, ಗೋತ್ರ, ವರ್ಣ ಭೇದಗಳನ್ನು ಮೆಟ್ಟಿ ನಿಂತು, ವಿಶ್ವ ಭ್ರಾತೃತ್ವದ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದಲ್ಲಿ, ಅದುವೇ ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ.

ಜಗತ್ತಿನಾದ್ಯಂತ ಮೇ 8 ರಂದು ‘ವಿಶ್ವ ರೆಡ್ ಕ್ರಾಸ್ ದಿನ’ ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ [THROUGH HUMANITY TO PEACE] ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8. 1859 ರ ಜೂನ್ 24 ರಂದು ‘ಸಲ್ಫರಿನೋ’ ಕದನ ದ ಗಾಯಳುಗಳ ಮನ ಕಲುಕುವ 

ದೃಶ್ಯವನ್ನು ಕಂಡ ಶ್ರೀ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ ನೆರವು [PEOPLE HELPING PEOPLE] ಎಂಬ ಕಲ್ಪನೆಯೊಂದಿಗೆ 1863 ರಲ್ಲಿ ರೆಡ್ಕ್ರಾಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು ರೆಡ್ಕ್ರಾಸ್ ಸಂಸ್ಥೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಸೇವಾ ಸಂಘಟನೆಯಾಗಿ ಮಾರ್ಪಾಡಾಗಿ, ಯುದ್ಧ ಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತವಾಗಿ ಶಾಂತಿ ಪ್ರಕ್ರಿಯೆಗಳು ಹಾಗೂ ಚಟುವ ಟಿಕೆಗಳ ಕಾರ್ಯ ನಿರ್ವಹಿಸುತ್ತಲಿದೆ. 

ಭಾರತದಲ್ಲಿ ಕೂಡಾ 1920ರಲ್ಲಿ ರೆಡ್ಕ್ರಾಸ್ ಸಂಸ್ಥೆಯ ಉದಯವಾಯಿತು ಮತ್ತು ಕರ್ನಾಟಕದಲ್ಲಿ 1921ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಹುಟ್ಟಿಕೊಂಡಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯಂತ ವಿಶಾಲವಾದ ಹಾಗೂ ದೇಶೀಯ ಮಾನವೀಯ ಸೇವಾ ಸಂಘಟನೆಯಾಗಿದೆ. ಈ ಸಂಸ್ಥೆಯು ವಿಕೋಪಗಳಲ್ಲಿ ಪಾಲ್ಗೊಳ್ಳುವಿಕೆ, ಆರೋಗ್ಯ ಆರೈಕೆ ಸೇವೆಗಳು, ರಕ್ತ ಸಂಗ್ರಹಣ ಸೇವೆಗಳು ಮತ್ತು ಕಿರಿ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು, ಇತ್ಯಾದಿ ಸೇವಾ ಕಾರ್ಯಗಳಿಗೆ ಪ್ರಸಿದ್ಧವಾಗಿದೆ. ಒಟ್ಟಿನಲ್ಲಿ ಮೇ 8ನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ಜೀವನ ಶೈಲಿಯ ಪುನರ್ ವಿಮರ್ಶೆ ಮಾಡಿ, ಸಮಾಜದ ನೊಂದವರ, ರೋಗಿಗಳ, ದುರ್ಬಲವರ್ಗದವರ ಮತ್ತು ಶೋಷಿತರ ಸೇವೆಗೆ ಸಮರ್ಪಿಸಿಕೊಳ್ಳುವ ಒಂದು ಸುದಿನ.

► ರೆಡ್ ಕ್ರಾಸ್ ಸಂಸ್ಥೆಯ ಉಗಮ 

1859 ರಲ್ಲಿ ಇಟಲಿ, ಫ್ರಾನ್ಸ್ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂಸೇವಾ ಸಂಸ್ಥೆಯಾದ ರೆಡ್ಕ್ರಾಸನ್ನು ಸ್ಥಾಪಿಸಲಾಯಿತು. ನಂತರ ಇದು ಅಂತರ್ರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆ, ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ಒಕ್ಕೂಟ ಹಾಗೂ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು.

ರೆಡ್ ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ಜೂನ್ 1859ರ 24 ರಂದು ನಡೆದ ಅಮಾನವೀಯ, ಭೀಕರ ಯುದ್ಧದ ರಣರಂಗ ರೆಡ್ ಕ್ರಾಸ್ ಉಗಮಕ್ಕೆ ಕಾರಣವಾಯಿತು. ಒಂದೆಡೆ ಫ್ರಾನ್ಸ್ ಮತ್ತು ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರೀಯಾ ಸೈನ್ಯ ಆ ರಣರಂಗದಲ್ಲಿ ಇದ್ದವು. ಮೂರು ಲಕ್ಷಕ್ಕೂ ಹೆಚ್ಚಿನ ಸೈನಿಕರು ಆ ರಣರಂಗದಲ್ಲಿ ಕಾದಾಡುತ್ತಿ ದ್ದರು. 1859ರ ಜೂನ್ 24 ರಂದು ‘ಸಲ್ಫೆರಿನೋ’ ದಲ್ಲಿ ನಡೆದ ಈ ಯುದ್ಧ 15 ಗಂಟೆಗಳ ಕಾಲ ನಡೆದಿತ್ತು. 

ಯುದ್ಧ ಮುಗಿದಾಗ ರಣರಂಗದ ತುಂಬಾ ಸತ್ತ ಹಾಗೂ ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಿದ್ದ ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ಬಹಳ ವಿರಳವಾಗಿತ್ತು. ರಕ್ತಸಿಕ್ತ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದರೂ, ಸಹಾಯ ಹಸ್ತ ನೀಡಲು ಕೈಗಳೇ ಇರಲಿಲ್ಲ.  ಮೃತ ದೇಹಗಳನ್ನು ಸಾಗಿಸಲು ಹಾಗೂ ಬದುಕಿ ಉಳಿದ ಗಾಯಾಳು ಸೈನಿಕರನ್ನು ಉಪಚರಿಸಲು ಮತ್ತು ಚಿಕಿತ್ಸೆ ಮಾಡಲು ವೈದ್ಯಕೀಯ ಸಹಾಯ ಬಹಳ ಸ್ವಲ್ಪ ಪ್ರಮಾಣದಲ್ಲಿ ಇತ್ತು. ಸ್ವಿಜರ್ಲೇಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಎಂಬಾತ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದನು. 

ಸೂರ್ಯ ಮುಳುಗುವ ಹೊತ್ತಲ್ಲಿ ಅಲ್ಲಿ ಬಂದಿದ್ದ ‘ಡ್ಯೂನಾಂಟ್’ ಮರುದಿನ ಸೂರ್ಯ ಉದಯಿಸುವವರೆಗೆ ಸ್ಥಳೀಯ ಗ್ರಾಮಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿದನು. ಯುದ್ಧ ಗಾಯಾಳುಗಳನ್ನು ಖಾಸಗಿ ಮನೆಗಳಲ್ಲಿ, ಚರ್ಚ್ ಗಳಲ್ಲಿ, ಆಶ್ರಮಗಳಲ್ಲಿ, ಮಸೀದಿಗಳಲ್ಲಿ, ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದನು.

ಹೆನ್ರಿ ಡ್ಯೂನಾಂಟ್ ಒಬ್ಬ ಪಕ್ಕಾ ವ್ಯಾಪಾರಿ, ಆದರೆ ಮಾನವೀ ಯತೆಯ ಮುಂದೆ ವ್ಯಾಪಾರ ಬುದ್ಧ್ದಿ ಮಂಕಾಗಿತ್ತು. ಅಲ್ಜೀರಿಯದಲ್ಲಿ ಕಾರ್ನ ಮಿಲ್ಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಲು ನೆಪೋಲಿಯನ್ ದೊರೆಯನ್ನು ಕಾಣಲು ಬಂದಿದ್ದನು. ತಾನು ನಡೆಯುತ್ತಾ ಇದ್ದ ದಾರಿಯಲ್ಲಿನ ರಣರಂಗದ ಮಾರಣಾಂತಿಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದನು. ಆ ಸೈನಿಕರ ನೋವಿಗೆ ತಕ್ಷಣ ಸ್ವಂದಿಸಿದನು. ಆ ಸೈನಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪೂರಕವಾಗಿ ಸ್ವಯಂಸೇವಕ ತಂಡವನ್ನು ತಯಾರು ಮಾಡಿದನು. ಯಾವುದೇ ದೇಶ, ಜಾತಿ, ಮತ, ಕುಲ, ಗೋತ್ರ, ಬಣ್ಣ, ಧರ್ಮಗಳ ಭೇದ ಮಾಡದೆ ಎಲ್ಲಾ ದೇಶದ ಗಾಯಾಳುಗಳನ್ನು ಉಪಚರಿಸಿ ಮಾನವೀಯತೆಯನ್ನು ಮೆರೆದನು.

ಕಾಲಚಕ್ರ ಉರುಳುತ್ತಿತ್ತು, ಜನ ಎಲ್ಲವನ್ನೂ ಮರೆತರೂ, ಹೆನ್ರಿ ಡ್ಯೂನಾಂಟ್ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದ. ಯುದ್ಧದ ಭೀಕರತೆ ಹೆನ್ರಿಯ ಮನದಲ್ಲಿ ಆಳವಾಗಿ ಬೇರೂರುತ್ತಿತ್ತು. ಹಗಲೂ ರಾತ್ರಿ ಯುದ್ಧದ ಬಗ್ಗೆಯೇ ಯೋಚಿಸುತ್ತಿದ್ದ ಆತ, ಇದಕ್ಕೊಂದು ಶಾಶ್ವತ ಪರಿಹಾರ ಪಡೆಯಲೇ ಬೇಕೆಂಬ ದೃಢ ಚಿತ್ತದಿಂದ ಕಾರ್ಯ ಪ್ರವೃತ್ತನಾದ. ಯುದ್ಧಕಾಲದಲ್ಲಿ ಮಾನವ ಜನಾಂಗ ಎದುರಿಸುವ ಭಯಂಕರ ಯಾತನೆಯನ್ನು ತಪ್ಪಿಸಲು ಹೆನ್ರಿ ಡ್ಯೂನಾಂಟ್ ತನ್ನದೇ ಆದ ಎರಡು ಅಂಶಗಳನ್ನು ಮನದಟ್ಟು ಮಾಡಿಕೊಂಡ. 

ಆ ನಿಟ್ಟಿನಲ್ಲಿ ಹೆನ್ರಿ ಡ್ಯೂನಾಂಟ್ ‘ದಿ ಮೆಮಾರಿ ಆಫ್ ಸಾಲ್ಫರಿನೋ’ ಎಂಬ ಪುಸ್ತಕವನ್ನು ಪ್ರಕಟಿಸಿ, ಅದರ ಪ್ರತಿಗಳನ್ನು ವಿಶ್ವದಾದ್ಯಂತ ಹಂಚಿದ. ಆ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದ. ಆ ಎರಡು ಅಂಶಗಳು ಯಾವುದೆಂದರೆ,

1. ಅಂತರ್ರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಬೇಕು. ಇದರಲ್ಲಿ ಸ್ವಯಂ ಸೇವಕ ತಂಡವು ಯುದ್ಧ ಮುಕ್ತಾಯವಾದ ಬಳಿಕ ಅಲ್ಲಿನ ಗಾಯಾಳುಗಳನ್ನು ಅವರ ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು.

2. ಗಾಯಾಳು ಸೈನಿಕರನ್ನು ಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು, ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತರ್ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು.
ಈ ಅದ್ಬ್ಬುತವಾದ ಪುಸ್ತಕವನ್ನು ಓದಿದ ಬಳಿಕ ಜಿನೀವಾದ ಸಮಾಜ ಕಲ್ಯಾಣ ಸಂಸ್ಥೆಯೊಂದು, ಹೆನ್ರಿ ಡ್ಯೂನಾಂಟ್ನ ಸಂಕಲ್ಪಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಮುಂದೆ ಬಂದಿತು. 5 ಮಂದಿಯ ಒಂದು ಸಮಿತಿಯನ್ನು ಮಾಡಿ, ಹೆನ್ರಿ ಡ್ಯೂನಾಂಟ್ರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 

ಈ ಸಮಿತಿಯು ಒಬ್ಬ ಸೇನೆಯ ನಿವೃತ್ತ ಕಮಾಂಡರ್, ಒಬ್ಬ ವೈದ್ಯ, ಒಬ್ಬ ಸಮಾಜ ಸೇವಕ, ಒಬ್ಬ ವ್ಯಾಪಾರಿ ಹಾಗೂ ಮತ್ತೊಬ್ಬ ನಿವೃತ್ತ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಶ್ರಮದ ಫಲವಾಗಿ 1863, ಅಕ್ಟೋಬರ್ 26 ರಂದು ಜಿನೀವಾದಲ್ಲಿ ಅಂತರ್ರಾಷ್ಟ್ರೀಯ ಸಮ್ಮೇಳನ ನಡೆದು, 16 ರಾಷ್ಟ್ರಗಳ ವಿವಿಧ ಆಮಂತ್ರಿಕರು ಇದರಲ್ಲಿ ಪಾಲ್ಗೊಂಡಿದ್ದರು. ‘ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ’ ಎಂಬ ಹೆಸರಿನ ಅಂತರ್ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಈ ಸಮ್ಮೇಳನ ದಲ್ಲಿ ತೀರ್ಮಾನಿಸಲಾಯಿತು.

 ಮುಂದೆ ಇದೇ ಸಂಸ್ಥೆ ‘ರೆಡ್ ಕ್ರಾಸ್ ಸಂಸ್ಥೆ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಹೀಗೆ ಒಬ್ಬ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ ನ ಹೃದಯ ಅಂತಃಕರಣದ ಮತ್ತು ಪರಿಶ್ರಮದ ಫಲವಾಗಿ ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಉಗಮವಾಯಿತು.ರೆಡ್ ಕ್ರಾಸ್ ಲಾಂಛನ ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿದ ಲಾಂಛನ ರೆಡ್ ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್ನ ಎಲ್ಲಾ ಬಾಹುಗಳೂ ಪರಸ್ಪರ ಸಮವಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕ ವಾಗಿ ಗುರುತಿಸಲಾಗುತ್ತದೆ.

ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ಯುದ್ಧಕಾಲ ದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿ ರುವ ಸೇವೆ, ಉಪಕಾರ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ಈ ಸೇವಾಕಾರ್ಯದಲ್ಲಿ ತೊಡಗಿರುವರು. ಯುದ್ಧದಿಂದ ಹೊರತಾದವರು ಎಂಬ ಸಂಕೇತ ಈ ಲಾಂಛನದಿಂದ ಸೂಚಿಸಲಾಗುತ್ತದೆ. ಒಟ್ಟಿನಲ್ಲಿ ತುರ್ತು ಅವಘಡದ ಸಮಯದಲ್ಲಿ ಮಾನವೀಯ ಮತ್ತು ಪರಿಹಾರಕಾರಕ ಸೇವೆ ನೀಡುವ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಈ ಲಾಂಛನವನ್ನು ಬಳಸಬಹುದು.

ರೆಡ್ ಕ್ರಾಸ್ ಸಂಘಟನೆಯ ಚಟುವಟಿಕೆಗಳನ್ನು ಯುದ್ಧಕಾಲದ ಚಟುವಟಿಕೆ ಮತ್ತು ಶಾಂತಿ ಕಾಲದ ಚಟುವಟಿಕೆ ಎಂದು ವಿಂಗಡಿಸಲಾಗುತ್ತದೆ. ಶಾಂತಿ ಸಮಯದ ಚಟುವಟಿಕೆಗಳಾದ, ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದು ಎಂಬುದಾಗಿ ವಿಂಗಡಿಸಲಾಗಿದೆ. 

‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯ ವಾಕ್ಯದಿಂದ ಜಗತ್ತಿನಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುವ ರೆಡ್ ಕ್ರಾಸ್ ಸಂಸ್ಥೆ, ತನ್ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ರನ್ನು ಸ್ಮರಿಸುವ ಉದ್ದೇಶಕ್ಕಾಗಿಯೇ ಮೇ 8ನ್ನು ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ನಾವೆಲ್ಲಾ ಸೇರಿ ದೇಶ, ಜಾತಿ, ಮತ, ಜನಾಂಗ, ಕುಲ, ಗೋತ್ರ, ವರ್ಣ ಭೇದಗಳನ್ನು ಮೆಟ್ಟಿ ನಿಂತು, ವಿಶ್ವ ಭ್ರಾತೃತ್ವದ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದಲ್ಲಿ, ಅದುವೇ ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ಅತಿಶಯೋಕ್ತಿಯಲ್ಲ.

Similar News