''ನಮ್ಮದು ವಿವೇಕಾನಂದ, ನಾರಾಯಣ ಗುರು, ಗಾಂಧೀಜಿ ಬೋಧಿಸಿರುವ ಹಿಂದುತ್ವ''
ವಾರ್ತಾಭಾರತಿ ವಿಶೇಷ ಸಂದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ 'ವಾರ್ತಾಭಾರತಿ' ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ...
1. ಬಿಜೆಪಿ ಭ್ರಷ್ಟ ಪಕ್ಷ ಎನ್ನುವುದು ಕಾಂಗ್ರೆಸ್ ಆರೋಪ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆಯೂ ಭ್ರಷ್ಟಾಚಾರದ ಸಾಕಷ್ಟು ಆರೋಪಗಳಿವೆ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ ?
ಸಿದ್ದರಾಮಯ್ಯ: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ನಡೆಸಿದ್ದರೆ ವಿರೋಧ ಪಕ್ಷವಾಗಿ ಬಿಜೆಪಿ ಯಾಕೆ ಅದನ್ನು ನಮ್ಮ ಆಡಳಿತಾವಧಿಯಲ್ಲಿ ಎತ್ತಿಲ್ಲ? ಕಳೆದ ಮೂರು ವರೆ ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿದೆ, ಈ ಅವಧಿಯಲ್ಲಿ ನಮ್ಮ ನಾಯಕರ ಭ್ರಷ್ಟಾಚಾರದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬಹುದಿತ್ತು. ಯಾಕೆ ಆ ಕೆಲಸ ಮಾಡಿಲ್ಲ?
ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮೇಲಿನ ಏಳು ಆರೋಪಗಳನ್ನು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಅಳುಕದೆ ಸಿಬಿಐ ತನಿಖೆಗೆ ಒಪ್ಪಿಸಿದ್ದೆ. ಪೊಲೀಸ್ ಅಧಿಕಾರಿಗಳಾದ ಡಿ.ಕೆ.ರವಿ ಮತ್ತು ಗಣಪತಿ ಅವರ ಆತ್ಮಹತ್ಯೆ, ಪರೇಶ್ ಮೇಸ್ತಾ ಸಾವು ಸೇರಿದಂತೆ ಯಾವ ಪ್ರಕರಣಗಳಲ್ಲಿಯೂ ಆರೋಪವನ್ನು ಸಿಬಿಐ ಗೆ ಸಾಬೀತು ಪಡಿಸಲಾಗಿಲ್ಲ.
ಈಗಿನ ಬಿಜೆಪಿ ಸರ್ಕಾರವೇ ಸಾರಸಗಟಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದು 40% ನಿಂಂದ 80% ವರೆಗೆ ಕಮಿಷನ್/ಲಂಚದ ಆರೋಪಗಳಿವೆ. ಗುತ್ತಿಗೆದಾರರ ಸಂಘ, ಶಿಕ್ಷಕರ ಸಂಘಗಳು ಖುದ್ದಾಗಿ ಪ್ರಧಾನಿಗೆ ಪತ್ರ ಬರೆದು ಕಮಿಷನ್ ಗಾಗಿ ಸಚಿವರು ಕಿರುಕಳ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಗುತ್ತಿಗೆದಾರರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಎಸ್ ಐ ಹಗರಣದಲ್ಲಿ ಐಪಿಎಸ್ ಅಧಿಕಾರಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಜೈಲಲ್ಲಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಪುರಾವೆಗಳು ಬೇಕು?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಇರಲು ಕಾರಣ 2013ರಿಂದ 2018ರ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮುಕ್ತ ಆಡಳಿತ. ನಾವು ನುಡಿದಂತೆ ನಡೆದಿದ್ದೆವು.
2. ಬಿಜೆಪಿ ಭ್ರಷ್ಟ, ಕೋಮುವಾದಿ ಎನ್ನುತ್ತಲೇ ಟಿಕೆಟ್ ಸಿಕ್ಕಿಲ್ಲ ಎನ್ನುವ ಕಾರಣದಿಂದ ಬಿಜೆಪಿ ತೊರೆದ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಸ್ವೀಕರಿಸಿದೆ. ಹೀಗಿರುವಾಗ ಕಾಂಗ್ರೆಸ್ ನ್ನು ಬಿಜೆಪಿಗಿಂತ ಭಿನ್ನ ಎಂದು ಮತದಾರ ಸ್ವೀಕರಿಸುವುದು ಹೇಗೆ ಸಾಧ್ಯ ?
ಸಿದ್ದರಾಮಯ್ಯ: ಬಿಜೆಪಿಯಿಂದ ಯಾರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೋ ಅವರೆಲ್ಲ ಟಿಕೆಟ್ ಸಿಕ್ಕಿಲ್ಲ ಎನ್ನುವ ಏಕೈಕ ಕಾರಣಕ್ಕೆ ಬಂದವರಲ್ಲ. ಅವರು ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಬಂದವರು. ಅವರಿಗೆ ತಮ್ಮ ಸಿದ್ದಾಂತದಲ್ಲಿನ ತಪ್ಪುಗಳ ಅರಿವಾಗಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸ್ವಲ್ಪ ರಿಸ್ಕ್ ತೆಗೆದುಕೊಂಡು ಉದಾರವಾಗಿ ವರ್ತಿಸದಿದ್ದರೆ ಪಕ್ಷದ ನೆಲೆಯನ್ನು ವಿಸ್ತರಿಸುವುದು ಮತ್ತು ವಿರೋಧಿ ಸಿದ್ದಾಂತವನ್ನು ಸೋಲಿಸುವುದು ಕಷ್ಟವಾಗುತ್ತದೆ. ನಾನು ಮತ್ತು ನನ್ನ ಕೆಲವು ಗೆಳೆಯರು ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಪಕ್ಷ ಸೇರಿ ಹದಿನೇಳು ವರ್ಷಗಳು ಕಳೆದಿವೆ. ನಾವೆಲ್ಲರೂ ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ದರಾಗಿ ಪಕ್ಷದಲ್ಲಿಯೇ ಉಳಿದಿಲ್ವಾ?
3. ಕಾಂಗ್ರೆಸ್ ಮೃದು ಹಿಂದುತ್ವವಾದಿ ಪಕ್ಷ ಎನ್ನುವ ಆರೋಪಗಳು ಈ ಚುನಾವಣೆಯ ಸಂದರ್ಭದಲ್ಲೂ ಕೇಳಿ ಬರುತ್ತಿವೆ. ಹಿಂದುತ್ವವಾದದ ಬಗ್ಗೆ ಕಾಂಗ್ರೆಸ್ ನಿಲುವು ಏನು ?
ಸಿದ್ದರಾಮಯ್ಯ: ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವವನ್ನೇ ನಾವು ಒಪ್ಪಿಕೊಳ್ಳದೆ ಇರುವಾಗ ಇನ್ನು ಮೃದು-ಕಠಿಣ ಹಿಂದುತ್ವವಾದ ಎಲ್ಲಿಂದ ಬಂತು? ವೈಯಕ್ತಿಕವಾಗಿ ನನಗಾಗಲಿ, ನಮ್ಮ ಪಕ್ಷಕ್ಕಾಗಲಿ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳು, ಮಹಾತ್ಮ ಗಾಂಧೀಜಿ ಬೋಧಿಸಿರುವ ಮತ್ತು ಪಾಲಿಸಿರುವ ಹಿಂದುತ್ವದ ಬಗ್ಗೆ ನನಗೆ ತಕರಾರುಗಳೇ ಇಲ್ಲ. ಆದರೆ ಸಂಘ ಪರಿವಾರದ ಹಿಂದುತ್ವವನ್ನು ನಾವು ಒಪ್ಪಿಕೊಳ್ಳುವುದಿಲ್ಲ.
4. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಉಚಿತಗಳನ್ನು ಘೋಷಿಸಿದೆ. ರಾಜ್ಯ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಸಂಧರ್ಭದಲ್ಲಿ ಈ ಉಚಿತಗಳಿಗೆ ಹಣವನ್ನು ಯಾವ ಮೂಲದಿಂದ ಹೊಂದಿಸುತ್ತೀರಿ ?
ಸಿದ್ದರಾಮಯ್ಯ: ಬಡವರು ಮತ್ತು ದುರ್ಬಲರ ಕಲ್ಯಾಣದ ಕಾರ್ಯಕ್ರಮಗಳ ಪ್ರಶ್ನೆ ಎದುರಾದಗೆಲ್ಲ ಹಣ ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ರೀತಿ ಪ್ರಶ್ನೆ ಮಾಡುತ್ತಿರುವವರು ಬಿಜೆಪಿ ಆಂತರ್ಯದಲ್ಲಿ ಬಡವರ ವಿರೋಧಿ ಎನ್ನುವುದನ್ನು ರಾಜ್ಯದ ಜನರು ಅರ್ಥಮಾಡಿಕೊಂಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾಗಲೂ ಹಣ ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆ ಕೇಳಲಾಗಿತ್ತು.
ನಾವು ಬಜೆಟ್ ಲೆಕ್ಕಾಚಾರವನ್ನು ಮಾಡಿಯೇ ಉಚಿತ ಕಾರ್ಯಕ್ರಮಗಳನ್ನು ಘೋಷಿಸಿದ್ದೇವೆ. ಸುಮಾರು ಮೂರು ಲಕ್ಷ ಕೋಟಿ ಬಜೆಟ್ ನಲ್ಲಿ ಅರ್ಧದಷ್ಟು ಭಾಗ ಮೂಲಭೂತ ಸೌಕರ್ಯ ನಿರ್ಮಾಣದ ಹೊಸ ಯೋಜನೆಗಳು ಮತ್ತು ಈಗಿನ ಯೋಜನೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ಕೆ ವ್ಯಯವಾಗುತ್ತದೆ. ಇಲ್ಲಿಯೇ ಹಣದ ಸೋರಿಕೆಯಾಗುವುದು. 40ರಿಂದ 80 ಪ್ರತಿಶತದಷ್ಟು ಲಂಚ-ಕಮಿಷನ್ ಮೂಲಕ ಸೋರಿ ಹೋಗುತ್ತಿರುವುದನ್ನು ತಡೆದರೆ ನಮ್ಮ ಗ್ಯಾರಂಟಿ ಸ್ಕೀಮ್ ಗಳಿಗೆ ಬೇಕಾದಷ್ಟು ಹಣ ಸಿಗಲಿದೆ. ಇದರ ಜೊತೆ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದು ಅನಗತ್ಯ ಸಂಬಳ-ಸೌಲಭ್ಯಗಳಿಗೆ ವ್ಯಯವಾಗುತ್ತಿರುವ ಹಣವನ್ನು ಉಳಿತಾಯ ಮಾಡುತ್ತೇವೆ, ತೆರಿಗೆ ವಸೂಲಿಯನ್ನು ಬಿಗಿಗೊಳಿಸಿ ಹೆಚ್ಚಿನ ಆದಾಯ ಸಂಗ್ರಹಿಸುತ್ತೇವೆ. ಮನಸ್ಸಿದ್ದಲ್ಲಿ ಮಾರ್ಗವಿದೆ.
5. ಮುಸ್ಲಿಮರ ಮೀಸಲಾತಿ ರದ್ದು ಗೊಳಿಸಿ ಲಿಂಗಾಯತರು, ಒಕ್ಕಲಿಗರಿಗೆ ನೀಡಲಾಗಿದೆ. ಇದನ್ನು ಹೇಗೆ ಸರಿ ಪಡಿಸುತ್ತೀರಿ ?
ಸಿದ್ದರಾಮಯ್ಯ: ಮುಸ್ಲಿಮರ ಮೇಲಿನ ದ್ವೇಷ ಸಾಧನೆಯ ಜೊತೆಯಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ಮೂಡಿಸುವ ದುರುದ್ದೇಶದಿಂದಲೇ ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸಿದೆ. ಬಿಜೆಪಿಯ ಈ ದುರುದ್ದೇಶದ ಅರಿವು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಇದೆ.
ಯಾವುದೇ ಆಯೋಗದ ಸಮೀಕ್ಷೆ-ವರದಿಯನ್ನು ಆಧಾರವಾಗಿ ನೀಡದೆ ಕೇವಲ ರಾಜಕೀಯ ದುರುದ್ದೇಶದಿಂದ ಮುಸ್ಲಿಮ್ ಮೀಸಲಾತಿಯನ್ನು ರದ್ದುಗೊಳಿಸಿದೆ. ಈಗಾಗಲೇ ಸುಪ್ರೀಂಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ. ಈ ದುರುದ್ದೇಶದ ಸರ್ಕಾರದ ನಿರ್ಧಾರ ನ್ಯಾಯಾಲಯದಲ್ಲಿ ತಿರಸ್ಕೃತವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಚಿನ್ನಪ್ಪರೆಡ್ಡಿ ಆಯೋಗ ವೈಜ್ಞಾನಿಕವಾದ ಸಮೀಕ್ಷೆ ಮೂಲಕ ಮುಸ್ಲಿಮರ ಮೀಸಲಾತಿಯನ್ನು ಶೇಕಡಾ ನಾಲ್ಕಕ್ಕೆ ನಿಗದಿಗೊಳಿಸಿದೆ. ಇದು ಕಾಂಗ್ರೆಸ್ ಸರ್ಕಾರ ಇರುವಾಗ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಆಯೋಗದ ವರದಿ ಆಧಾರದಲ್ಲಿ ನಿಗದಿಗೊಳಿಸಿದ್ದ ಮೀಸಲಾತಿ. ಅದರ ನಂತರ 1994ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಮತ್ತು ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮ್ ಮೀಸಲಾತಿಯನ್ನು ಅನುಷ್ಠಾನಕ್ಕೆ ತಂದಿದ್ದೆವು.
ಮುಸ್ಲಿಮ್ ಮೀಸಲಾತಿ ಧರ್ಮದ ಆಧಾರದಲ್ಲಿ ನೀಡಿರುವ ಮೀಸಲಾತಿ ಅಲ್ಲ, ಹಿಂದುಳಿಯುವಿಕೆ ಆಧಾರದಲ್ಲಿ ನೀಡಿರುವ ಮೀಸಲಾತಿ. ಬಿಜೆಪಿಯ ಆರೋಪದಂತೆ ಇದು ಧರ್ಮಾಧರಿತವಾಗಿದ್ದರೆ ಇಷ್ಟು ವರ್ಷ ನ್ಯಾಯಾಲಯದಲ್ಲಿ ಪ್ರಶ್ನಿಸದೆ ಅವರುಯಾಕೆ ಸುಮ್ಮನಿದ್ದರು? ಆಂಧ್ರ ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಮುಸ್ಲಿಮರಿಗೆ ಮೀಸಲಾತಿ ಇದೆ.
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದಕ್ಕೆ ನನ್ನ ಸಂಪೂರ್ಣ ಸಮ್ಮತಿ ಇದೆ. ಇದು ಸಾಧ್ಯವಾಗಬೇಕಾದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಇದಕ್ಕಾಗಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯನ್ನು ಹೆಚ್ಚಿಸುವುದೊಂದೇ ಪರಿಹಾರ.
ಒಟ್ಟು ಮೀಸಲಾತಿಗೆ ವಿಧಿಸಲಾಗಿರುವ ಶೇಕಡಾ 50ರ ಮಿತಿ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಭಾಗ, ಅದನ್ನು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಮಿತಿಯ ಬದಲಾವಣೆ ಮಾಡಬಹುದೆಂದು ನ್ಯಾಯಾಲಯ ಹೇಳಿದೆ.
ಆದರೆ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಶೇಕಡಾ 10ರ ಮೀಸಲಾತಿಯಿಂದಾಗಿ ಶೇಕಡಾ 50ರ ಮೀಸಲಾತಿ ಮಿತಿಯನ್ನು ಉಲ್ಲಂಘಿಸಲಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಲಾದ ಮೀಸಲಾತಿಯಿಂದಲೂ ಶೇಕಡಾ 50ರ ಮಿತಿಯನ್ನು ಮೀರಲಾಗಿದೆ.
ಈಗಿನ ಮೀಸಲಾತಿ ವಿವಾದಕ್ಕೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 75ಕ್ಕೆ ಹೆಚ್ಚಿಸಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸುವುದೊಂದೇ ಪರಿಹಾರ.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 75ಕ್ಕೆ ಹೆಚ್ಚಿಸವುದಾಗಿ ವಾಗ್ದಾನ ಮಾಡಿದ್ದೇವೆ. ಇದಕ್ಕೆ ನಾವು ಬದ್ದರಾಗಿದ್ದೇವೆ.ಪ್ರತಿಯೊಂದು ಜಾತಿ ಮತ್ತು ಪಂಗಡಕ್ಕೆ ಅವುಗಳ ಜನಸಂಖ್ಯೆಗೆ ಆನುಗುಣವಾಗಿ ಮೀಸಲಾತಿ ಕಲ್ಪಿಸುವುದು ಅತ್ಯಂತ ಪ್ರಾಯೋಗಿಕವಾದ ಮತ್ತು ನ್ಯಾಯಬದ್ದವಾದ ಕರ್ತವ್ಯ.
ಮೀಸಲಾತಿ ಹೆಚ್ಚಳದ ಬೇಡಿಕೆ ಸಲ್ಲಿಸಲು ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುಕೂಲತೆಗಳಿವೆ. ದೇಶದಲ್ಲಿ ಮೊದಲ ಬಾರಿ ಮನೆಮನೆಗೆ ತೆರಳಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯ ಸಮೀಕ್ಷ ನಡೆಸಿರುವ ಏಕೈಕ ರಾಜ್ಯ ಕರ್ನಾಟಕ. ಈ ಜಾತಿಗಣತಿಯ ವರದಿಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿಯನ್ನು ಶೇಕಡಾ 75ಕ್ಕೆ ಹೆಚ್ಚಿಸುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಕೂಡಾ ಸಹಮತ ವ್ಯಕ್ತಪಡಿಸಬಹುದೆಂಬ ಖಚಿತ ಭರವಸೆ ನನಗಿದೆ.
6. ಒಳ ಮೀಸಲಾತಿ ಜಾರಿ ಗೊಳ್ಳದೆ ಇರಲು ಕಾಂಗ್ರೆಸ್ ಪಾತ್ರವೂ ಇದೆ ಎನ್ನುವ ಆರೋಪಗಳಿವೆ. ಇದರ ಬಗ್ಗೆ ಏನು ಹೇಳುತ್ತೀರಿ ?
ಸಿದ್ದರಾಮಯ್ಯ: ಇದು ಸಂಪೂರ್ಣವಾಗಿ ಸುಳ್ಳು ಆರೋಪ. ಒಳಮೀಸಲಾತಿ ಅಧ್ಯಯನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಸ್ಥಾಪಿಸಿದ್ದೇ ಕಾಂಗ್ರೆಸ್ ಪಕ್ಷ. ಈ ಸಮಿತಿ ವರದಿಯನ್ನು ನೀಡಲು ಸ್ವಲ್ಪ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿರುವುದು ನಿಜ. ಅದರಲ್ಲಿರುವ ಕೆಲವು ಲೋಪದೋಷಗಳನ್ನು ಸರಿಪಡಿಸುವ ಕೆಲಸವೂ ನಡೆದಿತ್ತು.
ಒಳಮೀಸಲಾತಿಯ ಅನುಷ್ಠಾನದ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದ್ದು ನಾವು ಶಿಫಾರಸನಷ್ಟೇ ಮಾಡಬಹುದಾಗಿದೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾ.ಉಷಾಮೆಹ್ರಾ ಸಮಿತಿ ‘’ಪರಿಶಿಷ್ಟ ಜಾತಿಯ ಮೀಸಲಾತಿಯ ವರ್ಗೀಕರಣ ಮಾಡಲು ಅನುಕೂಲವಾಗುವಂತಹ ಕಾಯ್ದೆ ರಚನೆಗಾಗಿ ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿ ಕಲಮ್ (3) ಸೇರಿಸಬೇಕು’ ಎಂದು 2008ರ ಮೇ ಒಂದರಂದು ಶಿಫಾರಸು ಮಾಡಿದೆ. ಒಳಮೀಸಲಾತಿಗೆ ಇದೊಂದೇ ಪರಿಹಾರ. ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ
ರಾಜ್ಯ ಬಿಜೆಪಿ ಸರ್ಕಾರ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಅವಸರದಲ್ಲಿ ರಚಿಸಲಾಗಿದ್ದ ಕೆ.ಎನ್.ಮಾಧು ಸ್ವಾಮಿ ಅಧ್ಯಕ್ಷತೆಯ ಸಮಿತಿಯ ವರದಿಯನ್ನು ಆಧರಿಸಿ ಒಳಮೀಸಲಾತಿಯನ್ನು ಘೋಷಿಸಿದೆ. ಪೂರ್ಣಪ್ರಮಾಣದ ಆಯೋಗದ ಅಧ್ಯಯನದ ವರದಿ ಇಲ್ಲವೇ ವಿಶ್ವಾಸಾರ್ಹ ಮಾಹಿತಿ ಇಲ್ಲದ ಸಮಿತಿಯ ವರದಿ ಆಧರಿತ ಮೀಸಲಾತಿ ನ್ಯಾಯಾಲಯದಲ್ಲಿ ಊರ್ಜಿತವಾಗಲಾರದು.
7. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರುವ ಬಗ್ಗೆ ಕಾಂಗ್ರೆಸ್ ನಿಲುವೇನು ? ಈ ಬಗ್ಗೆ ಯಾಕೆ ಕಾಂಗ್ರೆಸ್ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿಲ್ಲ ?
ಸಿದ್ದರಾಮಯ್ಯ: ಇದು ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಬೇಕಾಗಿರುವ ನಿರ್ಧಾರ, ನಮ್ಮ ಪಕ್ಷ ಖಾಸಗಿ ಕ್ಷೇತ್ರದ ಮೀಸಲಾತಿ ಪರವಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿನ ನಮ್ಮ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ನಾನು ಪ್ರಾರಂಭದಿಂದಲೂ ಇದನ್ನು ಪ್ರತಿಪಾದಿಸುತ್ತಾ ಬಂದಿದ್ದೇನೆ.
8. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಅಥವಾ ಮುಸ್ಲಿಮರನ್ನು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಮಾಡುವುದರ ಬಗ್ಗೆ ಆಗಾಗ ಚರ್ಚೆ ನಡೆಯುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಸಿದ್ದರಾಮಯ್ಯ: ನಾನು ದಲಿತ ಅಥವಾ ಮುಸ್ಲಿಮರು ಮುಖ್ಯಮಂತ್ರಿ ಇಲ್ಲವೆ ಉಪಮುಖ್ಯಮಂತ್ರಿ ಮಾಡುವುದರ ಪರವಾಗಿದ್ದೇನೆ ಎಂದು ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದೇನೆ. ನಮ್ಮಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣಾ ಪೂರ್ವದಲ್ಲಿ ಘೋಷಿಸುವ ಸಂಪ್ರದಾಯ ಇಲ್ಲ. ಆದ್ದರಿಂದ ನಮ್ಮಲ್ಲಿ ಈಗ ಪಕ್ಷದಿಂದ ಸ್ಪರ್ಧಿಸುತ್ತಿರುವ 223 ಮಂದಿಯೂ ಮುಖ್ಯಮಂತ್ರಿಯಾಗಲು ಅರ್ಹರು ಎಂದು ನಾನು ತಿಳಿದುಕೊಂಡಿದ್ದೇನೆ. ಅಂತಿಮವಾಗಿ ನಮ್ಮ ಪಕ್ಷದ ಸಂಪ್ರದಾಯದಂತೆ ಶಾಸಕಾಂಗ ಪಕ್ಷ ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ‍್ಳುತ್ತದೆ.
ದಲಿತರು ಅಥವಾ ಮುಸ್ಲಿಮರು ಮುಖ್ಯಮಂತ್ರಿ ಆಗುವುದಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೆಲವು ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿದರೆ ದೇಶದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ದಲಿತ ನಾಯಕರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ.
9. ಕಾಂಗ್ರೆಸ್ ಬಹುಮತಪಡೆದರೂ, ಹಿಂದಿನಂತೆ ಶಾಸಕರು ಮಾರಾಟವಾಗುವ ಅಪಾಯ ಈ ಬಾರಿಯೂ ಇಲ್ಲವೇ ? ಅದನ್ನು ಹೇಗೆ ಎದುರಿಸುತ್ತೀರಿ ?
ಸಿದ್ದರಾಮಯ್ಯ: ಈ ಅಪಾಯವನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿಲ್ಲ. ರಾಜ್ಯದ ಮತದಾರರಿಗೂ ಈ ಅಪಾಯದ ಅರಿವಿರುವುದರಿಂದ ಅವರು ಈ ರೀತಿಯ ಪಕ್ಷಾಂತರ ಮತ್ತು ಆಪರೇಷನ್ ಕಮಲದಂತಹ ಅನೈತಿಕ ರಾಜಕಾರಣಕ್ಕೆ ಅವಕಾಶವೇ ಇಲ್ಲದಂತೆ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ಭರವಸೆ ನನಗಿದೆ.
ರಾಜ್ಯದಲ್ಲಿ ಅತಂತ್ರ ಸರ್ಕಾರ ರಚನೆಯಾದಾಗ ಸುಭದ್ರ ಆಡಳಿತ ನೀಡಲಾಗದೆ ಅಭಿವೃದ್ದಿ ಕುಂಠಿತಗೊಂಡಿರುವುದನ್ನು ರಾಜ್ಯದ ಜನತೆ ನೀಡಿದೆ. ಉದಾಹರಣೆಗೆ 2004ರಿಂದ 2013 ಮತ್ತು 2018 ರಿಂದ 2023ರ ಅವಧಿಯ ಅತಂತ್ರ ಸರ್ಕಾರದಿಂದ ರಾಜ್ಯದ ಅಭಿವೃದ್ದಿಯ ರಥ ಹಿಂದಕ್ಕೆ ಚಲಿಸಿದ್ದನ್ನು ಮತದಾರರು ಗಮನಿಸಿದ್ದಾರೆ.
10. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಬಲ್ ಇಂಜಿನ್ ಹೆಗ್ಗಳಿಕೆಯನ್ನು ರಾಜ್ಯ ಕಳೆದು ಕೊಳ್ಳುತ್ತದೆ. ಕೇಂದ್ರದ ಅಸಹಕಾರ ರಾಜ್ಯದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿಲ್ಲವೇ ?
ಸಿದ್ದರಾಮಯ್ಯ: ಒಕ್ಕೂಟ ವ್ಯವಸ್ಥೆಯ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಪಾಲುದಾರರು. ಈಗಿನ ಬಿಜೆಪಿ ಸರ್ಕಾರ ತಮ್ಮದು ಏಕಚಕ್ರಾಧಿಪತ್ಯ ಎಂದು ತಿಳಿದುಕೊಂಡು ರಾಜ್ಯಗಳನ್ನು ಮಾಂಡಲಿಕರಂತೆ ನಡೆಸಿಕೊಳ್ಳುತ್ತಿದೆ. ಇದು ಸ್ಪಷ್ಟವಾಗಿ ಸಂವಿಧಾನ ವಿರೋಧಿ ನಡೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯುತ್ತದೆ ಎಂದು ಭಾರತೀಯ ಜನತಾ ಪಕ್ಷ ಕೊಚ್ಚಿಕೊಂಡಿತ್ತು. ಆಗಿದ್ದೇನು? ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವಷ್ಟು ಅನ್ಯಾಯ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲ. 2.40 ಲಕ್ಷ ಕೋಟಿ ನೇರ ತೆರಿಗೆ ರೂಪದಲ್ಲಿ, ಜಿಎಸ್ಟಿ ರೂಪದಲ್ಲಿ 1.30 ಲಕ್ಷ ಕೋಟಿ, ಸೆಸ್ ಗಳ ರೂಪದಲ್ಲಿ 30,000 ಕೋಟಿ, ಹೀಗೆ ಒಟ್ಟು 4 ಲಕ್ಷದ 72 ಸಾವಿರ ಕೋಟಿ ನಮ್ಮ ರಾಜ್ಯದಿಂದ ವಿವಿಧ ರೂಪದ ತೆರಿಗೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದೆ.
ಆದರೆ ಈ ಪ್ರಮಾಣದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಮರಳಿ ಬರುತ್ತಿಲ್ಲ. ಡಬಲ್ ಎಂಜಿನ್ ಸರ್ಕಾರದ ಕಾಲದಲ್ಲಿ ಈ ಕೇಂದ್ರ ಅನುದಾನದಲ್ಲಿ ಇಳಿಕೆಯಾಗುತ್ತಿದೆ.
ಕೇಂದ್ರದ ತೆರಿಗೆಯಲ್ಲಿ ನಮ್ಮ ಪಾಲು 34,596 ಕೋಟಿ ರೂ. ಬರಲಿದೆ ಎಂದು ಅಂದಾಜು ಮಾಡಿದ್ದಾರೆ. ಮುಂದಿನ ವರ್ಷ 37,250 ಕೋಟಿ ರೂ. ಬರಲಿದೆ ಎಂದಿದ್ದಾರೆ. 37,000 ಕೋಟಿ ಕೇಂದ್ರ ಸರ್ಕಾರದ ಅನುದಾನಗಳು, 13,005 ಕೋಟಿ ಕೇಂದ್ರದ ಸಹಾಯಧನ ಬರಲಿದೆ ಎಂದು ಹೇಳಿದ್ದಾರೆ. ಇವೆರಡು ಒಟ್ಟು ಸೇರಿಸಿದ್ರೆ 50,257 ಕೋಟಿ ಆಗುತ್ತದೆ, ನಮ್ಮಿಂದ ವಸೂಲಾಗುವ ತೆರಿಗೆ 4 ಲಕ್ಷದ 75 ಸಾವಿರ ಕೋಟಿ. ಇದು ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಆಗಿರುವ ದೊಡ್ಡ ಅನ್ಯಾಯ.
ಅಂದರೆ ಕನ್ನಡಿಗರು ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಗೆ ಕೇಂದ್ರ ವಾಪಸು ನೀಡಿರುವುದು ಕೇವಲ ಹದಿನೈದು ಪೈಸೆ ಮಾತ್ರ.ರಾಜ್ಯದ ತಲೆ ಮೇಲೆ ಇಷ್ಟೊಂದು ಸಾಲ ಆಗಲು ಕೇಂದ್ರ ಸರ್ಕಾರದಿಂದ ಬರುತ್ತಿರುವ ಅನುದಾನ ಕಡಿಮೆಯಾಗುತ್ತಿರುವುದು ಕಾರಣ. ನಮ್ಮ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಕೇಂದ್ರದ ಪಾಲು ಕಡಿಮೆಯಾದದ್ದು ಹಾಗೂ ಕೇಂದ್ರದಿಂದ ಬರುವ ಆರ್ಥಿಕ ನೆರವಿನ ಪ್ರಮಾಣ ಇಳಿಕೆಯಾಗಿರುವುದರಿಂದ ಸುಮಾರು 80,000 ಕೋಟಿಯಷ್ಟು ಸಾಲ ಮಾಡಬೇಕಾಗಿದೆ.
2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರವಾಗಿ 30,000 ಕೋಟಿ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಅನ್ಯಾಯವನ್ನು ಪ್ರತಿಭಟಿಸಲಿಕ್ಕಾಗದ ಮುಖ್ಯಮಂತ್ರಿಗಳು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ಹೊರಟು ರಾಜ್ಯವನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ.
ಜಿಎಸ್ ಟಿ ಪರಿಹಾರವನ್ನು ನೀಡುವುದಿಲ್ಲ ಎಂಬ ಕೇಂದ್ರ ಹಣಕಾಸು ಖಾತೆಯ ಸಚಿವೆ ನಿರ್ಮಲಾ ಸೀತಾರಾಮನ್ ನಿಲುವು ರಾಜ್ಯಕ್ಕೆ ಮಾಡಿರುವ ಘೋರ ಅನ್ಯಾಯ. ಈ ಅನ್ಯಾಯವನ್ನು ಪ್ರತಿಭಟಿಸದೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಂಡ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಅತಿವೃಷ್ಟಿ ಪೀಡಿತ ಜನರಿಗೆ ಪರಿಹಾರ ನೀಡಲು ದುಡ್ಡಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ನ್ಯಾಯಬದ್ಧವಾಗಿ ನಮಗೆ ನೀಡಬೇಕಾಗಿರುವ ಜಿಎಸ್ ಟಿ ಪರಿಹಾರವನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕರ್ನಾಟಕದ ಜನ ಏನು ಮಾಡಬೇಕು? ಮಣ್ಣು ತಿನ್ನಬೇಕಾ?
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ದ ಸಂವಿಧಾನದ ಚೌಕಟ್ಟಿನಲ್ಲಿಯೇ ಹೋರಾಟ ಮಾಡುತ್ತ�