×
Ad

ಉಡುಪಿ: ಹೊಟೇಲ್‌ನಲ್ಲಿ ಅಡುಗೆ ಕೆಲಸಗಾರನ ಪುತ್ರಿ, ಪ.ಪಂಗಡದ ಬಾಲಕಿ ಧನ್ಯಾಗೆ ಎಸೆಸೆಲ್ಸಿಯಲ್ಲಿ 622 ಅಂಕ

Update: 2023-05-08 19:46 IST

ಉಡುಪಿ, ಮೇ 8: ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಪಂಗಡದ ನರಸಿಂಹ ನಾಯ್ಕ್‌ನ ಬಡ ಕುಟುಂಬದಲ್ಲಿಂದು ಹರ್ಷದ ಹೊನಲು ಹರಿದಿದೆ. ಈ ಕುಟುಂಬದ ಕುಡಿಯೊಂದು ಇಂದು ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622 ಅಂಕ ಪಡೆದಿರುವುದೇ ಕುಟುಂಬದ ಈ ಸಂತೋಷಕ್ಕೆ ಕಾರಣ. 

ಕಾರ್ಕಳ ತಾಲೂಕು ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಧನ್ಯಾ ನಾಯ್ಕ್ ಅವರೇ ಈ ಸಾಧನೆ ಮಾಡಿದ ಬಾಲಕಿ. ತೀರಾ ಬಡಕುಟುಂಬದಿಂದ ಬಂದ ಈ ಬಾಲಕಿ ವಿದ್ಯೆ ಪಡೆಯುವ ಏಕೈಕ ಉದ್ದೇಶಕ್ಕಾಗಿ ಹರಿಕಂಡಿಗೆ ಸಮೀಪದ ಸಾಂತ್ಯಾರುವಿನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿದ್ದು ಶಾಲೆಗೆ ಹೋಗುತಿದ್ದಾರೆ.

ಈಕೆಯ ಹೆತ್ತವರು ಇರುವುದು ಹೆಬ್ರಿ ತಾಲೂಕಿನ ಮುಂಡಳ್ಳಿಯಲ್ಲಿ. ತಂದೆ ನರಸಿಂಹ ನಾಯ್ಕರಿಗೆ ಹೊಟೇಲ್‌ನಲ್ಲಿ ಅಡುಗೆ ಕೆಲಸ. ತಾಯಿ ಸುಲೋಚನಾ ಮನೆ ವಾರ್ತೆ ನೋಡಿಕೊಂಡಿದ್ದಾರೆ. ಇವರದು ಪರಿಶಿಷ್ಟ ಪಂಗಡದ (ಮರಾಠಿ) ಬಡ ಕುಟುಂಬ. ಧನ್ಯಾ ನಾಯ್ಕಳ ತಮ್ಮ ದೀಕ್ಷಿತ್ ಮೂರನೇ ತರಗತಿಯಲ್ಲಿ ಓದುತಿದ್ದಾನೆ.

ಧನ್ಯಾ ನಾಯ್ಕ್ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವುದು ಬಾಗಲಕೋಟೆಯಲ್ಲಿ. ಎಂಟನೇ ತರಗತಿಯಿಂದ ಆಕೆ ಕಲಿಯುತ್ತಿರುವುದು ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆಯಲ್ಲಿ. ಇದೀಗ ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಧನ್ಯಾ ನಾಯ್ಕ್, ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿತು ಮುಂದೆ ವೈದ್ಯೆಯಾಗುವ ಕನಸನ್ನು ಹೊಂದಿದ್ದಾಳೆ. ತನ್ನ ಕನಸನ್ನು ನನಸುಮಾಡುವ ಛಲವೂ ಆಕೆಗಿದೆ.

ಧನ್ಯಾ ನಾಯ್ಕ್ ಬಹು ಪ್ರತಿಭೆಯ ವಿದ್ಯಾರ್ಥಿನಿ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಹೇಳುತ್ತಾರೆ. ರಂಗೋಲಿ ಸ್ಪರ್ಧೆಯಲ್ಲಿ ಈಕೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಅಲ್ಲದೇ ಅತ್ಯಂತ ಸುಂದರ ಹಾಗೂ ಕಲಾತ್ಮಕವಾಗಿ ಮೆಹಂದಿ ಬರೆಯುವ ಕಲೆ ಈಕೆಗೆ ಕರಗತವಾಗಿದೆ. ಎನ್ಎಂಎಎಸ್ ಪರೀಕ್ಷೆಯಲ್ಲಿ ಧನ್ಯಾ ನಾಯ್ಕ್ ಕಾರ್ಕಳ ತಾಲೂಕಿನ ಟಾಪರ್ ಆಗಿದ್ದಳು ಎಂದು ಸುರೇಶ್ ಮರಕಾಲ ತಿಳಿಸಿದ್ದಾರೆ.

Similar News