21ರೊಳಗೆ ಬ್ರಿಜ್‌ಭೂಷಣ್ ಬಂಧಿಸಲು ಕೇಂದ್ರಕ್ಕೆ ರೈತ ಸಂಘಟನೆಗಳ ಗಡುವು
ಹೊಸದಿಲ್ಲಿ, ಮೇ 8: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ವರಿಷ್ಠ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಮೇ 21ರೊಳಗೆ ಬಂಧಿಸದೆ ಇದ್ದಲ್ಲಿ ತಾವು ಪ್ರತಿಭಟನೆಯನ್ನು ಆರಂಭಿಸುವುದಾಗಿ ಹಲವಾರು ರೈತ ಒಕ್ಕೂಟಗಳ ಸದಸ್ಯರುಗಳು ಹಾಗೂ ಖಾಪ್ (ಜಾತಿ) ಪಂಚಾಯತ್ ಗಳು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿವೆ.
ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಹಲವಾರು ಮಹಿಳಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಸಿಂಗ್ಎದುರಿಸುತ್ತಿದ್ದಾರೆ. ಬ್ರಿಜ್ಭೂಷಣ್ ಶರಣ್ ಸಿಂಗ್ ಅವರ ಬಂಧನವನ್ನು ಆಗ್ರಹಿಸಿ ಎಪ್ರಿಲ್ 23ರಿಂದೀಚೆಗೆ ಕುಸ್ತಿಪಟುಗಳು ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಧರಣಿ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಸಿಂಗ್ ವಿರುದ್ಧ ಎರಡು ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಾಗಿದೆ. ಆದರೆ ಬಿಜೆಪಿ ಸಂಸದರಾದ ಸಿಂಗ್, ರಾಷ್ಟ್ರೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ತಾನು ನಿರಪರಾಧಿಯಾಗಿದ್ದು, ಕಾಂಗ್ರೆಸ್ ಹಾಗೂ ಕೆಲವು ಕೈಗಾರಿಕೋದ್ಯಮಿಗಳು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿ ರವಿವಾರ ಕಾಪ್ ಪಂಚಾಯತ್ ನಾಯಕರು ಹಾಗೂ ದೊಡ್ಡ ಸಂಖ್ಯೆಯ ರೈತರು ಜಂತರ್ಮಂತರ್ಗೆ ಭೇಟಿ ನೀಡಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡಬಾರದೆಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ರೈತ ಒಕ್ಕೂಟಗಳು ಹಾಗೂ ಖಾಪ್ ಪಂಚಾಯತ್ ನಾಯಕರು ಮೇ 21ರಂದು ಮತ್ತೆ ಸಭೆ ಸೇರಲಿದ್ದು, ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲಿವೆ ಎಂದವರು ಹೇಳಿದರು.
‘‘ಅಲ್ಲಿಯವರೆಗೆ ಪ್ರತಿದಿನವೂ ಖಾಪ್ ಪಂಚಾಯತ್ನ ಸದಸ್ಯರು ಪ್ರತಿದಿನವೂ ಜಂತರ್ಮಂತರ್ಗೆ ಆಗಮಿಸಲಿದ್ದು, ನಮ್ಮ ಪುತ್ರಿಯರಿಗೆ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನಮ್ಮ ಪುತ್ರಿಯರಿಗೆ ಏನಾದರೂ ಆದಲ್ಲಿ, ಇಡೀ ದೇಶವು ಅವರನ್ನು ಬೆಂಬಲಕ್ಕೆ ನಿಲ್ಲಲಿದೆ’’ ಎಂದು ಟಿಕಾಯತ್ ಎಚ್ಚರಿಕೆ ನೀಡಿದರು.
ಬ್ರಿಜ್ ಶರಣ್ ಸಿಂಗ್ರನ್ನು ವಿಚಾರಣೆಗೊಳಪಡಿಸುವ ಮುನ್ನ ಅವರನ್ನು ದಿಲ್ಲಿ ಪೊಲೀಸರು ಬಂಧಿಸಬೇಕೆದಂದು ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ತಿಳಿಸಿದ್ದಾರೆ.
ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದವರಿಗೆ ಧನ್ಯವಾದ ಅರ್ಪಿಸಿದ ಅವರು, ಈ ಪ್ರತಿಭಟನೆಯನ್ನು ರೈತನಾಯಕರಾಗಲಿ ಅಥವಾ ಖಾಪ್ ಪಂಚಾಯತ್ಗಳಾಗಲಿ ಹೈಜಾಕ್ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.