ಸುವರ್ಣ ತ್ರಿಭುಜ ಬೋಟು ವಿಡಿಯೋ ರಾಜಕೀಯ ಪ್ರೇರಿತ: ಮಲ್ಪೆ ಮೀನುಗಾರರ ಸಂಘ
ಉಡುಪಿ: ಐದು ವರ್ಷಗಳ ಹಿಂದೆ ಸಂಭವಿಸಿದ ಸುವರ್ಣ ತ್ರಿಭುಜ ಬೋಟು ದುರಂತ ವಿಚಾರವನ್ನು ಇದೀಗ ರಾಜಕೀಯ ಪ್ರೇರಿತವಾಗಿ ವಿಡಿಯೋ ತಯಾರಿಸಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿಗೆ ನೋವು ಉಂಟಾಗಿದೆ ಎಂದು ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ತ್ರಿಭುಜ ಬೋಟು ಹುಡುಕಾಟ ನಡೆಸಲು ಹಾಗೂ ಪರಿಹಾರ ತೆಗೆಸಿಕೊಡಲು ಶಾಸಕ ರಘುಪತಿ ಭಟ್ ತುಂಬಾ ಶ್ರಮ ವಹಿಸಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ವಿಚಾರವನ್ನು ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ವೈರಲ್ ಮಾಡುತ್ತಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ ಎಂದರು.
ದುರಂತದಲ್ಲಿ ಮೃತಪಟ್ಟ ಚಂದ್ರಶೇಖರ್ ಕೋಟ್ಯಾನ್ ಅವರ ಸಹೋದರ ನಿತ್ಯಾನಂದ ಕೋಟ್ಯಾನ್ ಮಾತನಾಡಿ, ಸರಕಾರದಿಂದ ನಮಗೆ 21 ಲಕ್ಷ ರೂ. ಪರಿಹಾರ ಬಂದಿದೆ. ಆದರೆ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರು ಏನಾದರೂ ಎಂಬುದನ್ನು ಸರಕಾರ ಸ್ಪಷತೆ ಕೊಡಬೇಕು ಎಂದು ಮನವಿ ಮಾಡಿದರು.
ಸುವರ್ಣ ತ್ರಿಭುಜ ಬೋಟು ಪಾಲುದಾರರಾದ ಸುರೇಶ್ ಸುವರ್ಣ ಮಾತನಾಡಿ, ಸುವರ್ಣ ತ್ರಿಭುಜ ಬೋಟಿಗೆ ಸುಮಾರು 1.08ಕೋಟಿ ವ್ಯಯ ಮಾಡಲಾಗಿದೆ. ಎರಡು ವರ್ಷಗಳ ಹಿಂದಿನ ಹೊಸ ಬೋಟು ದುರಂತದಿಂದ ಮುಳುಗಿ ನಷ್ಟವಾಗಿದೆ. ಇದಕ್ಕೆ 40 ಲಕ್ಷ ರೂ. ಇನ್ಸೂರೆನ್ಸ್ ಸಿಕ್ಕಿದೆ. ಉಳಿದ ಹಣ ಬ್ಯಾಂಕ್ ಸಾಲದ ರೂಪದಲ್ಲಿದೆ. ಆದುದರಿಂದ ಸರಕಾರ ಬೋಟಿಗೆ ಪರಿಹಾರ ಕೊಡುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ರವಿರಾಜ್ ಸುವರ್ಣ, ಕಿಶೋರ್ ಡಿ.ಸುವರ್ಣ, ರಮೇಶ್ ಕೋಟ್ಯಾನ್, ಕರುಣಾಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.