ಅಬ್ಬರದ ಪ್ರಚಾರದಲ್ಲಿ ಕಾಣೆಯಾದ ಸುಡು ವಾಸ್ತವಗಳು

ವರ್ತಮಾನಕ್ಕೆ ಕುರುಡಾಗಿ ಇತಿಹಾಸಕ್ಕೆ ಕಣ್ತೆರೆಯುವುದರಿಂದ ಭವಿಷ್ಯದ ಹಾದಿ ಮಬ್ಬಾಗುತ್ತದೆ

Update: 2023-05-08 18:46 GMT

ಜಾತಿ-ಮತಧರ್ಮಗಳ ಅಸ್ಮಿತೆಗಳಿಂದಾಚೆಗೂ ಒಂದು ಮಾನವ ಸಮಾಜ ಇದೆ ಎನ್ನುವುದನ್ನೇ ಮರೆತು, ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ಅವಸರದಲ್ಲಿ ವರ್ತಮಾನದ ಹಾದಿಯಲ್ಲಿ ದಾಟಲಾಗದಂತಹ ಕಂದಕಗಳನ್ನು ನಿರ್ಮಿಸಲು ಮುಂದಾಗುತ್ತಿದ್ದೇವೆ. ಈ ಕಂದಕಗಳ ಇಬ್ಬದಿಯಲ್ಲಿ ನಿಂತು ಸಂಭ್ರಮಿಸುವವರಿಗೆ ಕಂದಕದೊಳಗೆ ಪಾತಾಳಕ್ಕೆ ಕುಸಿದಿರುವವರು ಪರಮಾಣು ಕಣಗಳಂತೆ ಮಾತ್ರವೇ ಕಾಣುತ್ತಾರೆ. ಹಾಗಾಗಿ ಆ ಲೋಕದ ದುರಂತ ವಾಸ್ತವಗಳು ಕಣ್ಣಿಗೆ ರಾಚುವುದಿಲ್ಲ. ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಕವಿದಿರುವ ಈ ಅಂಧತ್ವವೇ ಭವಿಷ್ಯದ ದಿನಗಳಲ್ಲಿ ನಿರ್ಣಾಯಕವಾಗುತ್ತದೆ.


 ಕರ್ನಾಟಕದ ಮತದಾರರು ತಮ್ಮ ಅಂತಿಮ ಆಯ್ಕೆಯನ್ನು ಚಲಾಯಿಸಲು ಇನ್ನೊಂದು ದಿನ ಬಾಕಿ ಉಳಿದಿದೆ. ಮೇ 10ರಂದು ಮತಪೆಟ್ಟಿಗೆಗಳ ಮುಂದೆ ನಿಷ್ಠೆಯಿಂದ ಸಾಲುಗಟ್ಟಿನಿಲ್ಲುವ ಸಾಮಾನ್ಯ ಮತದಾರರು ಭವಿಷ್ಯದ ಐದು ವರ್ಷಗಳು ಎಂತಹ ಸರಕಾರ ಇರಬೇಕು ಎನ್ನುವುದನ್ನು ಆಯ್ಕೆ ಮಾಡಲಿದ್ದಾರೆ. ಜನಸಾಮಾನ್ಯರ ಈ ಆಯ್ಕೆಯೇ ಅಂತಿಮ ಎಂದು ಖಚಿತವಾಗಿ ಹೇಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏಕೆಂದರೆ ಯಾವ ಪಕ್ಷಕ್ಕೂ ಬಹುಮತ ದೊರೆಯದಿದ್ದರೆ, ಮತದಾರರ ಅಪೇಕ್ಷೆಗೆ ವಿರುದ್ಧವಾಗಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಪಕ್ಷ ನಿಷ್ಠೆಯನ್ನು ಬದಲಿಸಿ, ಅಧಿಕಾರವನ್ನು ಹಿಡಿಯಲು ಉತ್ಸುಕರಾಗಿರುತ್ತಾರೆ. ಈ ಪಕ್ಷ ಜಿಗಿತವನ್ನೂ ಜನಸೇವೆ ಮತ್ತು ಪ್ರಜೆಗಳ ಹಿತಾಸಕ್ತಿಯ ನೆಲೆಯಲ್ಲೇ ವ್ಯಾಖ್ಯಾನಿಸುವ ಜಾಣ್ಮೆಯನ್ನೂ ನಮ್ಮ ನಡುವಿನ ರಾಜಕಾರಣಿಗಳು ರೂಢಿಸಿಕೊಂಡಿರುವುದರಿಂದ, ಮತದಾರರು ಸಹ ತಮ್ಮದೇ ಆದ ವ್ಯಕ್ತಿ ನಿಷ್ಠೆ-ಪಕ್ಷ ನಿಷ್ಠೆಗೆ ಬದ್ಧರಾಗಿ ಇದನ್ನು ಸಹಜ ಪ್ರಕ್ರಿಯೆಯಂತೆ ಒಪ್ಪಿಕೊಂಡುಬಿಡುತ್ತಾರೆ. ‘‘ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೋಲ್ಲ’’ ಎಂಬ ಪುರಾತನ ಗಾದೆ ಮಾತು ಪದೇ ಪದೇ ಕೇಳಿಬರುತ್ತಲೇ ಇದೆ. ಸರಕಾರಗಳು ಯಾವುದೇ ಬಂದರೂ, ಚುನಾಯಿತ ಸರಕಾರಗಳಿಗೆ ಎಷ್ಟೇ ಇಂಜಿನ್‌ಗಳಿದ್ದರೂ ಎರಡು ಬಲಿಷ್ಠ ಇಂಜಿನ್‌ಗಳ ನಡುವೆ ಹಳಿಯ ಮೇಲೆ ಮುಗ್ಗರಿಸದೆ ಚಲಿಸಬೇಕಾದ ಬೋಗಿಗಳಲ್ಲಿರುವ ಸಾಮಾನ್ಯ ಜನತೆ ತಮ್ಮ ನಿತ್ಯ ಜೀವನದ ಸಂಕಷ್ಟಗಳಿಂದ, ಜಂಜಾಟಗಳಿಂದ, ಸವಾಲುಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವ ನಿರೀಕ್ಷೆಯನ್ನಂತೂ ಇಟ್ಟುಕೊಳ್ಳಲಾಗುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಶೇಕಡಾವಾರು ಲೆಕ್ಕದಲ್ಲಿ ಪರಸ್ಪರ ದೋಷಾರೋಪಣೆಯ ಮೂಲಕ ಹೊರಗೆಡಹುತ್ತಿರುವ ರಾಜಕೀಯ ಪಕ್ಷಗಳ ನಡುವೆಯೇ ಮತದಾರರು ಕನಿಷ್ಠ ಹಾಗೂ ಗರಿಷ್ಠ ಭ್ರಷ್ಟಾಚಾರದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಪರ್ಯಾಯ ಎನ್ನಬಹುದಾದ ಒಂದು ರಾಜಕೀಯ ವೇದಿಕೆ ಇಲ್ಲದಿರುವುದರಿಂದ ಬೇರೆ ದಾರಿಯೂ ಇಲ್ಲವಾಗಿದೆ.

ಬದಲಾದ ರಾಜಕೀಯ ಪರಿಭಾಷೆ
ಈ ಬಾರಿಯ ಪ್ರಚಾರದಲ್ಲಿ ಪ್ರತಿಷ್ಠಿತ ರಾಜಕೀಯ ನಾಯಕರೂ ಬಳಸಿದ ಭಾಷೆ ಕರ್ನಾಟಕದ ರಾಜಕಾರಣ ದಿಕ್ಕುತಪ್ಪುತ್ತಿರುವುದರ ಸಂಕೇತವಾಗಿದೆ. ದೇಶದ ಪ್ರಧಾನಿಯನ್ನು ನಾಲಾಯಕ್ ಎಂದು ಬಣ್ಣಿಸುವುದು, ‘‘ವಿಷಸರ್ಪ’’ ಎನ್ನುವುದು, ವಿರೋಧ ಪಕ್ಷದ ನಾಯಕಿಯನ್ನು ವಿಷಕನ್ಯೆಗೆ ಹೋಲಿಸುವುದು, ರಾಹುಲ್ ಗಾಂಧಿಯನ್ನು ಅರೆಹುಚ್ಚ ಎನ್ನುವುದು, ವಿರೋಧ ಪಕ್ಷದ ಪ್ರಣಾಳಿಕೆಯನ್ನು ಸಾರ್ವಜನಿಕವಾಗಿ ಸುಟ್ಟುಹಾಕುವುದು, ಸೋತ ಕೂಡಲೇ ವಿರೋಧ ಪಕ್ಷವನ್ನು ಪಾಕಿಸ್ತಾನಕ್ಕೆ ರವಾನಿಸಿ ಎಂದು ಕರೆ ನೀಡುವುದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಆಡಳಿತ ಬರುತ್ತದೆ, ಮೀಸಲಾತಿ ಸೌಲಭ್ಯವೆಲ್ಲವೂ ಮುಸ್ಲಿಮರಿಗೆ ಹೋಗುತ್ತದೆ ಎನ್ನುವುದು ಇವೆಲ್ಲವೂ ರಾಜಕೀಯ ಅಪ್ರಬುದ್ಧತೆ ಮತ್ತು ಸಾಮಾಜಿಕ ಅಸೂಕ್ಷ್ಮತೆಗಳನ್ನು ಎತ್ತಿ ತೋರುತ್ತದೆ. ಮತ್ತೊಂದೆಡೆ ವಿರೋಧಿ ನಾಯಕರನ್ನು ಹತ್ಯೆ ಮಾಡುವ ಸಂಚು, ಪಿತೂರಿಯೂ ಸಹ ಈ ಚುನಾವಣೆಗಳಲ್ಲಿ ಪ್ರಮುಖವಾಗಿ ಕಂಡುಬಂದಿದೆ. ಈ ಆರೋಪಗಳ ಸತ್ಯಾಸತ್ಯತೆಗಳ ಹೊರತಾಗಿಯೂ ನಾವು ಗಂಭೀರವಾಗಿ ಗಮನಿಸಬೇಕಿರುವುದು ರಾಜಕೀಯ ನಾಯಕರ ಅಪ್ರಬುದ್ಧತೆ ಮತ್ತು ಅಸೂಕ್ಷ್ಮತೆ ಹಾಗೂ ಇವುಗಳ ಬಗ್ಗೆ ಪಕ್ಷದ ಹಿರಿಯ ನಾಯಕರು, ಹೈಕಮಾಂಡ್ ವಹಿಸುವ ಮೌನ.

ಈ ಅಪ್ರಬುದ್ಧ-ಅಸೂಕ್ಷ್ಮ ಹೇಳಿಕೆಗಳ ಹಿಂದೆ ಎರಡು ಮಜಲುಗಳ ಅಂಧವಿಶ್ವಾಸವನ್ನು ಗುರುತಿಸಬಹುದು. ಮೊದಲನೆಯದು ತಾವು ವೇದಿಕೆಯ ಮೇಲೆ ನಿಂತು ಏನು ಹೇಳಿದರೂ ನೆರೆದಿರುವ ಪ್ರೇಕ್ಷಕರು, ಹಿಂಬಾಲಕರು ನಂಬುತ್ತಾರೆ ಎಂಬ ಅಂಧವಿಶ್ವಾಸ ನಾಯಕರಲ್ಲಿ ಸಹಜವಾಗಿಯೇ ಇರುತ್ತದೆ. ಈ ಅಂಧವಿಶ್ವಾಸವೇ ಭಾರತದ ರಾಜಕಾರಣದಲ್ಲಿ ಸುಳ್ಳುಗಳ ಮಹಾಪೂರವೇ ಹರಿದಾಡುವಂತೆ ಮಾಡುತ್ತಿದೆ. ಈ ಅಂಧವಿಶ್ವಾಸವೇ ತಮ್ಮನ್ನು ಅಧಿಕಾರಕ್ಕೆ ತರುವ ಅತಿ ಸುಲಭ ಅಸ್ತ್ರಗಳು ಎಂಬ ವಾಸ್ತವವನ್ನೂ ರಾಜಕೀಯ ಪಕ್ಷಗಳು ಅರಿತಿರುತ್ತವೆ. ಎರಡನೆಯದು ಮತದಾರರಲ್ಲಿ, ಸಾರ್ವಜನಿಕ ವಲಯದಲ್ಲಿ ಹಾಗೂ ನಾಗರಿಕರಲ್ಲಿ ವ್ಯವಸ್ಥಿತವಾಗಿ ರೂಢಿಸಿಕೊಂಡು ಬರಲಾಗಿರುವ, ನಾಯಕರ ಬಗ್ಗೆ ಪಕ್ಷದ ಬಗ್ಗೆ ಇರುವ ಅಂಧ ವಿಶ್ವಾಸ. ತಮ್ಮ ನೆಚ್ಚಿನ ನಾಯಕರು ಹೇಳುತ್ತಿರುವುದೆಲ್ಲವೂ ಸತ್ಯ ಅಥವಾ ಅವರು ಹೇಳುವುದಂತೆಯೇ ನಡೆದುಕೊಳ್ಳುತ್ತಾರೆ, ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಿಯೇ ತೀರುತ್ತಾರೆ ಎಂಬ ಅಂಧವಿಶ್ವಾಸ ಜನಸಾಮಾನ್ಯರಲ್ಲಿರುತ್ತದೆ. ಈ ಅಂಧವಿಶ್ವಾಸದ ಪರಿಣಾಮವಾಗಿಯೇ ಸರಕಾರಗಳು ಎಂತಹುದೇ ಜನವಿರೋಧಿ ದುರಾಡಳಿತ ನಡೆಸಿದ್ದರೂ ಪುನರಾಯ್ಕೆಯಾಗುತ್ತವೆ. ಆದರೆ ಈ ಎರಡೂ ಅಂಧವಿಶ್ವಾಸಗಳ ನಡುವೆ ಒಂದು ಪ್ರಜ್ಞಾವಂತ ಸಮಾಜ ಸದಾ ಜಾಗೃತವಾಗಿರುತ್ತದೆ. ಪಕ್ಷಾತೀತವಾಗಿ, ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಇಂತಹ ಒಂದು ಸಮಾಜವನ್ನು ಸಣ್ಣ ಪ್ರಮಾಣದಲ್ಲಾದರೂ ಗುರುತಿಸಲು ಸಾಧ್ಯವಿದೆ. ಬಹಿರಂಗವಾಗಿ ವ್ಯಕ್ತವಾಗುವ ಅಭಿಪ್ರಾಯಗಳಿಗೂ ವ್ಯಕ್ತಿಗತ ನೆಲೆಯಲ್ಲಿ ವ್ಯಕ್ತಪಡಿಸುವ ಅನಿಸಿಕೆಗಳಿಗೂ ಅಂತರ ಇರುವುದನ್ನು ಪರಸ್ಪರ-ಆತ್ಮೀಯ-ಆಪ್ತ ಸಂವಹನಗಳಲ್ಲಿ ಸಾಮಾನ್ಯವಾಗಿ ಗುರುತಿಸಬಹುದು. ಆದರೆ ಪ್ರತೀ ವ್ಯಕ್ತಿಯೂ ತನ್ನ ತತ್ವ ಸಿದ್ಧಾಂತ ಮತ್ತು ಪಕ್ಷ ನಿಷ್ಠೆಗಳಿಗೆ ಅನುಗುಣವಾಗಿ ಇಂತಹ ಅಪಸವ್ಯಗಳನ್ನು ಸಹಿಸಿಕೊಳ್ಳುತ್ತಲೇ ಮೌನ ವಹಿಸುವುದು ವಿಡಂಬನೆಯೇ ಸರಿ. ಒಟ್ಟಾರೆಯಾಗಿ ನೋಡಿದಾಗ ನಾವು ನೆಹರೂ-ವಾಜಪೇಯಿ ಯುಗದ ರಾಜಕಾರಣದಿಂದ ಬಹುದೂರ ಸಾಗಿ ಬಂದಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಪರಿಭಾಷೆ ಹಿಂಸಾತ್ಮಕವಾಗಿರುವುದೇ ಅಲ್ಲದೆ ಅಶ್ಲೀಲ, ಅಸಭ್ಯ ಮತ್ತು ಸೌಜನ್ಯರಹಿತವಾಗಿರುವುದನ್ನೂ ಸಹಿಸಿಕೊಳ್ಳಬೇಕಿದೆ. ಮತ್ತದೇ ಪ್ರಶ್ನೆ ಬೇರೆ ದಾರಿ ಏನಿದೆ?

ಅಬ್ಬರದ ನಡುವೆ ವಾಸ್ತವದ ಹುಡುಕಾಟ
ಈ ಪ್ರಶ್ನೆಯನ್ನು ಸದ್ಯಕ್ಕೆ ಬದಿಗಿಟ್ಟು ರಾಜ್ಯ ಚುನಾವಣಾ ಪ್ರಚಾರದ ಅಬ್ಬರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಮಾಜವನ್ನು ಪ್ರೀತಿಸುವ, ಸಂವಿಧಾನವನ್ನು ಗೌರವಿಸುವ ಹಾಗೂ ಕಟ್ಟಕಡೆಯ ಮನುಷ್ಯನನ್ನೂ ತನ್ನಂತೆಯೇ ಕಾಣುವ, ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳು ಸ್ವಾಭಾವಿಕವಾಗಿ ಸಮಾಜದ ಅಂಚಿಗೆ ತಳ್ಳಲ್ಪಟ್ಟಿರುವ ಶೋಷಿತ, ದಮನಿತ, ಅವಕಾಶವಂಚಿತ ಬೃಹತ್ ಜನಸಮೂಹವನ್ನು ಕುರಿತಾಗಿಯೇ ಇರುತ್ತವೆ. ತಳಮಟ್ಟದ ಶ್ರಮಿಕ ಸಮಾಜದ ಮಂದಿಯನ್ನು ಹಣ ಪಡೆದು ಮತ ನೀಡುತ್ತಾರೆ ಎಂದು ಹಲುಬುತ್ತಲೇ, ಮತ ಮಾರಿಕೊಳ್ಳದಿರಿ ಎಂಬ ಪ್ರಜ್ಞಾವಂತ ಅಭಿಯಾನವನ್ನು ನಡೆಸುವ ಸಮಾಜವೇ, ಇದೇ ಸಮುದಾಯಗಳ ಜೀವನ, ಜೀವನಾಂಶ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುವ (ಉತ್ತಮಪಡಿಸುವ ಹಾದಿ ಬಹುದೂರ ಇದೆ) ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷಗಳು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಲು ಏಕೆ ಮುಂದಾಗುವುದಿಲ್ಲ? ಅಂಧ ವಿಶ್ವಾಸದ ಎರಡು ನೆಲೆಗಳ ನಡುವೆ ನಮಗೆ ಕಾಣಬಹುದಾದ ಒಂದು ದೀವಟಿಗೆಯನ್ನು ಈ ಪ್ರಶ್ನಿಸುವ ಮನಸ್ಸುಗಳಲ್ಲಿ ಕಾಣಬಹುದು.

ಪ್ರಸಕ್ತ ಚುನಾವಣೆಯ ಪ್ರಚಾರವೈಖರಿ ಮತ್ತು ಅಬ್ಬರವನ್ನು ಗಮನಿಸಿದಾಗ, ನಮ್ಮ ರಾಜ್ಯ ಅತ್ಯಂತ ಸುಭಿಕ್ಷವಾಗಿದೆ ಅಥವಾ ಶೀಘ್ರದಲ್ಲೇ ಆಗಲಿದೆ ಎಂಬ ಭ್ರಮೆ ಮೂಡಲಿಕ್ಕೂ ಸಾಧ್ಯ. ಆದರೆ ಈ ಪ್ರಚಾರದ ಭರಾಟೆಯಲ್ಲಿ ಸದ್ದಿಲ್ಲದೆ ಕಾಣೆಯಾಗಿರುವ ಕೆಲವು ಜ್ವಲಂತ ಸಮಸ್ಯೆಗಳನ್ನು ರಾಜಕೀಯೇತರ ನೆಲೆಯಲ್ಲಿ ನಿಂತು ಪ್ರಜ್ಞಾವಂತ ಸಮಾಜ ಮುನ್ನೆಲೆಗೆ ತರಬೇಕಿದೆ. 2021-22ರ ನಡುವೆ ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ಹೊರತಾಗಿರುವ ಮಕ್ಕಳ ಸಂಖ್ಯೆ 64 ಸಾವಿರಕ್ಕೂ ಹೆಚ್ಚಾಗಿದೆ ಎಂದು ಶಿಕ್ಷಣ ಇಲಾಖೆಯ ಸಮೀಕ್ಷೆಯಲ್ಲೇ ಹೇಳಲಾಗಿದೆ. ಕೋವಿಡ್ ಹೊರತಾಗಿಯೂ ಗುರುತಿಸಬೇಕಾದ ಸಮಸ್ಯೆ ಇದು. ಇದರ ಪರಿಹಾರ ಇರುವುದು ಸರಕಾರ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸದೃಢಪಡಿಸುವಲ್ಲಿ ಮತ್ತು ಹಳ್ಳಿಹಳ್ಳಿಯಲ್ಲೂ ಸರಕಾರಿ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ವಂಚಿತ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ. ಯಾವ ಪಕ್ಷವಾದರೂ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಪ್ರಾಥಮಿಕ ಶಿಕ್ಷಣ ಸೌಲಭ್ಯಗಳ ಕುರಿತು ಮಾತನಾಡಿವೆಯೇ? ಸದೃಢ, ಸ್ವಸ್ಥ, ಸಬಲೀಕರಣಗೊಂಡ ಸಮಾಜದ ನಿರ್ಮಾಣಕ್ಕೆ ಮುಖ್ಯ ಅಡಿಪಾಯವಾದ ಶಿಕ್ಷಣವೇ ಪ್ರಚಾರದ ಅಬ್ಬರದಲ್ಲಿ ಕಳೆದುಹೋಗಿರುವುದು ದುರಂತ ಅಲ್ಲವೇ?

ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರುವುದು ಪ್ರಶಂಸನೀಯ ವಿಚಾರ. 2020-21ರ ಅವಧಿಯಲ್ಲಿ ರಾಜ್ಯಾದ್ಯಂತ 4,653 ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ನಿಗದಿಪಡಿಸಿದ್ದು, ಕರ್ನಾಟಕದಲ್ಲಿ 5,832 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೂ ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆಯ ಕೊರತೆ ಮತ್ತು ತಾಯಿ/ಶಿಶು ಮರಣ ಪ್ರಮಾಣವನ್ನು ನೋಡಿದರೆ ಗಾಬರಿಯಾಗುವಂತಿದೆ. ರಾಜ್ಯದಲ್ಲಿ 11,961 ಮಕ್ಕಳು ತೀವ್ರ ಸ್ವರೂಪದ ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೀಕ್ಷೆಗಳಲ್ಲೇ ಹೇಳಲಾಗಿದೆ. 3 ವರ್ಷದೊಳಗಿನ 6,635 ಮಕ್ಕಳು ತೀವ್ರ ಅಪೌಷ್ಟಿಕತೆಗೆ ತುತ್ತಾಗಿವೆ. ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 3,64,614 ಇದ್ದರೆ ಮೂರು ವರ್ಷದ ಒಳಗಿನ ಮಕ್ಕಳ ಸಂಖ್ಯೆ 2,49,592ರಷ್ಟಿದೆ. ಇದರಿಂದ ಅರ್ಥವಾಗುವುದೇನು ? ಸರಕಾರ ಆರೋಗ್ಯ ಮತ್ತು ಯೋಗಕ್ಷೇಮದ ಕೇಂದ್ರಗಳನ್ನು ತೆರೆದಿವೆ ಆದರೆ ಅಲ್ಲಿ ನಿರ್ವಹಣೆಯ, ಸಿಬ್ಬಂದಿಯ, ವೈದ್ಯಕೀಯ ಸವಲತ್ತುಗಳ ಹಾಗೂ ಮೂಲೆಯಲ್ಲಿರುವ ಮಂದಿಯನ್ನೂ ಸಂಪರ್ಕಿಸಲು ಬೇಕಾದ ಸಂವಹನ-ಸಂಪರ್ಕ ವ್ಯವಸ್ಥೆಯ ಕೊರತೆ ಇದೆ. ಯಾವ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲೂ ಈ ಸಮಸ್ಯೆ ಇದೆ ಎನ್ನುವುದನ್ನೂ ಗುರುತಿಸಲಾಗಿಲ್ಲ. ಇಂತಹ ಗಂಭೀರ ಜಟಿಲ ಪರಿಸ್ಥಿತಿಯನ್ನು ನಿವಾರಿಸಲು ತಮ್ಮ ಸರಕಾರ ಏನು ಮಾಡುತ್ತದೆ ಎಂಬ ಪ್ರಶ್ನೆಗೆ ಎಲ್ಲ ಪ್ರಣಾಳಿಕೆಗಳೂ ಮೌನವಹಿಸುತ್ತವೆ.

ಮೂರನೆಯ ಜಟಿಲ ಸಮಸ್ಯೆ ಇರುವುದು ಶ್ರಮಿಕ ವರ್ಗಗಳ ಜೀವನ ಮತ್ತು ಜೀವನೋಪಾಯದಲ್ಲಿ. ಉದ್ಯೋಗ ಸೃಷ್ಟಿಯ ಅಂಕಿಅಂಶಗಳು ಏನೇ ಹೇಳಿದರೂ, ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ತತ್ಸಂಬಂಧಿ ನಗರೀಕರಣ ಪ್ರಕ್ರಿಯೆ, ಇದಕ್ಕೆ ಪೂರಕವಾದ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಈ ಹಾದಿಯಲ್ಲಿ ನಿರ್ಗತಿಕರಾಗುವ ಗ್ರಾಮೀಣ ಬಡಜನತೆ, ವಲಸೆ ಬಂದು ನಗರಗಳ ಐಷಾರಾಮಿ ಬದುಕಿನ ಪರದೆಗಳ ಹಿಂದೆ ಮತ್ತೊಮ್ಮೆ ನಿರ್ವಸತಿಗರಾಗಿ ನಾಳಿನ ಕೂಳಿಗಾಗಿ ಹಾತೊರೆಯುವ ಅಸಂಖ್ಯಾತ ವಲಸೆ ಕಾರ್ಮಿಕರು ರಾಜಕೀಯ ಪಕ್ಷಗಳಿಗೆ ಗೋಚರಿಸಲೇಬೇಕಲ್ಲವೇ ? ಈ ಶ್ರಮಿಕ ವರ್ಗದತ್ತ ನೋಡುವಾಗ ಏಕವ್ಯಕ್ತಿಯನ್ನು ಕೇಂದ್ರೀಕರಿಸಲಾಗುವುದಿಲ್ಲ, ಪ್ರತೀ ಶ್ರಮಜೀವಿಯ ಹಿಂದೆ ಒಂದು ಕುಟುಂಬ, ಶಿಕ್ಷಣ ವಂಚಿತ ಮಕ್ಕಳು, ಅನ್ನವಂಚಿತ ಹಸುಳೆಗಳು, ಉದ್ಯೋಗ ವಂಚಿತ ಯುವಕರು/ಯುವತಿಯರು ಇದ್ದೇ ಇರುತ್ತಾರೆ. ಈ ಬೃಹತ್ ಜನಸಮೂಹಕ್ಕೆ ಸಾಂತ್ವನ ನೀಡುವುದಿರಲಿ, ಕನಿಷ್ಠ ನಿಮ್ಮನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳುವಂತಹ ಒಂದು ವಾಕ್ಯವನ್ನೂ ಪ್ರಣಾಳಿಕೆಗಳಲ್ಲಿ ಕಾಣಲಾಗುತ್ತಿಲ್ಲ. ಇದು ದುರಂತ ಅಲ್ಲವೇ?

ಹಸಿವೆ, ಬಡತನ, ನಿರುದ್ಯೋಗ, ನಿರ್ಗತಿಕತೆ, ನಿರ್ವಸತೀಕರಣ ಹಾಗೂ ಅವಕಾಶ ವಂಚನೆ ಇದಾವುದೂ ನಿರ್ವಾತದಲ್ಲಿ ಸಂಭವಿಸುವುದಲ್ಲ. ಆಡಳಿತಾರೂಢ ಸರಕಾರಗಳ ಆಡಳಿತ ನೀತಿಗಳು, ಯೋಜನೆಗಳು ಮತ್ತು ಅನುದಾನಗಳೇ ಇವುಗಳನ್ನು ನಿರ್ಧರಿಸುತ್ತವೆ. ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವ ಇಚ್ಛಾಶಕ್ತಿಯೊಂದಿಗೇ ತಮ್ಮ ಪ್ರಣಾಳಿಕೆಗಳನ್ನು ಬೃಹತ್ ಗ್ರಂಥಗಳ ರೀತಿಯಲ್ಲಿ ರೂಪಿಸುವ ಪ್ರಧಾನ ವಾಹಿನಿಯ ರಾಜಕೀಯ ಪಕ್ಷಗಳಿಗೆ ಈ ಗ್ರಂಥಗಳ ಪುಟಪುಟದಲ್ಲೂ ಹಸಿದ ಮಕ್ಕಳ, ಅಕ್ಷರವಿಲ್ಲದ ಕೂಸುಗಳ, ಸೂರಿಲ್ಲದ ನಿರ್ಗತಿಕರ ಚಿತ್ರಣ ಕಾಣಲೇಬೇಕಲ್ಲವೇ? ಕನಿಷ್ಠ ಮಟ್ಟದ ಶಿಕ್ಷಣ-ಸಮರ್ಪಕ ಆರೋಗ್ಯ ಸೇವೆ-ಕೈಗೆಟಕುವ ವಿದ್ಯಾಭ್ಯಾಸ ಮತ್ತು ಯೋಗಕ್ಷೇಮ, ಎರಡು ಹೊತ್ತಿನ ಕೂಳು ಮತ್ತು ವಿಶ್ರಮಿಸಲು ಒಂದು ಸೂರು ಈ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಚನೆಯನ್ನೂ ಮಾಡದೆ ಜನಸಾಮಾನ್ಯರ ಮುಂದೆ ಸುಖೀ ರಾಜ್ಯದ ಭೂಪಟವನ್ನು ಇಡುವುದು, ನಿರ್ಲಕ್ಷಿತ ಸಮುದಾಯಗಳನ್ನು ಅವಹೇಳನ ಮಾಡಿದಂತೆ ಅಲ್ಲವೇ? ಅನ್ನ-ಸೂರು-ಬಟ್ಟೆ ಹಾಗೂ ವಿದ್ಯೆ-ಆರೋಗ್ಯ ಇವುಗಳನ್ನು ಸಮಸ್ತ ಜನತೆಗೂ ಅಗತ್ಯವಿದ್ದಷ್ಟು ಮಟ್ಟಿಗಾದರೂ ಪೂರೈಸಲು ಶಕ್ಯವಿಲ್ಲದ ಒಂದು ಆಡಳಿತ ವ್ಯವಸ್ಥೆಯನ್ನು ದುರಸ್ತಿ ಮಾಡಲು ಏನು ಮಾಡಬೇಕು ಎಂಬ ಪ್ರಶ್ನೆ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುವ ಯಾವುದೇ ರಾಜಕೀಯ ಪಕ್ಷವನ್ನು ಕಾಡಬೇಕಲ್ಲವೇ? ಹಾಗೆ ಕಾಡಿದ್ದರೆ ಅದು ಚುನಾವಣಾ ಪ್ರಣಾಳಿಕೆಗಳಲ್ಲಿ ಬಿಂಬಿತವಾಗಬೇಕಲ್ಲವೇ?

ಕಣ್ಣೆದುರಿನ ಕಟು ವಾಸ್ತವ

ದುರದೃಷ್ಟವಶಾತ್ ನಮ್ಮ ದೃಷ್ಟಿ ಅಳಿಸಿಹೋಗಿರುವ ಗತ ಇತಿಹಾಸದಲ್ಲಿ ಹೂತುಹೋಗಿದೆ. ಅಲ್ಲೊಂದು ಮಂದಿರ, ಇಲ್ಲೊಂದು ದೇಗುಲ, ಮತ್ತೊಂದು ಮಸೀದಿ, ಚರಿತ್ರೆಯನ್ನು ಆಳಿದವರ ತಪ್ಪುಹೆಜ್ಜೆಗಳು, ಪ್ರಮಾದಗಳು ನಮ್ಮ ಸಂವಹನ ಸೂಕ್ಷ್ಮತೆಯನ್ನು ಮಬ್ಬಾಗಿಸಿಬಿಟ್ಟಿವೆ. ಜಾತಿ-ಮತಧರ್ಮಗಳ ಅಸ್ಮಿತೆಗಳಿಂದಾಚೆಗೂ ಒಂದು ಮಾನವ ಸಮಾಜ ಇದೆ ಎನ್ನುವುದನ್ನೇ ಮರೆತು, ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ಅವಸರದಲ್ಲಿ ವರ್ತಮಾನದ ಹಾದಿಯಲ್ಲಿ ದಾಟಲಾಗದಂತಹ ಕಂದಕಗಳನ್ನು ನಿರ್ಮಿಸಲು ಮುಂದಾಗುತ್ತಿದ್ದೇವೆ. ಈ ಕಂದಕಗಳ ಇಬ್ಬದಿಯಲ್ಲಿ ನಿಂತು ಸಂಭ್ರಮಿಸುವವರಿಗೆ ಕಂದಕದೊಳಗೆ ಪಾತಾಳಕ್ಕೆ ಕುಸಿದಿರುವವರು ಪರಮಾಣು ಕಣಗಳಂತೆ ಮಾತ್ರವೇ ಕಾಣುತ್ತಾರೆ. ಹಾಗಾಗಿ ಆ ಲೋಕದ ದುರಂತ ವಾಸ್ತವಗಳು ಕಣ್ಣಿಗೆ ರಾಚುವುದಿಲ್ಲ. ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಕವಿದಿರುವ ಈ ಅಂಧತ್ವವೇ ಭವಿಷ್ಯದ ದಿನಗಳಲ್ಲಿ ನಿರ್ಣಾಯಕವಾಗುತ್ತದೆ. ವರ್ತಮಾನಕ್ಕೆ ಕುರುಡಾಗಿ ಇತಿಹಾಸಕ್ಕೆ ಕಣ್ತೆರೆಯುವುದರಿಂದ ಭವಿಷ್ಯದ ಹಾದಿಯಲ್ಲಿ ಇಂತಹ ಕಂದಕಗಳೇ ಹೆಚ್ಚಾಗುತ್ತವೆ. ಈ ಪ್ರಜ್ಞೆ ಮತದಾರರಲ್ಲಾದರೂ ಮೂಡುವಂತಾದರೆ, ಪ್ರಜಾಪ್ರಭುತ್ವ ಉಳಿಯುತ್ತದೆ, ಚುನಾವಣೆಗಳೂ ಸಾರ್ಥಕವಾಗುತ್ತವೆ

Similar News