ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ರಾಜಸ್ಥಾನದಲ್ಲಿ ಪ್ರಕರಣ ದಾಖಲು
ಜೈಪುರ/ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಕೊಲೆ ಸಂಚು ರೂಪಿಸಿರುವ ಆರೋಪದಡಿಯಲ್ಲಿ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ರಾಜಸ್ಥಾನ ಪೊಲೀಸರು ಕೊಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಬಿಜೆಪಿ ಶಾಸಕ ಮದನ್ ದಿಲಾವರ್ ವಿರುದ್ಧ ಕೂಡಾ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹೇಳಿಕೆಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರಾಮ್ ಸಿಂಗ್ ಕಸ್ವಾನ್ ನೀಡಿದ ದೂರಿನ ಮೇರೆಗೆ ಸಂಜಯ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಜೆಪಿ ರಾಮಗಂಜ್ ಮಂಡಿ ಶಾಸಕ ಮದನ್ ದಿಲಾವರ್ ಮತ್ತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೊತ್ವಾಲಿ ಎಸಿಪಿ ನರೇಂದ್ರ ಕುಮಾರ್ ತಿಳಿಸಿರುವುದಾಗಿ times of India ವರದಿ ಮಾಡಿದೆ.
ಆರೋಪಿಗಳಲ್ಲಿ ಒಬ್ಬರಾದ ಮದನ್ ದಿಲಾವರ್ ಹಾಲಿ ಶಾಸಕರಾಗಿರುವುದರಿಂದ ಈ ಪ್ರಕರಣವನ್ನು ಸಿಬಿ-ಸಿಐಡಿ ತನಿಖೆ ನಡೆಸಲಿದೆ ಎಂದು ಕುಮಾರ್ ಹೇಳಿದ್ದಾರೆ.