×
Ad

ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸಿ: ಉಡುಪಿ ಡಿಸಿ ಕೂರ್ಮಾರಾವ್

Update: 2023-05-09 21:25 IST

ಉಡುಪಿ, ಮೇ 9:  ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ 118-ಬೈಂದೂರು, 119-ಕುಂದಾಪುರ, 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು, ಮತಯಂತ್ರ ಸೇರಿದಂತೆ ಇನ್ನಿತರೆ ಸಾಮಾಗ್ರಿಗಳೊಂದಿಗೆ ಪೊಲೀಸ್ ಬಂದೋಬಸ್ತ್ ನೊಂದಿಗೆ ಮತಗಟ್ಟೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ. 

ಈ ಮತದಾನ ಕಾರ್ಯಕ್ಕಾಗಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಮತಗಟ್ಟೆ ಅಧಿಕಾರಿಗಳನ್ನು ಹಾಗೂ ಮೈಕ್ರೋ ಅಬ್ಸರ್‌ವರ್ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಅಧ್ಯಕ್ಷಾಧಿಕಾರಿ 1337 ಮಂದಿ, ಸಹಾಯಕ ಅಧ್ಯಕ್ಷಾಧಿಕಾರಿ 1337 ಮಂದಿ, 3 ಮತ್ತು 4ನೇ ಮತಗಟ್ಟೆ ಅಧಿಕಾರಿಗಳು 2674 ಹಾಗೂ 1111 ‘ಡಿ’ ದರ್ಜೆ ನೌಕರರನ್ನು ಇದಕ್ಕಾಗಿ ನೇಮಿಸಲಾಗಿದೆ.

ಮತದಾರರು ತಮ್ಮ ಮತಗಟ್ಟೆ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಎನ್‌ವಿಎಸ್‌ಪಿ ಡಾಟ್ ಇನ್ ಹಾಗೂ ವಿಎಚ್‌ಎ ಆ್ಯಪ್ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ಪಡೆಯಬಹುದು.

ಮೇ 10ರಂದು ನಡೆಯುವ ಮತದಾನ ಕಾರ್ಯಕ್ಕೆ ಮತದಾರರು ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ತಿಳಿಸಿರುವ ಪರ್ಯಾಯ ಗುರುತಿನ ದಾಖಲೆಗಳಾದ  ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ, ಅಂಚೆ ಕಛೇರಿ ಮತ್ತು ಬ್ಯಾಂಕ್‌ಗಳಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆರ್‌ಜಿಐ ಮತ್ತು ಎನ್‌ಪಿಆರ್ ಮೂಲಕ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿ ಕಾರ್ಡ್, ಕೇಂದ್ರ / ರಾಜ್ಯ / ಪಿಎಸ್ಯು / ಪಬ್ಲಿಕ್ ಲಿಮಿಟೆಡ್ ಕಂಪೆನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ , ಲೋಕಸಭಾ ಸದಸ್ಯರು / ರಾಜ್ಯಸಭಾ ಸದಸ್ಯರು / ಶಾಸಕರು / ವಿಧಾನಸಭಾ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳೊಂದಿಗೆ ತೆರಳಿ ಮತದಾನ ಮಾಡಬಹುದಾಗಿದೆ. 

ವಿಶೇಷ ಚೇತನ ಮತದಾರರಿಗಾಗಿ ಗಾಲಿ ಕುರ್ಚಿ, ಭೂತಕನ್ನಡಿ,  ಬ್ರೈಲ್ ಲಿಪಿಯ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್ಯಾಂಪ್, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಸಿದ್ಧತೆ ಮಾಡಲಾಗಿದೆ.

ಮೊಬೈಲ್ ಫೋನ್, ಡಿಜಿಟಲ್, ಪೆನ್ ಕ್ಯಾಮೆರಾ, ಆಯುಧ,  ಶಸ್ತ್ರಾಸ್ತ್ರ, ನೀರಿನ ಬಾಟಲ್, ಯಾವುದೇ ದ್ರಾವಣ, ಆಹಾರ ಸಾಮಾಗ್ರಿಗಳು, ಯಾವುದೇ ಸ್ಪೋಟಕ ಮತ್ತಿತರ ವಸ್ತುಗಳನ್ನು ಮತಗಟ್ಟೆ ಕೇಂದ್ರಕ್ಕೆ ಕೊಂಡೊಯ್ಯಲು ಅವಕಾಶವಿರುವುದಿಲ್ಲ.

ಸಾರ್ವಜನಿಕರು ಮೇ 10ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕೋರಿದ್ದಾರೆ.

Similar News