ಐಪಿಎಲ್: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಜಯ

ಸೂರ್ಯಕುಮಾರ್, ನೆಹಾಲ್ ವಧೇರ ಅರ್ಧಶತಕ

Update: 2023-05-09 17:49 GMT

      ಮುಂಬೈ, ಮೇ 9: ಸೂರ್ಯಕುಮಾರ್ ಯಾದವ್(83 ರನ್, 35 ಎಸೆತ, 7 ಬೌಂಡರಿ, 6 ಸಿಕ್ಸರ್)ಹಾಗೂ ನೆಹಾಲ್ ವಧೇರ (ಔಟಾಗದೆ 52 ರನ್, 34 ಎಸೆತ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಂಗಳವಾರ ನಡೆದ ಐಪಿಎಲ್‌ನ 54ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ಗೆಲ್ಲಲು 200 ರನ್ ಬೆನ್ನಟ್ಟಿದ ಆತಿಥೇಯ ಮುಂಬೈ 16.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.
 
 ನಾಯಕ ರೋಹಿತ್ ಶರ್ಮಾ (7 ರನ್) ಇಶಾನ್ ಕಿಶನ್(42 ರನ್, 21 ಎಸೆತ)ಜೊತೆ ಮೊದಲ ವಿಕೆಟ್‌ನಲ್ಲಿ 51 ರನ್ ಸೇರಿಸಿದರೂ ತನ್ನ ವಿಕೆಟನ್ನು ಬೇಗನೆ ಕೈಚೆಲ್ಲಿದರು. ಮುಂಬೈ 52 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಸೂರ್ಯ ಹಾಗೂ ನೆಹಾಲ್ ವಧೇರ ( ಔಟಾಗದೆ 52 ರನ್, 34 ಎಸೆತ, 4 ಬೌಂಡರಿ, 3 ಸಿಕ್ಸರ್) 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 66 ಎಸೆತಗಳಲ್ಲಿ 140 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

 ಮುಂಬೈ ತಾನಾಡಿದ 11ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿತು. ಆರ್‌ಸಿಬಿ ಪರ ವನಿಂದು ಹಸರಂಗ(2-53 ) ಹಾಗೂ ವಿಜಯಕುಮಾರ್ ವೈಶಾಕ್(2-37) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು  ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಾಯಕ ಎಫ್ ಡು ಪ್ಲೆಸಿಸ್(65 ರನ್, 41 ಎಸೆತ) ಹಾಗೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(68 ರನ್, 33 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.
 

Similar News