ಡಾ. ವಂದನಾ ದಾಸ್ ಕೊಲೆ: ಮಾದಕ ವ್ಯಸನದ ವಿರುದ್ಧ ಸೂಕ್ತ ಪರಿಹಾರ ಅತ್ಯಗತ್ಯ

Update: 2023-05-10 14:37 GMT

ಕೇರಳದ ಯುವ ಡಾ. ವಂದನಾ ದಾಸ್ ಕೊಲೆ ಆಘಾತವನ್ನುಂಟು ಮಾಡಿದೆ. ನಾಡಿನ ಜನರ ಆರೋಗ್ಯಕ್ಕೆ ಕೊಡುಗೆಯನ್ನು ನೀಡಬೇಕಾಗಿದ್ದ ಯುವ ಜೀವ ಒಂದು ವ್ಯವಸ್ಥೆಯ ವೈಫಲ್ಯಕ್ಕೆ ತುತ್ತಾಗಿ ದಾರುಣ ಅಂತ್ಯ ಕಂಡಿದೆ.

ಸರಿಸುಮಾರು ಅದೇ ವಯಸ್ಸಿನ ಈಗ ತಾನೇ ಎಂಬಿಬಿಎಸ್ ಹೌಸ್ ಸರ್ಜನ್ ಮುಗಿಸಿರುವ ಡಾಕ್ಟರ್ ಓರ್ವಳ ತಾಯಿ ಆಗಿರುವ ನಾನು ಈ ವಂದನಾರ ಹೆತ್ತವರ ಈಗಿನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥೈಸಬಲ್ಲೆ.

ಒಂದು ಕಾಲವಿತ್ತು ವೈದ್ಯರನ್ನು ಜೀವ ರಕ್ಷಕರು ಎಂದು ಜನರು ತಿಳಿಯುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಆದರೆ ವಿವಿಧ ರೀತಿಯ ಸಾಮಾಜಿಕ ಬದಲಾವಣೆಗಳು, ಲಾಭಿಗಳು, ಕಾರ್ಪೊರೇಟ್ ವ್ಯವಸ್ಥೆ ಈ ವೈದ್ಯ ವೃತ್ತಿಯ ಪಾವಿತ್ರಕ್ಕೂ ಕುತ್ತು ತಂದಿತು. ಇಂದು ಪ್ರತಿ ವಿಷಯಕ್ಕೂ ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುವುದು, ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಮತ್ತು ಇತರ ಸಿಬ್ಬಂದಿಗಳ ಮೇಲೆ ದಾಳಿಯನ್ನು ನಡೆಸುವುದು ಸರ್ವೇ ಸಾಮಾನ್ಯ ವಿಷಯವಾಗಿ ಬಿಟ್ಟಿದೆ.

ಎಂಬಿಬಿಎಸ್ ಕಲಿಕೆ ಎಂಬುದು ಸಣ್ಣ ವಿಷಯವಲ್ಲ. ಅದಕ್ಕಾಗಿ ಅಪಾರ ತ್ಯಾಗದ ಅಗತ್ಯವಿದೆ. ಈ ವಿದ್ಯಾರ್ಥಿಗಳು ತಮ್ಮ ಯೌವ್ವನದ ಅಮೂಲ್ಯ ಸಮಯವನ್ನು ಈ ಶಿಕ್ಷಣಕ್ಕಾಗಿ ಮುಡಿಪಾಗಿಡುತ್ತಾರೆ. ಮಾತ್ರವಲ್ಲ ರಾತ್ರಿ ಹಗಲು ಓದಿ ರಾತ್ರಿ ಹಗಲು ಆಸ್ಪತ್ರೆಯಲ್ಲಿ ಕೆಲಸ ಮಾಡಿ, ಈ ಡಿಗ್ರಿಯನ್ನು ಪಡೆಯುತ್ತಾರೆ. ಸರಿಯಾದ ನಿದ್ರೆ ಇಲ್ಲದೆ ತಿನ್ನಲು ಸಿಗದ ದಿನ, ರಾತ್ರಿಗಳು ಇವುಗಳಲ್ಲಿ ಒಳಗೊಂಡಿರುತ್ತವೆ.

ಇಂತಹ ವೈದ್ಯೆ ಹತ್ಯೆಯಾದದ್ದು ಯಾರ ಕೈಯಲ್ಲಿ? ಇದು ಇಲ್ಲಿ ಬಹಳ ಯೋಚಿಸತಕ್ಕ ವಿಚಾರ. ಓರ್ವ ಮಾದಕ ವ್ಯಸನಿಗೆ ನಮ್ಮ ಯುವ ವೈದ್ಯೆಯನ್ನು ಬಲಿ ನೀಡಬೇಕಾಯಿತೆ ?. ಈ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದು ಇಲ್ಲಿಗೆ ಕರೆ ತರಲಾಗಿತ್ತು ಎಂದು ಮಾಧ್ಯಮ ವರದಿ ಮಾಡುತ್ತಿದೆ. ಹಾಗಿದ್ದರೆ ಆ ವ್ಯಕ್ತಿಯ ಕೈ ಕೋಳಗಳನ್ನು ಏಕೆ ತೊಡಿಸಲಾಗಿರಲಿಲ್ಲ ? ಮತ್ತು ಈ ಅಪರಾತ್ರಿಯಲ್ಲಿ ಇಂತಹ ಮಾದಕ ವ್ಯಸನಿ ವ್ಯಕ್ತಿಯನ್ನು ಶುಶ್ರೂಷಿಸಲು ಇಂತಹ ಯುವ ವೈದ್ಯೆಗೆ ವಹಿಸಿಕೊಟ್ಟದ್ದು ಎಷ್ಟರ ಮಟ್ಟಿಗೆ ಸರಿ.

ಇದಕ್ಕೆ ಪರಿಹಾರವೆಂಬ ರೂಪದಲ್ಲಿ ಆಸ್ಪತ್ರೆಯಲ್ಲಿ ಆ ವ್ಯವಸ್ಥೆ ಮಾಡಬೇಕು, ಈ ವ್ಯವಸ್ಥೆ ಮಾಡಬೇಕು ಎಂದು ಹೇಳಬಹುದು. ಆದರೆ ಮೂಲಕ್ಕೆ ಮದ್ದು ಮಾಡದೆ ಯಾವ ವ್ಯವಸ್ಥೆಯನ್ನು ಮಾಡಿಯೂ ಏನು ಪ್ರಯೋಜನವಿಲ್ಲ. ಮಾದಕ ವ್ಯಸನದ ವಿರುದ್ಧ ಸೂಕ್ತ ಪರಿಹಾರ ಕಂಡುಕೊಳ್ಳದೆ ಹೋದರೆ ಇನ್ನಷ್ಟು ಇಂತಹ ದುರಂತಗಳನ್ನು ನಾವು ಎದುರು ನೋಡಬೇಕಾಗಿ ಬರಬಹುದು. ಆದುದರಿಂದ ಸರಕಾರವು ಬಾಯಿಗೆ ತೋಚಿದ್ದನ್ನು ಆಡದೆ ಸರಿಯಾದ ಪರಿಪಕ್ವ ತೀರ್ಮಾನವನ್ನು ಕೈಗೊಳ್ಳಬೇಕು. ಸಮಾನ ಮನಸ್ಕರೆಲ್ಲರೂ ಒಟ್ಟು ಸೇರಿ ಭಾರತವನ್ನು ಮಾದಕ ವ್ಯಸನ ಮುಕ್ತಗೊಳಿಸಲು, ಮದ್ಯ ಮುಕ್ತಗೊಳಿಸಲು ಪಣತೊಡಬೇಕಾದದು ಕಾಲದ ಬೇಡಿಕೆಯಾಗಿದೆ. ಇದರ ಹೊರತಾಗಿ ಇಂತಹ ದುರಂತಗಳಿಗೆ ಶಾಶ್ವತ ಪರಿಹಾರ ಖಂಡಿತ ಸಾಧ್ಯವಿಲ್ಲ.

- ಸಬೀಹಾ ಫಾತಿಮಾ

Similar News