×
Ad

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಒದಗಿಸಿದ ಪ್ರದೀಪ್‌ ಆರೆಸ್ಸೆಸ್‌ ನ ಸ್ವಯಂಸೇವಕ: ಕಾಂಗ್ರೆಸ್‌ ಆರೋಪ

Update: 2023-05-10 23:35 IST

ಹೊಸದಿಲ್ಲಿ, ಮೇ 10: ಪಾಕಿಸ್ತಾನದ ಏಜೆಂಟ್ಗೆ ಗೌಪ್ಯ ಮಾಹಿತಿ ರವಾನಿಸಿದ ಆರೋಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದಿಂದ ಬಂಧಿತನಾದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ವಿಜ್ಞಾನಿ ಆರೆಸ್ಸೆಸ್‌ ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ,  ಡಿಆರ್‌ಡಿಓ ವಿಜ್ಞಾನಿ ಪ್ರದೀಪ್ ಕುರುಲ್ಕರ್ನ ಬಂಧನ ತುಂಬಾ ಗಂಭೀರ ವಿಚಾರ ಎಂದು ಹೇಳಿದ್ದಾರೆ. ಇದು ಆರೆಸ್ಸೆಸ್‌ ನ ದೇಶ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ ಎಂದು ಅವರು ತಿಳಿಸಿದ್ದಾರೆ. 

ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಮಹಾರಾಷ್ಟ್ರ ಎಟಿಎಸ್ನಿಂದ ಬಂಧಿತನಾಗಿರುವ ಪ್ರದೀಪ್ ಕುರುಲ್ಕರ್ ಆರೆಸ್ಸೆಸ್‌  ಸ್ವಯಂಸೇವಕ ಹಾಗೂ  ಡಿಆರ್ಡಿಒನ ವಿಜ್ಞಾನಿ. ಈ ಪ್ರಕರಣ ರಾಷ್ಟ್ರೀಯವಾದಿ ಸಂಘಟನೆ ಎಂದು ಕರೆಯಲಾಗುವ ಆರ್ಎಸ್ಎಸ್ ನ ಗೋಸುಂಬೆತನವನ್ನು ಬಹಿರಂಗಪಡಿಸಿದೆ ಎಂದು ಖೇರಾ ಹೇಳಿದ್ದಾರೆ.  

ಈ ವಿಷಯ ರಾಷ್ಟ್ರದ ಭದ್ರತೆಗೆ ಸಂಬಂಧಿಸಿರುವುದರಿಂದ ಕುರುಲ್ಕರ್ ಹಾಗೂ ಆರೆಸ್ಸೆಸ್‌ ನಡುವಿನ ಸಂಬಂಧವೇನು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು  ಪವನ್ ಖೇರಾ ಆಗ್ರಹಿಸಿದ್ದಾರೆ.  ಈ ಬಗ್ಗೆ ಆರ್ಎಸ್ಎಸ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Similar News