ಗಾಝಾದಲ್ಲಿ ಮುಂದುವರಿದ ಇಸ್ರೇಲ್ ದಾಳಿ: ಮತ್ತೆ ಇಬ್ಬರ ಮೃತ್ಯು
ಜೆರುಸಲೇಂ, ಮೇ 11: ಗಾಝಾ ಪಟ್ಟಿಯಲ್ಲಿ ಗುರುವಾರವೂ ಇಸ್ರೇಲ್ ಸೇನೆಯ ವೈಮಾನಿಕ ಕಾರ್ಯಾಚರಣೆ ಮುಂದುವರಿದಿದ್ದು ಸಶಸ್ತ್ರ ಹೋರಾಟ ಪಡೆಯ ಮತ್ತೊಬ್ಬ ಕಮಾಂಡರ್ನನ್ನು ಹತ್ಯೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಗುರುವಾರ ದಕ್ಷಿಣ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಜನವಸತಿ ಕಟ್ಟಡ ಧ್ವಂಸವಾಗಿದ್ದು ಕಟ್ಟಡದಲ್ಲಿದ್ದ ಕನಿಷ್ಟ ಇಬ್ಬರು ಹತರಾಗಿರುವುದಾಗಿ ಫೆಲೆಸ್ತೀನ್ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಕಳೆದ ಕೆಲ ದಿನಗಳಿಂದ ಮುಂದುವರಿದಿರುವ ಸಂಘರ್ಷದಲ್ಲಿ ಮೃತರ ಸಂಖ್ಯೆ 25ಕ್ಕೇರಿದೆ. ಕಳೆದ ಒಂದು ತಿಂಗಳಿಂದ ಇಸ್ರೇಲ್ ಮತ್ತು ಫೆಲೆಸ್ತೀನ್ ಪಡೆಗಳ ನಡುವಿನ ಭೀಕರ ಸಂಘರ್ಷಕ್ಕೆ ವೇದಿಕೆಯಾಗಿರುವ ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಈಜಿಪ್ಟ್ ನಡೆಸುತ್ತಿರುವ ಪ್ರಯತ್ನಗಳ ನಡುವೆಯೇ ಇಸ್ರೇಲ್ ನ ವೈಮಾನಿಕ ದಾಳಿ ಮುಂದುವರಿದಿದೆ.
ದಕ್ಷಿಣ ಮತ್ತು ಮಧ್ಯ ಇಸ್ರೇಲ್ನತ್ತ ಬುಧವಾರ ಸರಣಿ ಕ್ಷಿಪಣಿ ದಾಳಿ ನಡೆದಿರುವುದಕ್ಕೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆದಿರುವುದಾಗಿ ಇಸ್ರೇಲ್ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ. ಸಶಸ್ತ್ರ ಹೋರಾಟಗಾರರ ಗುಂಪಿನ ಮೇಲೆ ನಡೆಯುತ್ತಿರುವ ನಿಖರ ದಾಳಿಯು ನಿರೀಕ್ಷಿತ ಫಲ ನೀಡಿದ್ದು ಉಗ್ರರು ಅಸಹಾಯಕರಾಗಿದ್ದಾರೆ. ಗುರುವಾರ ಗಾಝಾದ ಮೇಲೆ ಉಡಾಯಿಸಲಾದ ರಾಕೆಟ್ಗಳಲ್ಲಿ 25%ದಷ್ಟು ಗಾಝಾ ಪಟ್ಟಿಗೆ ಅಪ್ಪಳಿಸಿದ್ದು 10 ವರ್ಷದ ಬಾಲಕಿ ಸಹಿತ ಕನಿಷ್ಟ 4 ಮಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸಶಸ್ತ್ರ ಹೋರಾಟಗಾರರ ಗುಂಪಿಗೆ ಮಾರಣಾಂತಿಕ ಪ್ರಹಾರ ನೀಡಲಾಗಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಬುಧವಾರ ಪ್ರತಿಪಾದಿಸಿದ್ದಾರೆ. `ಉಗ್ರರಿಗೆ ಮತ್ತು ಅವರ ಹಿಂದೆ ಇರುವವರಿಗೆ ನಾವು ಎಚ್ಚರಿಕೆಯನ್ನು ರವಾನಿಸುತ್ತೇವೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ನೀವು ಎಲ್ಲಿದ್ದರೂ ನಿಮ್ಮನ್ನು ಹುಡುಕುತ್ತೇವೆ, ನಿಮ್ಮನ್ನು ಹೊಡೆದುರುಳಿಸುವ ಸ್ಥಳ ಮತ್ತು ಸಮಯವನ್ನು ನಾವು ಆಯ್ಕೆ ಮಾಡಲಿದ್ದೇವೆ. ಶಾಂತಿಯನ್ನು ಯಾವಾಗ ಮರುಸ್ಥಾಪಿಸಬೇಕು ಎಂಬುದನ್ನು ಇಸ್ರೇಲ್ ನಿರ್ಧರಿಸಲಿದೆ' ಎಂದು ನೆತನ್ಯಾಹು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆ ಖಂಡನೆ
ಗಾಝಾದಲ್ಲಿ ನಾಗರಿಕರ ಸಾವು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಖಂಡಿಸಿದ್ದು ಇಂತಹ ಕೃತ್ಯಗಳನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಎರಡೂ ಕಡೆಯವರು ಗರಿಷ್ಟ ಸಂಯಮ ವಹಿಸುವಂತೆ ಕರೆ ನೀಡಿದ್ದಾರೆ.
ಇಸ್ರೇಲ್ ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿ ತನ್ನ ಕಟ್ಟುಪಾಡುಗಳಿಗೆ ಬದ್ಧವಾಗಿರಬೇಕು, ಬಲದ ಪ್ರಮಾಣಾನುಗುಣ ಬಳಕೆ ಮತ್ತು ಮಿಲಿಟರಿ ಕಾರ್ಯಾಚರಣೆ ಸಂದರ್ಭ ನಾಗರಿಕರು ಮತ್ತು ನಾಗರಿಕ ವಸ್ತುಗಳಿಗೆ ಹಾನಿಯಾಗದಂತೆ ಕಾರ್ಯಸಾಧ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಸಹಾಯಕ ವಕ್ತಾರ ಫರ್ಹಾನ್ ಹಕ್ ಆಗ್ರಹಿಸಿದ್ದಾರೆ.