ಕಪ್ಪುಹಣ ಬಿಳುಪು ಪ್ರಕರಣ: ಎನ್ಸಿಪಿ ನಾಯಕ ಜಯಂತ್ ಪಾಟೀಲ್ ಗೆ ಇ.ಡಿ.ಸಮನ್ಸ್
ಹೊಸದಿಲ್ಲಿ,ಮೇ 12: ಪ್ರಸಕ್ತ ದಿವಾಳಿತನ ಘೋಷಿಸಿರುವ ಹಣಕಾಸು ಸೇವೆಗಳ ಸಂಸ್ಥೆ ‘ಐಎಲ್ಆ್ಯಂಡ್ಎಫ್ಎಸ್’ನಲ್ಲಿ ನಡೆದಿದೆಯೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಎನ್ಸಿಪಿಯ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಜಯಂತ್ ಪಾಟೀಲ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್ ನೀಡಿದೆ.
ಮಹಾರಾಷ್ಟ್ರದ ಇಸ್ಲಾಂಪುರ ಕ್ಷೇತ್ರದ ಶಾಸಕರಾದ 61 ವರ್ಷ ವಯಸ್ಸಿನ ಜಯಂತ್ ಪಾಟೀಲ್ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ ಮತ್ತು ಏಳು ಬಾರಿ ಶಾಸಕರಾಗಿದ್ದಾರೆ.
ಕಪ್ಪುಹಣ ಬಿಳುಪುಗೊಳಿಸಲು ಪಾಟೀಲ್ ಜೊತೆ ನಂಟು ಹೊಂದಿರುವ ಸಂಸ್ಥೆಗಳಿಗೆ ಕೆಲವು ಆರೋಪಿ ಕಂಪೆನಿಗಳು ಕಮೀಶನ್ ಪಾವತಿಸಿವೆಯೆಂಬ ಆರೋಪಗಳ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ. ಕಪ್ಪುಹಣ ಬಿಳುಪು ತಡೆ ಕಾಯ್ದೆಯ ನಿಯಮಾವಳಿಗಳಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ.
ಜಾಗತಿಕ ಲೆಕ್ಕಪತ್ರ ವ್ಯವಹಾರಗಳ ಸಂಸ್ಥೆ ಕೆಪಿಎಂಜಿಯ ಭಾರತೀಯ ಸಹಸಂಸ್ಥೆಗಳಾದ ಡೆಲೊಯಿಟ್ಟ್ ಹ್ಯಾಸ್ಕಿನ್ಸ್ ಹಾಗೂ ಸೆಲ್ಸ್ ಹಾಗೂ ಬಿಎಸ್ಆರ್ ಆ್ಯಂಡ್ ಅಸೋಸಿಯೇಟ್ಸ್ನ ಮುಂಬೈ ಕಾರ್ಯಾಲಯಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ ಆನಂತರ ಏಜೆನ್ಸಿಯು 2019ರಲ್ಲಿ ನಡೆದಿತ್ತೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣದ ಬಗ್ಗೆ ಹೊಸತಾಗಿ ತನಿಖೆಯನ್ನು ಆರಂಭಿಸಿದೆ.
ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (ಐಎಸ್ಆ್ಯಂಡ್ಎಫ್ಎಸ್) 2018ರಲ್ಲಿ ದಿವಾಳಿತನ ಕೋರಿ ಅರ್ಜಿ ಸಲ್ಲಿಸಿತ್ತು.