2008ರ ಮಾಲೆಂಗಾವ್ ಸ್ಫೋಟ ಪ್ರಕರಣ: ಉಲ್ಟಾ ಹೊಡೆದ ನಿರ್ಣಾಯಕ ಸಾಕ್ಷಿ

Update: 2023-05-11 17:57 GMT

ಮುಂಬೈ, ಮೇ. 11: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ನಿರ್ಣಾಯಕ ಸಾಕ್ಷಿ ಪ್ರತಿಕೂಲವಾಗಿ ಬದಲಾಗಿದ್ದಾರೆ ಎಂದು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯ ಬುಧವಾರ ಘೋಷಿಸಿದೆ.

ಇದು ಈ ಪ್ರಕರಣದಲ್ಲಿ ಪ್ರತಿಕೂಲವಾಗಿ ಬದಲಾಗುತ್ತಿರುವ 37ನೇ ಸಾಕ್ಷಿ. ಈ ಪ್ರಕರಣದ 7 ಆರೋಪಿಗಳಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಒಬ್ಬರು.
ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ಕ್ಕೆ ಈ ಹಿಂದೆ ನೀಡಿದ ಹೇಳಿಕೆಯ ಪ್ರಕಾರ, ಸಾಕ್ಷಿದಾರ ಠಾಕೂರ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾಗೂ ಅವರ ಪರಿಚಯವಿತ್ತು.

ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಧೀಶರ ಮುಂದೆ ಬುಧವಾರ ಹೇಳಿಕೆ ದಾಖಲಿಸುವಾಗ ಸಾಕ್ಷಿದಾರ ಠಾಕೂರ್ ಅವರ ಪರಿಚಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಎಟಿಎಸ್‌ಗೆ ಸ್ವಯಂಪ್ರೇರಿತವಾಗಿ ಯಾವುದೇ ಹೇಳಿಕೆ ನೀಡಿರುವುದನ್ನು ನಿರಾಕರಿಸಿದ್ದಾನೆ.

ಅನಂತರ ನ್ಯಾಯಾಲಯ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸಿತು.  ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 300ಕ್ಕೂ ಅಧಿಕ ಸಾಕ್ಷಿಗಳನ್ನು ಪರಿಶೀಲನೆ ನಡೆಸಲಾಗಿದೆ. 37 ಮಂದಿ ಪ್ರಾಸಿಕ್ಯೂಷನ್‌ಗೆ ಬೆಂಬಲ ನೀಡಿಲ್ಲ.

ಭಯೋತ್ಪಾದನಾ ಚಟುವಟಿಕೆ, ಕ್ರಿಮಿನಲ್ ಸಂಚು ಹಾಗೂ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಠಾಕೂರ್ ಹಾಗೂ ಇತರ ಐವರ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯ ಆರೋಪ ಪಟ್ಟಿ ರೂಪಿಸಿದ ಬಳಿಕ ಪ್ರಕರಣದ ವಿಚಾರಣೆ 2018ರಲ್ಲಿ ಆರಂಭವಾಗಿತ್ತು. ಈಗ ಎಲ್ಲರೂ ಜಾಮೀನಿನಲ್ಲಿ ಇದ್ದಾರೆ.

Similar News