ಪ್ರಧಾನಿ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಗೈರು: ಚಂಡಿಗಢದ ವೈದ್ಯಕೀಯ ವಿ.ವಿ.ಯ 36 ವಿದ್ಯಾರ್ಥಿಗಳ ವಿರುದ್ಧ ಕ್ರಮ
ಚಂಡಿಗಢ, ಮೇ. 11: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನ 100ನೇ ಸಂಚಿಕೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಚಂಡಿಗಢದ ಪೋಸ್ಟ್‌ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಪಿಜಿಐಎಂಇಆರ್) ನ 36 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪ್ರಧಾನಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಗೈರಾದ ಹಿನ್ನಲೆಯಲ್ಲಿ ಈ ವಿಶ್ವವಿದ್ಯಾನಿಲಯದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನ ವಿದ್ಯಾರ್ಥಿಗಳಿಗೆ ತಮ್ಮ ಹಾಸ್ಟೆಲ್‌ನಿಂದ 7 ದಿನಗಳ ಕಾಲ ಹೊರಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನ ಪ್ರಾಂಶುಪಾಲ ಡಾ. ಸುಖ್‌ಪಾಲ್ ಕೌರ್ ಅವರು ಮೊದಲ ವರ್ಷದ 28 ವಿದ್ಯಾರ್ಥಿಗಳು ಹಾಗೂ ತೃತೀಯ ವರ್ಷದ 8 ವಿದ್ಯಾರ್ಥಿಗಳಿಗೆ ಮೇ 3ರಂದು ಆದೇಶ ಜಾರಿಗೊಳಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
‘ಮನ್‌ಕಿ ಬಾತ್’ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಕೌರ್ ಅವರು ಆದೇಶದಲ್ಲಿ ಹೇಳಿದ್ದಾರೆ. ‘‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ನಾನು ವಿದ್ಯಾರ್ಥಿಗಳಿಗೆ ಪದೇ ಪದೇ ಹೇಳಿದೆ. ಆದರೆ, ಅವರು ನನ್ನ ಮಾತಿಗೆ ಯಾವುದೇ ಬೆಲೆ ನೀಡಲಿಲ್ಲ’’ ಎಂದು ಹಾಸ್ಟೆಲ್ ವಾರ್ಡನ್ ಹೇಳಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ವಿಭಾಗ ಆಯೋಜಿಸುವ ಹಲವು ಅತಿಥಿ ಉಪನ್ಯಾಸದಲ್ಲಿ ವಿದ್ಯಾರ್ಥಿಗಳು ಪಾಲ್ಗೊಲ್ಳುವ ಅಗತ್ಯತೆ ಇರುವುದರಿಂದ ಶಿಸ್ತು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೌರ್ ಅವರು ಹೇಳಿದ್ದಾರೆ. ಪ್ರಧಾನಿ ಮಂತ್ರಿ ಅವರ ‘‘ಮನ್ ಕಿ ಬಾತ್’’ನಲ್ಲಿ ಪಾಲ್ಗೊಳ್ಳಲು ವಿಫಲವಾಗಿರುವುದಕ್ಕೆ ಈ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಅವರು ನಿರಾಕರಿಸಿದ್ದಾರೆ ಎಂದು ‘‘ದಿ ಇಂಡಿಯನ್ ಎಕ್ಸ್‌ಪ್ರೆಸ್’’ ವರದಿ ಮಾಡಿದೆ.
‘‘ನಾನು ಈ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತರದಾಯಿ. ನಿರ್ದೇಶನವನ್ನು ಅನುಸರಿಸದೇ ಇದ್ದರೆ ಅವರನ್ನು ದಂಡಿಸುವ ಅಗತ್ಯತೆ ಇದೆ’’ ಎಂದು ‘‘ಹಿಂದೂಸ್ತಾನ್ ಟೈಮ್ಸ್’’ಗೆ ಅವರು ತಿಳಿಸಿದ್ದಾರೆ.