ಮೇ 13: ದ.ಕ.ಜಿಲ್ಲೆಯ 60 ಅಭ್ಯರ್ಥಿಗಳ ‘ಜನ-ಮತ’ ತೀರ್ಪು ಪ್ರಕಟ

ರಾಜ್ಯ ವಿಧಾನಸಭಾ ಚುನಾವಣೆ

Update: 2023-05-12 16:09 GMT

ಮಂಗಳೂರು, ಮೇ 12: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 60 ಅಭ್ಯರ್ಥಿಗಳ ‘ಜನ-ಮತ’ ತೀರ್ಪು ಮೇ 13ರಂದು ಪ್ರಕಟಗೊಳ್ಳಲಿದೆ.

8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸುರತ್ಕಲ್ ಸಮೀಪದ ಎನ್‌ಐಟಿಕೆಯು ಸಜ್ಜಾಗಿದ್ದು, ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದೆ. ಮೊದಲು ಸ್ವೀಕೃತವಾದ ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುತ್ತದೆ. ಬಳಿಕ ಇವಿಎಂಗಳ ಎಣಿಕೆ ನಡೆಯಲಿದೆ.

ಜಿಲ್ಲೆಯ 17,81,389 ಮತದಾರರ ಪೈಕಿ 13,76,500 ಮಂದಿ ಬುಧವಾರ ಹಕ್ಕು ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ಶೇ. 77.27 ಮತದಾನವಾಗಿದೆ.

ಮೇ 13ರಂದು ನಿಷೇಧಾಜ್ಞೆ

ಮತದಾನದ ಎಣಿಕೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಮೇ 13ರಂದು ಮುಂಜಾನೆ 5ರಿಂದ ರಾತ್ರಿ 12ರವರೆಗೆ ಸೆ.144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ, ವಿಜಯೋತ್ಸವ ಆಚರಿಸುವುದು, ಯಾವುದೇ ರೀತಿಯ ಮಾರಕಾಸ್ತ್ರಗಳು, ಕಲ್ಲು, ಕ್ಷಾರಕ ವಸ್ತುಗಳು, ಸ್ಫೋಟಕಗಳನ್ನು ಸಂಗ್ರಹಿಸುವುದು, ತೆಗೆದುಕೊಂಡು ಹೋಗುವುದನ್ನು, ಯಾವುದೇ ಪ್ರತಿಕೃತಿ ಪ್ರದರ್ಶನ, ಸುಡುವುದನ್ನು ನಿಷೇಧಿಸಲಾಗಿದೆ.

ಯಾವುದೇ ಬಹಿರಂಗ ಘೋಷಣೆ ಕೂಗುವುದು, ವಾದ್ಯ ಬಾರಿಸುವುದು, ಪದ ಹಾಡುವುದು, ನಕಲಿ ಪ್ರದರ್ಶನ, ಪ್ರಚೋದನಕಾರಿ ಘೋಷಣೆ ಕೂಗುವುದು, ವ್ಯಕ್ತಿಗಳ ತೆಜೋವಧೆ ಮಾಡುವ ಕೃತ್ಯ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

Similar News