×
Ad

ಅತ್ಯಂತ ತೀವ್ರ ಸ್ವರೂಪವನ್ನು ತಳೆದಿರುವ ಮೋಚಾ ಚಂಡಮಾರುತ

Update: 2023-05-12 21:51 IST

ಹೊಸದಿಲ್ಲಿ,ಮೇ 12: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಚಾ ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯು ತಿಳಿಸಿದೆ.

ಪೋರ್ಟ್ ಬ್ಲೇರ್ ನಿಂದ ಪೂರ್ವ-ವಾಯುವ್ಯಕ್ಕೆ ಸುಮಾರು 520 ಕಿ.ಮೀ.ದೂರದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಕೇಂದ್ರೀಕೃತಗೊಂಡಿದೆ ಎಂದು ಐಎಂಡಿ ಟ್ವೀಟಿಸಿದೆ.

ಚಂಡಮಾರುತವು ಬಾಂಗ್ಲಾದೇಶ-ಮ್ಯಾನ್ಮಾರ್ ಕರಾವಳಿಯತ್ತ ಚಲಿಸುವ ಸಾಧ್ಯತೆಯಿದೆ ಮತ್ತು ರವಿವಾರ ಮಧ್ಯಾಹ್ನದ ಸುಮಾರಿಗೆ ಕಾಕ್ಸ್ ಬಝಾರ್ (ಬಾಂಗ್ಲಾದೇಶ) ಮತ್ತು ಕ್ಯುಕ್ಪಿಯು (ಮ್ಯಾನ್ಮಾರ್) ನಡುವೆ ಆಗ್ನೇಯ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕರಾವಳಿಯನ್ನು ದಾಟಲಿದೆ.

ಗಂಟೆಗೆ 150-160 ಕಿ.ಮೀ.ವೇಗದಲ್ಲಿ ಗಾಳಿಯು ಬೀಸಲಿದ್ದು, ಬಾಂಗ್ಲಾದೇಶದ ಕಾಕ್ಸ್ ಬಝಾರ್ ಸಮೀಪದ ಕರಾವಳಿಯ ತಗ್ಗು ಪ್ರದೇಶದಲ್ಲಿ 1.5-2 ಮೀ.ಎತ್ತರದ ಅಲೆಗಳಿಗೆ ಕಾರಣವಾಗಲಿದೆ ಎಂದು ಐಎಂಡಿ ತಿಳಿಸಿದೆ.

ಚಂಡಮಾರುತವು ಭಾರತದಲ್ಲಿ ಅಪ್ಪಳಿಸದಿದ್ದರೂ ಶನಿವಾರದಿಂದ ತ್ರಿಪುರಾ ಮತ್ತು ಮಿರೆರಾಮ್ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರವಿವಾರ ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಮಿನ ಹಲವು ಸ್ಥಳಗಳಲ್ಲಿ ಮಳೆ ಬೀಳುವ ನಿರೀಕ್ಷೆಯಿದೆ.

ರವಿವಾರದವರೆಗೆ ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಐಎಂಡಿ, ಈಗಾಗಲೇ ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿರುವ ಮೀನುಗಾರರಿಗೆ ತೀರಕ್ಕೆ ಮರಳುವಂತೆ ಸೂಚಿಸಿದೆ.

ಮೋಚಾ ಚಂಡಮಾರುತವು ತೀವ್ರ ಸ್ವರೂಪವನ್ನು ತಳೆದಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ಪಶ್ಚಿಮ ಬಂಗಾಳದ ದಿಘಾದಲ್ಲಿ ತನ್ನ ಎಂಟು ತಂಡಗಳನ್ನು ಮತ್ತು 200 ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಿದೆ. ಭಾರತೀಯ ತಟರಕ್ಷಣಾ ಪಡೆಯೂ ತನ್ನ ಘಟಕಗಳನ್ನು ಕಟ್ಟೆಚ್ಚರದಲ್ಲಿರಿಸಿದೆ.

ಈ ನಡುವೆ ಬಾಂಗ್ಲಾದೇಶ ಎಲ್ಲ ಬಂದರುಗಳಿಗೆ ಎಚ್ಚರಿಕೆಯನ್ನು ಹೊರಡಿಸುವ ಮೂಲಕ ಚಂಡಮಾರುತವನ್ನು ಎದುರಿಸಲು ಸಜ್ಜಾಗಿದೆ,ಆದರೆ ಅದು ಇನ್ನೂ ತೆರವು ಕಾರ್ಯಾಚರಣೆಗೆ ಆದೇಶಿಸಿಲ್ಲ.

ಅತ್ತ ಮ್ಯಾನ್ಮಾರ್ ಚಂಡಮಾರುತವು ದೇಶಕ್ಕೆ ಅಪ್ಪಳಿಸುವ 12 ಗಂಟೆಗಳ ಮೊದಲು ರೆಡ್ ಅಲರ್ಟ್ ಹೊರಡಿಸಲಿದೆ . ಅಗತ್ಯವಾದರೆ ಸಾವಿರಾರು ಜನರನ್ನು ತೆರವುಗೊಳಿಸುವ ಯೋಜನೆಯನ್ನೂ ಅದು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Similar News