ಕೇಂದ್ರ ಸರಕಾರದಿಂದ ತೀರ್ಪಿನ ಉಲ್ಲಂಘನೆ: ದಿಲ್ಲಿ ಸರಕಾರದಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ

Update: 2023-05-12 16:52 GMT

ಹೊಸದಿಲ್ಲಿ, ಮೇ 12: ದಿಲ್ಲಿಯ ಸೇವೆಗಳ ಕಾರ್ಯದರ್ಶಿಯ ವರ್ಗಾವಣೆಯನ್ನು ಕೇಂದ್ರ ಸರಕಾರವು ಜಾರಿಗೊಳಿಸುತ್ತಿಲ್ಲ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಸರಕಾರವು ಸುಪ್ರೀಂ ಕೋರ್ಟ್ ಗೆ ಶುಕ್ರವಾರ ದೂರು ನೀಡಿದೆ.

ಅಧಿಕಾರಿಗಳನ್ನು ನೇಮಿಸಲು ಮತ್ತು ವರ್ಗ ಮಾಡಲು ದಿಲ್ಲಿ ಸರಕಾರಕ್ಕೆ ಅಧಿಕಾರವಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿತ್ತು. ನ್ಯಾಯಾಲಯ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ, ದಿಲ್ಲಿ ಸರಕಾರವು ತನ್ನ ಸೇವೆಗಳ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರೆಯನ್ನು ವರ್ಗಗೊಳಿಸಿತ್ತು.

ಅದಾದ ಒಂದು ದಿನದ ಬಳಿಕ, ದಿಲ್ಲಿ ಸರಕಾರದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಹಾಜರಾದ ಹಿರಿಯ ವಕೀಲ ಎ.ಎಮ್. ಸಿಂಘ್ವಿ, ರಾಜ್ಯ ಸರಕಾರದ ಆದೇಶವನ್ನು ಪಾಲಿಸಲು ಕೇಂದ್ರ ಸರಕಾರ ನಿರಾಕರಿಸಿದೆ ಹಾಗೂ ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿತು.

ಈ ಅರ್ಜಿಯ ವಿಚಾರಣೆಗೆ ಮುಂದಿನ ವಾರ ಪೀಠವೊಂದನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿದರು.

ರಾಜ್ಯ ಸರಕಾರದ ಅಧಿಕಾರಗಳನ್ನು ಕೇಂದ್ರ ಸರಕಾರವೇ ಚಲಾಯಿಸುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಐವರು ಸದಸ್ಯರ ಸಾಂವಿಧಾನಿಕ ಪೀಠವೊಂದು ಗುರುವಾರ ಕೇಜ್ರಿವಾಲ್ ಸರಕಾರದ ಪರವಾಗಿ ಮಹತ್ವದ ತೀರ್ಪು ನೀಡಿತ್ತು. ಪೊಲೀಸ್, ಜಮೀನು ಮತ್ತು ಸಾರ್ವಜನಿಕ ವ್ಯವಸ್ಥೆಯನ್ನು ಹೊರತುಪಡಿಸಿದ ದಿಲ್ಲಿಯ ಎಲ್ಲಾ ಸೇವೆಗಳ ಮೇಲೆ ಚುನಾಯಿತ ಸರಕಾರವೇ ನಿಯಂತ್ರಣ ಹೊಂದಿರುತ್ತದೆ ಹಾಗೂ ಅಧಿಕಾರಿಗಳ ನೇಮಕಾತಿ, ವರ್ಗಾವಣೆ ಮತ್ತು ನಿಭಾವಣೆಯ ಅಧಿಕಾರ ಚುನಾಯಿತ ಸರಕಾರಕ್ಕಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತ್ತು.

ತೀರ್ಪಿನ ಬಳಿಕ, ದಿಲ್ಲಿ ಸರಕಾರವು ದಿಲ್ಲಿ ಜಲ ಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಕೆ. ಸಿಂಗ್ರನ್ನು ಮೋರೆಯ ಸ್ಥಾನದಲ್ಲಿ ನೇಮಿಸಿತ್ತು.

Similar News