ಶ್ರೀಸಾಮಾನ್ಯನ ನಂಬಿಕೆಗಳೂ ಅಸಾಮಾನ್ಯರ ಕಸರತ್ತುಗಳೂ

Update: 2023-05-13 04:37 GMT

ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ತಳಮಟ್ಟದ ಜನಸಾಮಾನ್ಯರ ನಡುವೆ ಶ್ರದ್ಧೆ ಮತ್ತು ನಂಬಿಕೆಗಳು ಮಹತ್ತರ ಪಾತ್ರ ವಹಿಸುತ್ತವೆ. ತಮ್ಮ ಜೀವನ ಮತ್ತು ಜೀವನೋಪಾಯದ ನಿತ್ಯ ದುಡಿಮೆಯ ನಡುವೆಯೇ ಬಹುಸಂಖ್ಯೆಯ ಜನತೆ ಭವಿಷ್ಯದ ಒಳಿತಿಗಾಗಿ ಯಾವುದೋ ಒಂದು ಅತೀತ ಶಕ್ತಿಯನ್ನು ನಂಬಿಯೇ ಬದುಕುತ್ತಾರೆ. ಈ ನಂಬಿಕೆಗಳ ಹಿಂದಿನ ವೈಜ್ಞಾನಿಕತೆ ಮತ್ತು ಅವುಗಳಲ್ಲಿ ಅಡಗಿರುವ ಮೌಢ್ಯಗಳನ್ನು ಬದಿಗಿಟ್ಟು ನೋಡಿದಾಗ, ಈ ಸಾಮಾನ್ಯ ಜನತೆಗೆ ನಂಬಿಕೆಗಳು ಸಾಂತ್ವನದ ನೆಲೆಯಾಗಿಯೇ ಕಾಣುತ್ತದೆ. ಆದರೆ ವ್ಯಕ್ತಿಗತ ನೆಲೆಯಲ್ಲಿ ಆಳವಾಗಿ ಬೇರೂರಿರುವ ನಂಬಿಕೆಗಳು ಸಾಮುದಾಯಿಕ ಸ್ವರೂಪ ಪಡೆದಾಗ ಅಲ್ಲೊಂದು ಸಾಮಾಜಿಕ ಹಿತಾಸಕ್ತಿ ಅಥವಾ ಅಸ್ತಿತ್ವವೂ ಸೃಷ್ಟಿಯಾಗುತ್ತದೆ. ಆರಾಧನಾ ಸಂಸ್ಕೃತಿಯಿಂದ ಇಂದಿಗೂ ಹೊರಬರಲಾಗದ ಭಾರತೀಯ ಸಮಾಜದಲ್ಲಿ ಈ ಸಾಮುದಾಯಿಕ ನೆಲೆಯ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸಗಳೇ ಸಮಾಜದ ಪ್ರಬಲ ವರ್ಗಗಳ ಪಾರಮ್ಯಕ್ಕೆ, ಪ್ರಾಬಲ್ಯಕ್ಕೆ ಮತ್ತು ಆಧಿಪತ್ಯಕ್ಕೆ ಪ್ರಶಸ್ತ ಭೂಮಿಕೆಗಳಾಗುತ್ತವೆ.

ಇಂತಹ ಸಾಮಾಜಿಕ ಪ್ರಾಬಲ್ಯದ ವಲಯಗಳು ರಾಜಕೀಯ ರಂಗದಲ್ಲಿ ಪಾರಮ್ಯ ಸಾಧಿಸಿದಾಗ ಜನಸಾಮಾನ್ಯರ ಶ್ರದ್ಧಾ ಕೇಂದ್ರಗಳೂ ರಾಜಕೀಯ ಮೇಲಾಟದ ಅಖಾಡಗಳಾಗಿ ಪರಿವರ್ತನೆಯಾಗಿಬಿಡುತ್ತದೆ. ಮೋಸ ಕಪಟ ವಂಚನೆ ಇವುಗಳಿಂದ ಮುಕ್ತವಾದ ಶ್ರೀಸಾಮಾನ್ಯನ ಒಂದು ಸಾಮಾಜಿಕ ಪರಿಸರದಲ್ಲೂ ತಮ್ಮ ವಂಚಕ ಮಾರ್ಗಗಳ ಮೂಲಕ ಅಧಿಕಾರ ಪಡೆಯಲೆತ್ನಿಸುವ ರಾಜಕೀಯ ನಾಯಕರಿಗೆ ಇಂತಹ ಅಮಾಯಕ ಜನರ ವಿಶ್ವಾಸ ಗಳಿಸಲು ಇಂತಹ ಆಣೆ ಪ್ರಮಾಣಗಳು ಸಹಾಯಕವಾಗಿ ಪರಿಣಮಿಸುತ್ತವೆ. ಈ ಆಣೆ ಪ್ರಮಾಣಗಳು ಶ್ರೀಸಾಮಾನ್ಯನ ಅಪೇಕ್ಷೆಯಾಗಿರುವುದಕ್ಕಿಂತಲೂ ಹೆಚ್ಚಾಗಿ ಸಮಾಜದ ಮೇಲೆ ಹಿಡಿತ ಸಾಧಿಸಲು ಹೆಣಗಾಡುವ ನಾಯಕರ ಅನಿವಾರ್ಯತೆಯಾಗಿರುತ್ತದೆ.

ನಂಬಿಕೆ ಶ್ರದ್ಧೆ ಮತ್ತು ರಾಜಕಾರಣ

ಕಳೆದ ಮೂರು ದಶಕಗಳಿಂದೀಚೆಗೆ ಭಾರತದಲ್ಲಿ ಮತಧರ್ಮ ರಾಜಕಾರಣ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗಳ ಸಂದರ್ಭದಲ್ಲಿ ದೈವ ನಂಬಿಕೆಗಳು ಮತ್ತು ಶ್ರದ್ಧಾ ಕೇಂದ್ರಗಳು ಅಧಿಕಾರ ರಾಜಕಾರಣದ ಕೇಂದ್ರ ಬಿಂದುಗಳಾಗುತ್ತಿವೆ. ರಾಮಮಂದಿರದ ಕಾರ್ಯಸೂಚಿಯೊಂದಿಗೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರ ಗಳಿಸಿದ ಬಿಜೆಪಿ ಕರ್ನಾಟಕದಲ್ಲೂ ಸಹ ಬಾಬಾ ಬುಡಾನ್‌ಗಿರಿಯ ದತ್ತಪೀಠವನ್ನು ಅಯೋಧ್ಯೆ ಮಾದರಿಯಲ್ಲೇ ರಾಜಕೀಯ ಭೂಮಿಕೆಯಾಗಿ ಬಳಸಿಕೊಂಡಿದ್ದನ್ನು ೨೦೦೦ದ ಆಸುಪಾಸಿನ ಚುನಾವಣೆಗಳಲ್ಲಿ ಗುರುತಿಸಬಹುದು. ಆದರೆ ೨೦ ವರ್ಷಗಳ ನಂತರ ಬಿಜೆಪಿಯ ಆಯ್ಕೆ ಬದಲಾಗಿದೆ. ಒಂದು ಸೀಮಿತ ಸಮುದಾಯವನ್ನು ಮಾತ್ರ ಆಕರ್ಷಿಸುವ ದತ್ತಪೀಠದ ಬದಲು ಈ ಬಾರಿ ಬಿಜೆಪಿ ಸಮಸ್ತ ಜನಕೋಟಿ ಆರಾಧಿಸುವ ಆಂಜನೇಯನನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ. ಉತ್ತರ ಕರ್ನಾಟಕದಲ್ಲಿ ಜನಸಾಮಾನ್ಯರ ಶ್ರದ್ಧಾ ಕೇಂದ್ರವಾಗಿರುವ ಕೊಪ್ಪಳದ ಸಮೀಪ ಇರುವ ಅಂಜನಾದ್ರಿ ಪರ್ವತ ಈಗ ರಾಜಕೀಯ ಪಗಡೆಯಾಟದಲ್ಲಿ ದಾಳವಾಗಿ ಪರಿಣಮಿಸಿದೆ. ದೈವತ್ವ ಅಥವಾ ದೇವರು ಎಂಬ ಪರಿಕಲ್ಪನೆಯೇ ಮಾನವ ಸಮಾಜ ತನ್ನ ಸ್ವಾರ್ಥಕ್ಕಾಗಿ ಸೃಷ್ಟಿಸಿಕೊಂಡಿರುವ ಒಂದು ಸಾರ್ವತ್ರಿಕ ಅಭಿವ್ಯಕ್ತಿಯಾಗಿರುವುದರಿಂದ ದೇವರುಗಳನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದೂ ಅತಿಶಯವೆನಿಸುವುದಿಲ್ಲ.

ಈ ದೈವತ್ವದ ಚೌಕಟ್ಟಿನಿಂದ ಹೊರಬಂದು ನೋಡಿದಾಗ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಸಂಸದೀಯ ಚುನಾವಣೆಗಳು ಸಹ ಶ್ರೀಸಾಮಾನ್ಯನ ಶ್ರದ್ಧೆ ಮತ್ತು ನಂಬಿಕೆಯ ಒಂದು ಭಾಗವಾಗಿಯೇ ಕಾಣುತ್ತದೆ. ಸಾವಿರಾರು ಜನರ ತ್ಯಾಗ ಬಲಿದಾನಗಳ ಫಲವಾಗಿ ವಸಾಹತುಶಾಹಿಯ ದಾಸ್ಯದ ಸಂಕೋಲೆಗಳಿಂದ ವಿಮೋಚನೆ ಪಡೆದ ಭಾರತಕ್ಕೆ ಸ್ವಾತಂತ್ರ್ಯಪೂರ್ವದ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಮಹನೀಯರು ಒಂದು ಶ್ರೇಷ್ಠ ಸಂವಿಧಾನ, ಈ ಸಂವಿಧಾನವನ್ನು ಕಾಪಾಡಲು ಅಗತ್ಯವಾದ ಸಾಂಸ್ಥಿಕ ನೆಲೆಗಳು ಹಾಗೂ ಸಾಂವಿಧಾನಿಕ ಆಶಯಗಳನ್ನು ಈಡೇರಿಸುವ ಸಲುವಾಗಿ ಶಾಸನ ಸಭೆಗಳನ್ನೂ ಸಹ ರೂಪಿಸಿ, ಜನಕೋಟಿಯ ಮುಂದೆ ಕೆಲವು ಶ್ರದ್ಧಾ ಕೇಂದ್ರಗಳನ್ನು ಸ್ಥಾಪಿಸಿ ಹೋಗಿದ್ದಾರೆ. ಭಾರತದ ಸಮಸ್ತ ಜನಕೋಟಿಗೂ ನಮ್ಮ ದೇಶದ ನ್ಯಾಯವ್ಯವಸ್ಥೆ, ಶಾಸನಸಭೆಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳು ಶ್ರದ್ಧಾ ಕೇಂದ್ರಗಳಾಗಿದ್ದರೆ ಇವುಗಳನ್ನು ಪ್ರಾತಿನಿಧಿಕವಾಗಿ ನಿರ್ವಹಿಸುವ ಶಾಸಕರು, ಸಂಸದರು, ನ್ಯಾಯಾಂಗ ಮತ್ತು ಅಧಿಕಾರಶಾಹಿಯು ವಿಶ್ವಾಸಾರ್ಹ ನೆಲೆಗಳಾಗಿರುತ್ತವೆ.

ದುರಂತ ಎಂದರೆ ಕೇವಲ ೭೫ ವರ್ಷಗಳಲ್ಲೇ ನ್ಯಾಯಾಂಗವನ್ನು ಹೊರತುಪಡಿಸಿ ಉಳಿದೆಲ್ಲ ಶ್ರದ್ಧಾ ಕೇಂದ್ರಗಳೂ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡುಬಿಟ್ಟಿವೆ. ಶಾಸನ ಸಭೆಗಳನ್ನು ಪ್ರವೇಶಿಸಲು ಬಯಸುವ ಜನಪ್ರತಿನಿಧಿಗಳು ತಮ್ಮ ಆಣೆ ಪ್ರಮಾಣಗಳ ವಲಯವನ್ನು ವಿಸ್ತರಿಸಿದ್ದಾರೆ. ಇದೀಗ ಕರ್ನಾಟಕದ ಮಟ್ಟಿಗೆ ಆಂಜನೇಯನಿಗೂ ಒಂದು ಅವಕಾಶ ನೀಡಲಾಗಿದೆ. ನೀವು ಹಾಕುವ ಪ್ರತಿಯೊಂದು ಮತವೂ ಹನುಮಪ್ಪನಿಗೆ ನ್ಯಾಯ ಒದಗಿಸಲು ಹಾಕುವ ಮತ ಎಂಬ ರಾಜಕೀಯ ನಾಯಕರ ಸಾರ್ವಜನಿಕ ಹೇಳಿಕೆಗಳು ಇದನ್ನೇ ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಬೆಂಗಳೂರು ರೋಡ್ ಶೋ ಸಂದರ್ಭದಲ್ಲಿ ಯಾವುದೇ ರಾಮಮಂದಿರಕ್ಕೆ ಭೇಟಿ ನೀಡದೆ, ಆಂಜನೇಯ ಮೂರ್ತಿಗೆ ನಮಸ್ಕರಿಸಿ ಜೈ ಬಜರಂಗ ಬಲಿ ಘೋಷಣೆಯೊಂದಿಗೆ ತಮ್ಮ ಪ್ರಚಾರದಲ್ಲಿ ತೊಡಗಿದ್ದನ್ನು ಗಮನಿಸಬಹುದು.

ಆಯ್ಕೆ-ಅನಿವಾರ್ಯತೆಗಳ ನಡುವೆ

ಅಂದರೆ ರಾಜಕಾರಣಿಗಳಿಗೆ, ಪಕ್ಷಗಳಿಗೆ ಆದ್ಯತೆಗಳು ಸಾಂದರ್ಭಿಕ ಅನಿವಾರ್ಯತೆಗಳಿಗೆ ತಕ್ಕಂತೆ ಬದಲಾಗುತ್ತಿರುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ತಳಮಟ್ಟದ ಸಮಾಜದಲ್ಲಿ ತನ್ನ ನಿತ್ಯ ಬದುಕಿನ ಬವಣೆ ಎದುರಿಸುವ ಶ್ರೀಸಾಮಾನ್ಯನ ದೃಷ್ಟಿಯಲ್ಲಿ ಸಂವಿಧಾನ ಮತ್ತು ಶಾಸನಸಭೆ ಎನ್ನುವ ಎರಡು ಶ್ರದ್ಧಾ ಕೇಂದ್ರಗಳು ಬಹಳ ಮುಖ್ಯವಾಗುತ್ತದೆ. ನೂರೆಂಟು ದೇವರುಗಳ ನಡುವೆ ತಮ್ಮ ಶ್ರದ್ಧೆಯನ್ನು ಬದಲಾಯಿಸುವ ಆಯ್ಕೆ ಸ್ವಾತಂತ್ರ್ಯ ಶ್ರೀಸಾಮಾನ್ಯನಿಗೆ ಇರುವಂತೆಯೇ ರಾಜಕೀಯ ಪಕ್ಷಗಳಿಗೂ ಇರುತ್ತದೆ. ಆದರೆ ತಮ್ಮ ನಿತ್ಯ ಜೀವನದ ಜೀವನೋಪಾಯ ಮಾರ್ಗಗಳು ಸುಗಮವಾಗಲು, ಭವಿಷ್ಯದ ಬದುಕು ಹಸನಾಗಲು ಆಶ್ರಯಿಸಲಾಗುವ ಸಾಂವಿಧಾನಿಕ ಶ್ರದ್ಧಾ ಕೇಂದ್ರಗಳ ನೆಲೆಯಲ್ಲಿ ಶ್ರೀಸಾಮಾನ್ಯನಿಗೆ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ. ಜನಪ್ರತಿನಿಧಿಗಳನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ಸಂವಿಧಾನವೇ ಮತದಾನ ವ್ಯವಸ್ಥೆಯ ಮೂಲಕ ನೀಡಿದೆ. ಆದರೆ ಈ ಜನಪ್ರತಿನಿಧಿಗಳು ತಮ್ಮ ಕರ್ತವ್ಯ, ಬಾಧ್ಯತೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಲು ಬಳಸುವ ಸಾಂಸ್ಥಿಕ ನೆಲೆಗಳನ್ನು ಸರಿಪಡಿಸುವ ಅವಕಾಶವೂ ಶ್ರೀಸಾಮಾನ್ಯನಿಗೆ ಇರುವುದಿಲ್ಲ. ಚುನಾವಣೆ ಮತ್ತು ಮತದಾನ ಮಾತ್ರ ಶ್ರೀಸಾಮಾನ್ಯನ ಮುಂದಿರುವ ಆಯ್ಕೆಯಾಗಿರುತ್ತದೆ.

ಈ ಸಾಂವಿಧಾನಿಕ ಶ್ರದ್ಧಾ ಕೇಂದ್ರಗಳನ್ನು ಪ್ರವೇಶಿಸುವ ಹಾಗೂ ಆಡಳಿತ ನೀತಿಗಳ ಮೂಲಕ ನಿರ್ವಹಿಸುವ, ನಿಯಂತ್ರಿಸುವ ಜನಪ್ರತಿನಿಧಿಗಳಿಗೆ ಇಲ್ಲಿಯೂ ಶ್ರೀಸಾಮಾನ್ಯನ ನಂಬಿಕೆಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಬೇಕಲ್ಲವೇ? ಮೂಲಭೂತ ಶಿಕ್ಷಣ, ಆರೋಗ್ಯ, ಯೋಗಕ್ಷೇಮ ಮತ್ತು ಸಾಮಾಜಿಕ ಸೌಹಾರ್ದವನ್ನು ಬಯಸುವ ಸಾಮಾನ್ಯ ನಾಗರಿಕರಿಗೆ ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷದಿಂದಲೂ ಹಳ್ಳಿಹಳ್ಳಿಯಲ್ಲೂ ಪ್ರಾಥಮಿಕ ಶಾಲೆ/ಆರೋಗ್ಯ ಕೇಂದ್ರ/ಗ್ರಂಥಾಲಯ ನಿರ್ಮಿಸುತ್ತೇವೆ ಎಂಬ ಆಶ್ವಾಸನೆ ಕೇಳಿಬರಲೇ ಇಲ್ಲ ಬದಲಾಗಿ ಪ್ರತೀ ಹಳ್ಳಿಯಲ್ಲೂ ಆಂಜನೇಯ ದೇವಸ್ಥಾನಗಳನ್ನು ನಿರ್ಮಿಸುವ ಭರವಸೆ ಕೇಳಿಬಂದಿದೆ. ಚನ್ನಪಟ್ಟಣ, ರಾಮನಗರ, ಮದ್ದೂರು, ಮಂಡ್ಯ ತಾಲೂಕುಗಳಲ್ಲಿ ದಶಪಥ ರಸ್ತೆಯ ನಿರ್ಮಾಣದಿಂದ ಬೀದಿಪಾಲಾಗಲಿರುವ ಸಾವಿರಾರು ಕುಟುಂಬಗಳಿಗೆ ಭರವಸೆ-ಆಶ್ವಾಸನೆ ಒತ್ತಟ್ಟಿಗಿರಲಿ, ಒಂದೇ ಒಂದು ಸಾಂತ್ವನದ ಮಾತು ಸಹ ಯಾವುದೇ ಸಂಭಾವ್ಯ ಪ್ರತಿನಿಧಿಗಳಿಂದ ಕೇಳಿಬರಲಿಲ್ಲ. ಜನಸಾಮಾನ್ಯರಿಗೆ ತಮ್ಮ ಭವಿಷ್ಯದ ಬದುಕಿನ ದೃಷ್ಟಿಯಿಂದ ಈ ಸಂಸ್ಥೆಗಳೇ ಅಂತಿಮ ಆಯ್ಕೆಯಾಗಿರುತ್ತದೆ. ಇಲ್ಲಿಗೆ ಆಯ್ಕೆಯಾಗುವ ಪ್ರತಿನಿಧಿಗಳ ಬಾಧ್ಯತೆಗಳೇನು?

ತನ್ನ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸಿದ ಶ್ರೀ ಸಾಮಾನ್ಯನ ನಿರೀಕ್ಷೆ ಏನಿರುತ್ತದೆ? ತಮ್ಮ ಆಯ್ಕೆಯ ಪ್ರತಿನಿಧಿ ತಾವು ಬಯಸಿದ ಚಿಹ್ನೆಯ ಅಡಿಯಲ್ಲೇ ತಮ್ಮ ನಡುವೆ ಇರಬೇಕು ಎಂದಲ್ಲವೇ? ಆದರೆ ಪ್ರಸಕ್ತ ರಾಜಕಾರಣದಲ್ಲಿ ಇದನ್ನು ಅಪೇಕ್ಷಿಸುವುದೇ ತಪ್ಪಾಗುತ್ತದೆ. ಶ್ರದ್ಧಾಕೇಂದ್ರಗಳ ಮೇಲೆ ಆಣೆ ಪ್ರಮಾಣ ಮಾಡುವ ರಾಜಕೀಯ ನಾಯಕರು ಅದೇ ರೀತಿ: ‘‘ಅಧಿಕಾರಕ್ಕಾಗಿ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ’’ಎಂದು ಪ್ರಮಾಣೀಕರಿಸಲು ಸಾಧ್ಯವೇ?

ಈ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಹಾಗೂ ಪ್ರಜಾಪ್ರಭುತ್ವ ಯಾತ್ರೆಯ ಪ್ರಯಾಣಿಕರ ಯೋಗಕ್ಷೇಮವನ್ನು ಕಾಪಾಡುವುದು ಸರಕಾರಗಳ, ಚುನಾಯಿತ ಪ್ರತಿನಿಧಿಗಳ, ಸಾಂವಿಧಾನಿಕ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬ ನಂಬಿಕೆಯಲ್ಲೇ ಪ್ರತಿಯೊಬ್ಬ ಮತದಾರನೂ ತನ್ನ ಪವಿತ್ರ ಮತವನ್ನು ಚಲಾಯಿಸುತ್ತಾನೆ. ಶ್ರದ್ಧೆ ಮತ್ತು ನಂಬಿಕೆಗಳಿಗೆ ಅಪಾರ ಗೌರವ ನೀಡುವ ರಾಜಕೀಯ ನಾಯಕರು ಶ್ರೀಸಾಮಾನ್ಯನ ಈ ನಂಬಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಾದರೆ ಪ್ರಜಾಪ್ರಭುತ್ವವೂ ಗಟ್ಟಿಯಾಗುತ್ತದೆ, ಮತದಾನವೂ ಸಾರ್ಥಕವಾಗುತ್ತದೆ.

Similar News