×
Ad

ಜಾರ್ಖಂಡ್: ಬುಡಕಟ್ಟು ವ್ಯಕ್ತಿಯ ಥಳಿಸಿ ಹತ್ಯೆ; ಆರು ಮಂದಿಯ ಬಂಧನ

Update: 2023-05-13 23:46 IST

ರಾಂಚಿ, ಮೇ 13: ಮನೆಯೊಂದರಿಂದ ಕಳವುಗೈಯಲು ಯತ್ನಿಸಿದ ಆರೋಪದಲ್ಲಿ ಗ್ರಾಮಸ್ಥರು ಬುಡಕಟ್ಟು ವ್ಯಕ್ತಿಯೋರ್ವನನ್ನು ಸೆರೆ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆಗೈದ ಘಟನೆ ಜಾರ್ಖಂಡ್ ನ ರಾಂಚಿಯ ಹೊರವಲಯದ ಹೊರೆದಾಗ್ನಲ್ಲಿ ಗುರುವಾರ ಮುಂಜಾನೆ ನಡೆದಿದೆ. 

ಓರ್ಮಾಂಝಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,  ಇದುವರೆಗೆ 6 ಮಂದಿಯನ್ನು ಬಂಧಿಸಲಾಗಿದೆ. ಇತರರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತನ್ನ ಮನೆಗೆ ಕಳ್ಳ ಪ್ರವೇಶಿಸಿರುವುದನ್ನು ನೋಡಿದ ಮಾಲೀಕ ಬೊಬ್ಬೆ ಹೊಡೆದಿದ್ದ. ಮಾಲೀಕನ ಬೊಬ್ಬೆ ಕೇಳಿ ಗ್ರಾಮಸ್ಥರು ಅಲ್ಲಿ ಸೇರಿದರು. ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಸೆರೆ ಹಿಡಿದರು. ಅನಂತರ ಕಂಬಕ್ಕೆ ಕಟ್ಟಿ ಪ್ರಜ್ಞೆ ಕಳೆದುಕೊಳ್ಳುವ ವರೆಗೆ ಥಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಕೆಲವು ಗಂಟೆಗಳ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪ್ರಜ್ಞೆ ಕಳೆದುಕೊಂಡ ಆತನನ್ನು ಕರೆದೊಯ್ದು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದರು. ಆದರೆ, ಗಂಭೀರ ಗಾಯಗೊಂಡಿದ್ದ ಆತ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. 

‘‘ಮನೆಯೊಂದರಲ್ಲಿ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದ 35 ವರ್ಷದ ಮಿಥುನ್ ಖೆರ್ವಾರ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ ಎಂದು ನಾವು ಮಾಹಿತಿ ಸ್ವೀಕರಿಸಿದ್ದೆವು. ಕೂಡಲೇ ಪೊಲೀಸರ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿತು. ಆತನನ್ನು ರಕ್ಷಿಸಿ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿತು. ಆದರೆ, ಆತ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ’’ ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ನೌಷದ್ ಆಲಂ ತಿಳಿಸಿದ್ದಾರೆ. 

ಸಿಲ್ಲಿ ಡಿಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಇದುವರೆಗೆ 6 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಜೈಲಿಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ. ಈ ಘಟನೆಯಲ್ಲಿ ಭಾಗಿಯಾದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ ಎಂದು ಆಲಂ ತಿಳಿಸಿದ್ದಾರೆ.

Similar News