ವಿವಾದಿತ 'ದಿ ಕೇರಳ ಸ್ಟೋರಿ' ಚಿತ್ರದ ಪರ ಪ್ರಚಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಬ್ಯಾನರ್ ಹಾಕಿದ ಸಂಘ ಪರಿವಾರ
ಉಡುಪಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿ ಉಳಿಯಬೇಕೆಂದರೆ 'ದಿ ಕೇರಳ ಸ್ಟೋರಿ' ನೋಡಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದ್ವಾರ ಹಾಗೂ ಆವರಣದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬ್ಯಾನರ್ ಅಳವಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕೇರಳ ಸ್ಟೋರಿ ಚಲನಚಿತ್ರ ಹಲವು ಭಾಗಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನೆಮಾ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ಲವ್ ಜಿಹಾದ್ ಕುರಿತು ಮೂಡಿ ಬಂದಿರುವ ಚಿತ್ರ ಕೇರಳ ಸ್ಟೋರಿ, ಒಂದು ಧರ್ಮದ ವಿರುದ್ಧ ಗುರಿಯಾಗಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದರ ನಡುವೆಯೂ ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕ ಸನ್ನಿದಿಯಲ್ಲಿ ಚಿತ್ರ ಪರ ಪ್ರಚಾರ ನಡೆಸಲಾಗುತ್ತಿದೆ. ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಮಲಯಾಳಂನಲ್ಲೇ ಭಕ್ತರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ಭಕ್ತರಾಗಿ ಉಳಿಯಲು ಕೇರಳ ಸ್ಟೋರಿ ನೋಡಿ ಎಂದು ಬರೆಯಲಾಗಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೇವಾಲಯದ ದ್ವಾರ ಹಾಗೂ ಆವರಣ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.