ಕೇರಳದಲ್ಲಿ 25,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ಯಾಕೆ ಭಾರತೀಯ ಯುವಜನರು ಡ್ರಗ್ಸ್ ಮೊರೆ ಹೋಗುತ್ತಿದ್ದಾರೆ?
ಕಳೆದ ವಾರಾಂತ್ಯದಲ್ಲಿ, ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ) ಹಾಗೂ ಭಾರತೀಯ ನೌಕಾಪಡೆಗಳು ತಮ್ಮ ಕಾರ್ಯಾಚರಣೆಯಾದ ಆಪರೇಶನ್ ಸಮುದ್ರಗುಪ್ತ ಕೈಗೊಂಡವು. ಈ ಕಾರ್ಯಾಚರಣೆ ಭಾರತೀಯ ಸಾಗರಗಳಲ್ಲಿ ಮಾದಕದ್ರವ್ಯ ಸಾಗಾಣಿಕೆ ನಡೆಸುವ ಹಡಗುಗಳನ್ನು ಗುರಿಯಾಗಿಸಿ ನಡೆಸುತ್ತದೆ. ಈ ಜಂಟಿ ಕಾರ್ಯಾಚರಣೆಯಲ್ಲಿ ಬರೋಬರಿ 250 ಕೆ.ಜಿ. ತೂಕದ, 25,000 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ಭಾರತೀಯ ಸಮುದ್ರದ ಒಂದು ಹಡಗಿನಿಂದ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಸಾಗರದಲ್ಲಿ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಈ ದ್ರವ್ಯವನ್ನು ಅತ್ಯುತ್ಕೃಷ್ಟ ಗುಣಮಟ್ಟದ ಮೆಥಾಂಫೆಟಮೈನ್ ಎಂದು ಗುರುತಿಸಲಾಗಿದ್ದು, ಇದನ್ನು 'ಕ್ರಿಸ್ಟಲ್ ಮೆತ್' ಎಂದೂ ಕರೆಯಲಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ತನಿಖಾ ಸಂಸ್ಥೆಗಳು ಬಂಧಿಸಿವೆ. ಆತನನ್ನು ಪಾಕಿಸ್ತಾನಿ ವ್ಯಕ್ತಿ ಎಂದು ಅನುಮಾನಿಸಲಾಗಿದೆ. ಎನ್‌ಸಿಬಿ ಮೂಲಗಳು ಈ ನಿಷಿದ್ಧ ಪದಾರ್ಥಗಳು ಪಾಕಿಸ್ತಾನಿ ಮೂಲದ ಹಾಜಿ ಸಲೀಮ್ ಎಂಬಾತನ ನೇತೃತ್ವದ ಡ್ರಗ್ ಮಾಫಿಯಾಗೆ ಸೇರಿದೆ ಎಂದಿವೆ.
ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯಗಳನ್ನು ಕೇರಳದ ಕೊಚ್ಚಿಯಲ್ಲಿ ಪ್ರದರ್ಶಿಸಲಾಗಿದ್ದು, ಅವುಗಳನ್ನು 134 ಚೀಲಗಳಲ್ಲಿ ತುಂಬಿಸಲಾಗಿದೆ. ಅವುಗಳನ್ನು ಹೆಸರು ಬಯಲು ಮಾಡದ ಹಡಗಿನಿಂದ ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಎನ್‌ಸಿಬಿ 'ಮದರ್ ಶಿಪ್' ಎನ್ನುತ್ತಿದೆ. ಈ ಹಡಗು ಮಾದಕ ದ್ರವ್ಯಗಳನ್ನು ತನ್ನ ಹಾದಿಯಲ್ಲಿ ಬೇರೆ ಹಡಗುಗಳಿಗೆ ಪೂರೈಕೆ ಮಾಡುತ್ತಿತ್ತು.
ಮಾದಕದ್ರವ್ಯ ವ್ಯಸನ ಯಾಕೆ ಹೆಚ್ಚಾಗುತ್ತಿದೆ?
ಭಾರತದ ಯುವ ಜನತೆಯಲ್ಲಿ ಮಾದಕ ದ್ರವ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
ಡ್ರಗ್ಸ್ ಸುಲಭ ಲಭ್ಯತೆ: ಮಾದಕ ದ್ರವ್ಯಗಳು ಭಾರತದಲ್ಲಿ ಅತ್ಯಂತ ಸುಲಭವಾಗಿ ಲಭ್ಯವಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಭಿಸುತ್ತಿದೆ. ಯಾಕೆಂದರೆ ಭಾರತ ಓಪಿಯಂ ಮತ್ತು ಇತರ ದ್ರವ್ಯಗಳ ಅತಿದೊಡ್ಡ ಉತ್ಪಾದಕನಾಗಿದೆ.
ಸಹಯೋಗಿಗಳ ಒತ್ತಡ: ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನ ಹೆಚ್ಚಾಗಲು ಸಹಯೋಗಿಗಳ ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ಬಹಳಷ್ಟು ಯುವಜನರಿಗೆ ಅವರ ಸ್ನೇಹಿತರೇ ಮಾದಕದ್ರವ್ಯ ಪರಿಚಯಿಸಿರುತ್ತಾರೆ.
ಒತ್ತಡ ಮತ್ತು ಉದ್ವೇಗ: ಭಾರತೀಯ ಯುವಜನರಲ್ಲಿ ಒತ್ತಡ ಮತ್ತು ಉದ್ವೇಗಗಳು ಸಾಮಾನ್ಯ ತೊಂದರೆಗಳಾಗಿವೆ. ಈ ಸಮಸ್ಯೆಗಳನ್ನು ಎದುರಿಸಲು ಮಾದಕ ದ್ರವ್ಯ ಸೇವನೆಯೆಡೆಗೆ ಯುವಜನತೆ ಮುಖ ಮಾಡುತ್ತಾರೆ.
ಮಾನಸಿಕ ಸಮಸ್ಯೆಯ ತೊಂದರೆಗಳು: ಖಿನ್ನತೆ ಮತ್ತು ಸ್ಕಿಜೋಪ್ರೀನಿಯಾದಂತಹ ಮಾನಸಿಕ ಸಮಸ್ಯೆಗಳೂ ಸಹ ಮಾದಕ ದ್ರವ್ಯ ವ್ಯಸನದೆಡೆಗೆ ಹಾದಿ ಮಾಡಿಕೊಡುತ್ತವೆ. ಈ ರೀತಿ ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಜನರು ಮಾದಕ ದ್ರವ್ಯಗಳನ್ನು ಸ್ವಯಂ ಔಷಧಗಳಾಗಿ ಬಳಸುತ್ತಾರೆ.
ಅಪಾಯದ ಕುರಿತು ಜಾಗೃತಿಯ ಕೊರತೆ: ಭಾರತದಲ್ಲಿ ಬಹಳಷ್ಟು ಯುವಜನತೆಗೆ ಮಾದಕ ದ್ರವ್ಯ ವ್ಯಸನದ ಅಪಾಯದ ಕುರಿತಾದ ಅರಿವಿಲ್ಲ. ಅವರಿಗೆ ಮಾದಕ ದ್ರವ್ಯ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂಬ ಅರಿವಿಲ್ಲದಿರುವುದರಿಂದ ವ್ಯಸನ, ಓವರ್ ಡೋಸ್, ಹಾಗೂ ಸಾವಿನಂತಹ ಅಪಾಯಗಳೂ ಎದುರಾಗಬಹುದು.
ನವದೆಹಲಿಯ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್‌ಮೆಂಟ್ ಸೆಂಟರ್ (ಎನ್‌ಡಿಡಿಟಿಸಿ) ವರದಿಯ ಪ್ರಕಾರ, ಭಾರತದಲ್ಲಿ 3.5 ಮಿಲಿಯನ್ ಮಾದಕ ದ್ರವ್ಯ ವ್ಯಸನಿಗಳಿದ್ದಾರೆ. ಅವರಲ್ಲಿ 2.5 ಮಿಲಿಯನ್ ಜನರು 15 - 35ರ ವಯೋಮಾನದವರಾಗಿದ್ದಾರೆ. ಈ ವರದಿಯ ಪ್ರಕಾರ, ಭಾರತದಲ್ಲಿ ಮಾದಕ ವ್ಯಸನಿ ಯುವಕರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. 2009ರಲ್ಲಿ ಭಾರತದಲ್ಲಿ 2.2 ಮಿಲಿಯನ್ ಮಾದಕ ವ್ಯಸನಿಗಳಿದ್ದರು. ಆದರೆ ಕೇವಲ 10 ವರ್ಷದಲ್ಲಿ ಇದು 70% ಹೆಚ್ಚಳವಾಗಿದೆ.
ಎನ್‌ಡಿಡಿಟಿಸಿ 2022ರ ವೇಳೆ ಭಾರತದಲ್ಲಿ 6 ಮಿಲಿಯನ್ ಮಾದಕ ವ್ಯಸನಿಗಳು ಇರಬಹುದು ಎಂದು ಅಂದಾಜಿಸಿತ್ತು. ಅವರಲ್ಲಿ 40 ಲಕ್ಷ ಜನರು ಓಪಿಯಾಯ್ಡ್ ವ್ಯಸನಿಗಳಾದರೆ, 20 ಲಕ್ಷ ಜನರು ಕ್ಯಾನಬಿ ವ್ಯಸನಿಗಳು ಮತ್ತು 10 ಲಕ್ಷ ಜನರು ಕೊಕೇನ್ ಹಾಗೂ ಆಂಫೆಟಮೈನ್ ವ್ಯಸನಿಗಳಾಗಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಅತ್ಯಧಿಕ ವ್ಯಸನ ಪ್ರಮಾಣ
ಎನ್‌ಡಿಡಿಟಿಸಿ ಪ್ರಕಾರ, ಪಂಜಾಬ್ ರಾಜ್ಯ ಭಾರತದಲ್ಲೇ ಅತ್ಯಧಿಕ ಮಾದಕ ವ್ಯಸನಿಗಳು, ಅಂದರೆ 2 ಮಿಲಿಯನ್ ವ್ಯಸನಿಗಳನ್ನು ಹೊಂದಿದೆ. ಇದು ಪಂಜಾಬ್ ಜನಸಂಖ್ಯೆಯ 3% ಆಗಿದೆ. ಪಂಜಾಬಿನ ಬಹುತೇಕ ವ್ಯಸನಿಗಳು ಹೆರಾಯಿನ್ ಹಾಗೂ ಓಪಿಯಂನಂತಹ ಓಪಿಯಾಯ್ಡ್ ಬಳಕೆದಾರರಾಗಿದ್ದಾರೆ.
ಪಂಜಾಬಿನ ವ್ಯಸನದ ಮಟ್ಟ ಅತ್ಯಧಿಕವಾಗಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣವೆಂದರೆ, ಪಂಜಾಬ್ ಓಪಿಯಂ ಹಾಗೂ ಇತರ ಮಾದಕ ವಸ್ತುಗಳ ಪ್ರಮುಖ ಉತ್ಪಾದಕನಾಗಿದ್ದು, ಮಾದಕ ದ್ರವ್ಯಗಳು ಸುಲಭವಾಗಿ ಲಭ್ಯವಾಗುತ್ತವೆ. ಇನ್ನೊಂದು ಕಾರಣವೆಂದರೆ ಪಂಜಾಬಿನಲ್ಲಿ ತಾಂಡವವಾಡುತ್ತಿರುವ ಬಡತನ ಮತ್ತು ನಿರುದ್ಯೋಗ. ನಿರುದ್ಯೋಗಿಗಳಾಗಿರುವ ಬಡಜನರು ತಮ್ಮ ಕಷ್ಟಗಳಿಂದ ಹೊರಬರಲು ಮಾದಕ ವ್ಯಸನವೇ ಪರಿಹಾರ ಎಂದುಕೊಂಡಿದ್ದಾರೆ.
ಅಪಾರವಾಗಿರುವ ಮಾದಕ ವ್ಯಸನ ಪಂಜಾಬಿನಲ್ಲಿ ಆರೋಗ್ಯ, ಶಿಕ್ಷಣ, ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಋಣಾತ್ಮಕ ಪರಿಣಾಮ ಬೀರಿವೆ. ಇದು ಯುವಜನತೆಯ ಮೇಲೆಯೇ ದುಷ್ಪರಿಣಾಮ ಉಂಟುಮಾಡಿದೆ. ಇದು ಭಾರತ ಸರ್ಕಾರಕ್ಕೆ ಪ್ರತಿವರ್ಷವೂ ಬಿಲಿಯನ್ ಗಟ್ಟಲೆ ಹಣದ ವೆಚ್ಚ ತಗುಲುವಂತೆ ಮಾಡುತ್ತದೆ.
ಭಾರತದ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಡ್ರಗ್ ಹಾವಳಿಯನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಅವೆಂದರೆ,
• ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು.
• ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುವುದು.
• ಮಾದಕ ದ್ರವ್ಯ ಪೂರೈಕೆ ಜಾಲವನ್ನು ಭೇದಿಸುವುದು.
• ಒತ್ತಡ, ಉದ್ವೇಗ, ಮಾನಸಿಕ ಸಮಸ್ಯೆಯಂತಹ ಮಾದಕ ವ್ಯಸನದ ಮೂಲ ಕಾರಣಗಳಿಗೆ ಪರಿಹಾರ ಕಂಡುಹಿಡಿಯುವುದು.
ಭಾರತೀಯ ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವುದು ಒಂದು ಸಂಕೀರ್ಣ ಸವಾಲು. ಆದರೆ, ಒಂದು ವೇಳೆ ಭಾರತದ ಯುವಜನತೆಗಾಗಿ ಆರೋಗ್ಯಕರ, ವ್ಯವಸ್ಥಿತ ಭವಿಷ್ಯ ನಿರ್ಮಿಸಲು ಈ ಸವಾಲನ್ನು ಎದುರಿಸಲೇಬೇಕಿದೆ.
ಗಿರೀಶ್ ಲಿಂಗಣ್ಣ,
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ