ಪಡುಬಿದ್ರೆ ಠಾಣೆಯಲ್ಲಿ ಕೊರಗ ಯುವಕರ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲು: ಪ್ರತಿಭಟನೆಗೆ ನಿರ್ಧಾರ

Update: 2023-05-17 16:16 GMT

ಉಡುಪಿ, ಮೇ 17: ಕಳೆದ ಎ.18ರಂದು ಪಡುಬಿದ್ರೆ ಠಾಣೆ ವ್ಯಾಪ್ತಿಯ ಇನ್ನಾ ಮೈಕ್ರೋವೇವ್ ಸ್ಟೇಷನ್ ಬಳಿಯ ಕೊರಗ ಸಮುದಾಯದ ಯುವಕರು ಸ್ಥಳೀಯ ಬಿಎಸ್‌ಎನ್‌ಎಲ್ ನಿವೃತ ವ್ಯಕ್ತಿಯೋರ್ವರನ್ನು ತಡೆದು ಕಂಬಕ್ಕೆ ಕಟ್ಟಿ ದರೋಡೆ ನಡೆಸಿ ಮೂರು ಸಾವಿರ  ರೂ. ಹಣವನ್ನು ಲಪಟಾಯಿಸಿರುವರೆಂದು ಆರೋಪಿಸಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿರುವ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಡೀ ಪ್ರಕರಣದ ವಾಸ್ತವಾಂಶ ಬೇರೆಯೇ ಆಗಿದೆ. ನಿಜಾಂಶವೆಂದರೆ ದೂರುದಾರ ವ್ಯಕ್ತಿಯೇ ಬಡ ಕೊರಗ ಮಹಿಳೆಯರನ್ನು ನಿರಂತರವಾಗಿ ಹಿಂಸಿಸಿ ದೌರ್ಜನ್ಯ ನಡೆಸಿರುವ ಆರೋಪಿಯಾಗಿದ್ದಾನೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿ ಅವರು ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಪೊಲೀಸರು ನಿಜವಾಗಿ ಮಹಿಳಾ ದೌರ್ಜನ್ಯ ನಡೆಸಿರುವ ಆರೋಪಿಯೊಂದಿಗೆ ಸೇರಿಕೊಂಡು, ಯೋಜನಾ ಬದ್ಧ ಕಟ್ಟು ಕಥೆಯನ್ನು ಹೆಣೆದು ನಿರಪರಾಧಿಗಳನ್ನು ಜೈಲಿಗೆ ತಳ್ಳಿದ್ದಾರೆ. ಸಂತ್ರಸ್ಥ ಕೊರಗ ಸಮುದಾಯದ ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸದೇ, ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಮಹಿಳಾ ದೌರ್ಜನ್ಯ ನಡೆಸಿದ ವ್ಯಕ್ತಿ ರಾಜಾರೋಷವಾಗಿ ಈ ಪ್ರದೇಶದಲ್ಲಿ ಓಡಾಡುತ್ತಿದ್ದು ಪ್ರತಿಕಾರ ಸೇಡು ತೀರಿಸುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಪ್ರದೇಶದ ಅಮಾಯಕ ಕೊರಗ ಸಮುದಾಯ ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ದೂರಿದರು.

ಆದುದರಿಂದ ಪೊಲೀಸ್ ಇಲಾಖೆಯ ಅನ್ಯಾಯವನ್ನು ಮತ್ತು ಬಹಿರಂಗವಾಗಿ ಮಹಿಳಾ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಸಂರಕ್ಷಿಸಿದ ಪಕ್ಷಪಾತಿ ಧೋರಣೆಯನ್ನು ಬಯಲಿಗೆಳೆಯಲು ಹಾಗೂ ನಿಜವಾದ ಆರೋಪಿ ಯನ್ನು ಬಂಧಿಸಲು ಒತ್ತಾಯಿಸಿ ಹೋರಾಟವೊಂದನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಡಾ.ಕೊಂಚಾಡಿ ತಿಳಿಸಿದರು.

ಈ ಪ್ರಕರಣದಲ್ಲಿ ದರೋಡೆಯಂತಹ ಗಂಭೀರ ಪ್ರಮಾಣದ ಅಪರಾಧ ಕೇಸು ದಾಖಲಿಸಲು ಆಧಾರವಾಗಿರುವ ಮೊಬೈಲ್ ದೃಶ್ಯಾವಳಿಯನ್ನು ಗಮನಿಸಿದಾಗ ಹಾಗೂ ಅದರಲ್ಲಿ ಕೇಳಿ ಬರುತ್ತಿರುವ ಸಂಭಾಷಣೆಗಳನ್ನು ವಿಶ್ಲೇಷಿಸಿದಾಗ ನಿಜವಾದ ಘಟನೆ ಏನಾಗಿರಬಹುದೆಂಬುದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ಪೊಲೀಸರು ಸ್ವಯಂ ಆಗಿ ದರೋಡೆ ದೂರು ನೀಡಿರುವ ಸ್ಥಳೀಯ ನಿವೃತ ಬಿಎಸ್‌ಎನ್‌ಎಲ್ ಉದ್ಯೋಗಿಯನ್ನು ತಕ್ಷಣವೇ ಬಂಧಿಸಿ ಮಹಿಳಾ ದೌರ್ಜನ್ಯದ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕಾಗಿತ್ತು. ಸ್ವಯಂ ದೂರು ದಾಖಲಿಸದೆ ಪೊಲೀಸರು ಗಂಭೀರ ಪ್ರಮಾಣದ ಕರ್ತವ್ಯ ಚ್ಯುತಿ ಎಸಗಿರುವುದಲ್ಲದೆ, ಕೊನೆಗೂ ದೂರು ನೀಡಿದ ದೌರ್ಜನ್ಯಕ್ಕೊಳಗಾದ ಮಹಿಳೆಯ ದೂರನ್ನು ದಾಖಲಿಸದೆ ಮೀನಮೇಷ ಎಣಿಸಿ ವಿಳಂಬ ಧೋರಣೆ ತೋರಿದ್ದಾರೆ ಎಂದವರು ವಿವರಿಸಿದರು.

ಠಾಣೆಯಲ್ಲಿ ಸಂತ್ರಸ್ತ ಮಹಿಳೆಯೋರ್ವರಿಗೆ ಇರಿಸು ಮುರಿಸಾಗುವಂತೆ ಧೃತಿಗೆಡಿಸುವ ಪ್ರಶ್ನೆಗಳನ್ನು ಬಹಿರಂಗ ವಾಗಿ ಇತರೆ ಪುರುಷರ ಎದುರಲ್ಲೇ ಕೇಳಿ ಅಪಮಾನ ಮಾಡಿರುವ ಸನ್ನಿವೇಶ ಕೂಡಾ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆದುದರಿಂದ ಅಳಿವಿನ ಅಂಚಿನಲ್ಲಿ ಇರುವ, ಜನಗಣತಿಯಿಂದ ಜನಗಣತಿಗೆ ಜನಸಂಖ್ಯೆ ಕುಸಿಯುತ್ತಿರುವ ‘ಪ್ರಿಮಿಟಿವ್ ಟ್ರೈಬ್’ ಎಂದು ಕೇಂದ್ರ ಸರಕಾರ ಗುರುತಿಸಿ ಸರಕಾರದ ಪ್ರತಿಯೊಂದು ಇಲಾಖೆಗಳೂ ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂಬ ನಿಯಮಾವಳಿ ಇದ್ದರೂ ಅವೆಲ್ಲವನ್ನು ಗಾಳಿಗೆ ತೋರಿ ಅನ್ಯಾಯವೆಸಗಲಾಗಿದೆ. 

ಆದ್ದರಿಂದ ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳನ್ನು ವಜಾಗೊಳಿಸಿ, ಬಡ ಕೊರಗ ಸಮುದಾಯದ ವಿರುದ್ಧ ನಡೆದಿರುವ ಅನ್ಯಾಯದ ವಿರುದ್ಧ ನ್ಯಾಯ ದೊರೆಯುವವರೆಗೆ ಹೋರಾಟ ನಡೆಸುವುದು ಅನಿವಾದ್ಯವೆಂದು ಅವರು ಡಾ.ಕೃಷ್ಣಪ್ಪ ಕೊಂಚಾಡಿ ನುಡಿದರು. 

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಾರ್ಗದರ್ಶಕರೂ, ಕಾರ್ಮಿಕಮುಂದಾಳೂ ಆಗಿರುವ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಪೋಲೀಸರು ಈ ಪ್ರಕರಣದಲ್ಲಿ ನ್ಯಾಯಯುತವಾಗಿ ಕಾರ್ಯ ನಿರ್ವಹಿಸಿಲ್ಲ. ಪೊಲೀಸರು ಪ್ರಕರಣದಲ್ಲಿ ವಿಕೃತ ಮನೋಭಾವದ ನಿವೃತ ನೌಕರ, ಈ ಮೊದಲು ಕೂಡಾ ಹಲವಾರು ಬಾರಿ ಈ ಪ್ರದೇಶದ ಬಡಮಹಿಳೆಯರನ್ನು ಪೀಡಿಸಿರುವ ಘಟನೆಗಳನ್ನು ಪೋಲೀಸರಲ್ಲಿ ತೋಡಿಕೊಂಡರೂ ಅದನ್ನು ಪರಿಗಣಿಸದೆ, ಅಪರಾಧಿಯ ಪರವಾಗಿ ಬಂದಂತಹ ಸಂಘಟನೆಯೊಂದರ ನಾಯಕರ ಒತ್ತಡ ಮತ್ತು ವಿವಿಧ ರೀತಿಯ ಪ್ರಲೋಭನೆಗೆ ಒಳಗಾಗಿ ಮಹಿಳಾ ದೌರ್ಜನ್ಯದ ಆರೋಪಿಯನ್ನು ಬಂಧಿಸುವುದಾಗಲೀ, ಹೇಳಿಕೆ ಯನ್ನು ಕೂಡಾ ಪಡೆದುಕೊಂಡಿಲ್ಲ ಎಂದರು.

ಇದೀಗ ದೂರು ನೀಡಿ ಹದಿನೈದು ದಿನ ಕಳೆದರೂ ಪ್ರಕರಣ ದಾಖಲಿಸಿಲ್ಲ. ಆದುದರಿಂದ ಈಗಾಗಲೇ ಬಡ ಕೊರಗ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಬುಡಕಟ್ಟು ಆಯೋಗದಲ್ಲಿ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಿದೆ. ಪೊಲೀಸರ ಆರೋಪಿ ಪರ ಧೋರಣೆಯನ್ನು ಖಂಡಿಸಿ ಪಡುಬಿದ್ರಿ ಪೊಲೀಸ್ ಠಾಣೆಯ ವಿರುದ್ಧ ಪ್ರತಿಭಟನಾ ಸಭೆಯನ್ನೂ ಸಂಘಟಿಸಲಾ ಗುವುದೆಂದು ಹೇಳಿದರು.

ಸಭೆಯಲ್ಲಿ ಕೃಷ್ಣ ಇನ್ನಾ, ಪೂರ್ಣೇಶ್, ರಂಗ ಕೊರಗ ಮೊದಲಾದವರು ಘಟನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘಟನೆಯ ನಾಯಕ ರುಗಳಾದ ರವೀಂದ್ರ ವಾಮಂಜೂರು, ವಿನೋದ್ ವಾಮಂಜೂರು, ತುಳಸಿ, ರಮಣಿ, ನಿಶ್ಚಿತ ಮೊದಲಾದವರು ಭಾಗವಹಿಸಿದ್ದರು.

Similar News