×
Ad

ಮುಖ್ಯಮಂತ್ರಿ ನೇಮಕ ವಿಳಂಬ: ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು

Update: 2023-05-17 21:58 IST

ಹೊಸದಿಲ್ಲಿ, ಮೇ 17: ಕರ್ನಾಟಕದ ನೂತನ ಮುಖ್ಯಮಂತ್ರಿಯ ಆಯ್ಕೆ ವಿಚಾರದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಕಾಂಗ್ರೆಸ್ ಬುಧವಾರ ತಿರುಗೇಟು ನೀಡಿದೆ. ಉತ್ತರಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳ ಮುಖ್ಯಮಂತ್ರಿಗಳ ಘೋಷಣೆಯನ್ನು ಬಿಜೆಪಿಯೂ ವಿಳಂಬವಾಗಿ ಮಾಡಿದೆ ಎಂದು ಅದು ಹೇಳಿದೆ.

‘‘ವಿಶೇಷವಾಗಿ ಪ್ರಧಾನಿಯ ಡೋಲು ಬಾಜಕರಿಗೆ ನಾನು ನೆನಪಿಸಲು ಬಯಸುವುದೇನೆಂದರೆ, 2017ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾರ್ಚ್ 11ರಂದು ಹೊರಬಿತ್ತು. ಎಂಟು ದಿನಗಳ ಬಳಿಕ, ಅಂದರೆ ಮಾರ್ಚ್ 19ರಂದು ಆದಿತ್ಯನಾಥ್‌ರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು’’ ಎಂಬುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘‘2021ರಲ್ಲಿ ಅಸ್ಸಾಮ್ ವಿಧಾನಸಭಾ ಚುನಾವಣೆ ನಡೆಯಿತು. ಮೇ 3ರಂದು ಫಲಿತಾಂಶ ಹೊರಬಿತ್ತು. ಏಳು ದಿನಗಳ ಬಳಿಕ, ಅಂದರೆ ಮೇ 10ರಂದು ಹಿಮಂತ ಬಿಸ್ವ ಶರ್ಮ ಮುಖ್ಯಮಂತ್ರಿಯಾದರು’’ ಎಂದು ಅವರು ಹೇಳಿದ್ದಾರೆ. ‘‘ಇಂಥ ಉದಾಹರಣೆಗಳು ಬೇಕಾದಷ್ಟಿವೆ’’ ಎಂದರು.
ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಕೆಲವು ದಿನಗಳಿಂದ ದಿಲ್ಲಿಯಲ್ಲಿ ಬಲವಾದ ಲಾಬಿ ಮಾಡುತ್ತಿದ್ದಾರೆ.

ರಾಜ್ಯ ವಿಧಾನಸಭಾ ಫಲಿತಾಂಶ ಮೇ 13ರಂದು ಹೊರಬಿದ್ದಿದೆ. ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 66 ಸ್ಥಾನಗಳನ್ನು ಗಳಿಸಿದೆ. ಜನತಾ ದಳ 19 ಸ್ಥಾನಗಳಲ್ಲಿ ಜಯ ಗಳಿಸಿದೆ. ಪಕ್ಷೇತರರು ನಾಲ್ಕು ಸ್ಥಾನಗಳನ್ನು ಪಡೆದಿದ್ದಾರೆ. ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳು 113.

Similar News