ಜಮ್ಮು-ಕಾಶ್ಮೀರ: ಇಬ್ಬರು ಉಗ್ರರ ಬಂಧನ

Update: 2023-05-17 17:51 GMT

ಶ್ರೀನಗರ, ಮೇ 17: 1990ರಲ್ಲಿ ಕಾಶ್ಮೀರ ಕಣಿವೆಯ ಅಂದಿನ ಮುಖ್ಯ ಧರ್ಮಗುರುವಾಗಿದ್ದ ಮಿರ್‌ವಾಯ್ಝ್ ಫಾರೂಕ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿಕೊಂಡಿದ್ದಾರೆ.

‘‘ಶ್ರೀನಗರದ ನಿವಾಸಿಗಳಾಗಿರುವ ಜಾವೇದ್ ಭಟ್ ಮತ್ತು ಝಹೂರ್ ಭಟ್ ಎಂಬವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ವಿಶೇಷ ಘಟಕ ರಾಜ್ಯ ತನಿಖಾ ಸಂಸ್ಥೆಯು ಬಂಧಿಸಿದೆ. ಇಷ್ಟು ವರ್ಷಗಳ ಕಾಲ ಅವರು ಪಾಕಿಸ್ತಾನ ಮತ್ತು ನೇಪಾಳದಲ್ಲಿ ಅಡಗಿಕೊಂಡಿದ್ದರು. ಅವರನ್ನು ಬಂಧಿಸಿ ಸಿಬಿಐಗೆ ಒಪ್ಪಿಸಲಾಗಿದೆ’’ ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ (ಸಿಐಡಿ) ಆರ್. ಆರ್. ಸ್ವೈನ್ ಹೇಳಿದರು.

ಅಖಿಲ ಜಮ್ಮು ಮತ್ತು ಕಾಶ್ಮೀರ ಅವಾಮಿ ಕ್ರಿಯಾ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ಫಾರೂಕ್, ಹುರಿಯತ್ ಮುಖ್ಯಸ್ಥ ಹಾಗೂ ಕಣಿವೆಯ ಪ್ರಸಕ್ತ ಮುಖ್ಯ ಧರ್ಮಗುರು ಮಿರ್‌ವಾಯ್ಝ್ ಉಮರ್ ಫಾರೂಕ್‌ರ ತಂದೆಯಾಗಿದ್ದಾರೆ.

ಅವರನ್ನು 1990 ಮೇ 21ರಂದು ಶ್ರೀನಗರದ ನಿಗೀನ್‌ನಲ್ಲಿರುವ ಅವರ ನಿವಾಸದಲ್ಲಿ ಕೊಲ್ಲಲಾಗಿತ್ತು. ಹಂತಕರನ್ನು ಅಂದು ಅಧಿಕಾರಿಗಳು ‘ಅಜ್ಞಾತ ಬಂದೂಕುಧಾರಿಗಳು’’ ಎಂಬುದಾಗಿ ಬಣ್ಣಿಸಿದ್ದರು. ಈ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಶ್ರೀನಗರದ ಹವಾಲ್‌ನಲ್ಲಿ ಪಾರ್ಥಿವ ಶರೀರದ ಮೆರವಣಿಗೆಯ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಕನಿಷ್ಠ 35 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

Similar News