ಅರ್ಧಕ್ಕೆ ನಿಂತ ನೀರಿನ ಘಟಕದ ಕಟ್ಟಡ ಪೂರ್ಣಗೊಳ್ಳಲಿ

Update: 2023-05-17 19:30 GMT

ಮಾನ್ಯರೇ,

 ಸರಕಾರ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ. ಪ್ರತೀ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಅನುಮತಿ ಕೊಟ್ಟಿತ್ತು. ಅದರಂತೆ ಎಷ್ಟೋ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತಿ ನಿಂತವು. ಆದರೆ ಎಷ್ಟೋ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತವು. ಅದರಲ್ಲಿ ನನ್ನ ಊರಿನ ಕಟ್ಟಡವೂ ಒಂದು. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಎರಡು ಮೂರು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡ ನಿರ್ಮಾಣ ಆರಂಭವಾಗಿ, ಕಾಮಗಾರಿ ಪೂರ್ಣಗೊಳ್ಳದೆ ಈಗಲೂ ಕಟ್ಟಡ ಪಾಳುಬಿದ್ದು ಪ್ರಾಣಿ ಪಕ್ಷಿಗಳ ಗೂಡಾಗಿದೆ. ಇಲಿ, ಹೆಗ್ಗಣಗಳು ವಾಸಿಸುತ್ತಿವೆ. ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದೆ ಗ್ರಾಮದ ಜನರು ಬೇಸತ್ತು ಹೋಗಿದ್ದಾರೆ. ಕೊಳವೆ ಬಾವಿಯ ನೀರನ್ನು ಕುಡಿದರೆ ರೋಗಗಳನ್ನು ಆಹ್ವಾನಿಸಿದಂತೆ. ಎರಡು-ಮೂರು ಕಿ.ಮೀ. ದೂರಕ್ಕೆ ಹೋಗಿ ಶುದ್ಧ ನೀರನ್ನು ತಂದು ಕುಡಿಯುವ ಪರಿಸ್ಥಿತಿ ಈ ಹಳ್ಳಿಯ ಜನರಿಗೆ ಬಂದಿದೆ.
ಆದ್ದರಿಂದ ಮುಂದಿನ ಹೊಸ ಸರಕಾರ ದಯವಿಟ್ಟು ಇದನ್ನು ಸಂಪೂರ್ಣವಾಗಿ ಗಮನಿಸಿ, ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿ, ಕೆಲವು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಬೇಕಾಗಿದೆ.
 

Similar News