ಕೇಂದ್ರ ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್ ರಿಜಿಜು, ಭೂವಿಜ್ಞಾನ ಸಚಿವರಾಗಿ ನೇಮಕ

Update: 2023-05-18 05:50 GMT

ಹೊಸದಿಲ್ಲಿ: ಕೇಂದ್ರ ಸಚಿವ ಕಿರಣ್ ರಿಜಿಜು ಗುರುವಾರ ಕಾನೂನು ಸಚಿವಾಲಯದಿಂದ ಸ್ಥಳಾಂತರಗೊಂಡಿದ್ದು ಅವರನ್ನು , ಭೂ ವಿಜ್ಞಾನ ಸಚಿವಾಲಯಕ್ಕೆ  ನಿಯೋಜಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸಂಸದೀಯ ವ್ಯವಹಾರ ಖಾತೆಯ  ಸಹಾಯಕ ಸಚಿವರಾಗಿದ್ದ ಅರ್ಜುನ್ ರಾಮ್ ಮೇಘ್ವಾಲ್ ಅವರು ಕಾನೂನು ಸಚಿವಾಲಯದಲ್ಲಿ  ಸ್ವತಂತ್ರ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ಈ ಅಚ್ಚರಿಯ ಬದಲಾವಣೆಯನ್ನು ಪ್ರಕಟಿಸಲಾಗಿದೆ.

"ಕೆಲವು ನಿವೃತ್ತ ನ್ಯಾಯಾಧೀಶರು" "ಭಾರತ ವಿರೋಧಿ ಗ್ಯಾಂಗ್ ನ ಭಾಗ" ವಾಗಿದ್ದಾರೆ ಎಂಬ ಸಚಿವ  ರಿಜಿಜು ಅವರ ವಿವಾದಾತ್ಮಕ ಹೇಳಿಕೆಯು ವಿವಿಧ ರಾಜಯಕೀಯ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಜನವರಿಯಲ್ಲಿ ರಿಜಿಜು ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದು, ನ್ಯಾಯಾಧೀಶರ ಕಿರುಪಟ್ಟಿ ಗಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸರಕಾರಿ ನಾಮಿನಿಯನ್ನು ಸೇರಿಸಲು ಸೂಚಿಸಿದ್ದರು.

ನ್ಯಾಯಾಧೀಶರ ನೇಮಕದಲ್ಲಿ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ  ಕೇಂದ್ರ ಸರಕಾರದ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ರಿಜಿಜು ಈ ಪತ್ರ ಬರೆದಿದ್ದರು.

ರಿಜಿಜು ಜುಲೈ 8, 2021 ರಂದು ಕಾನೂನು ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಅವರು ಮೇ 2019 ರಿಂದ ಜುಲೈ 2021 ರವರೆಗೆ ಯುವ ವ್ಯವಹಾರ ಹಾಗೂ  ಕ್ರೀಡೆಗಳ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಸೇವೆ ಸಲ್ಲಿಸಿದ್ದರು.

Similar News