26/11ರ ಮುಂಬೈ ದಾಳಿ ಪ್ರಕರಣ: ಆರೋಪಿ ತಹವ್ವರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್ ಒಪ್ಪಿಗೆ

Update: 2023-05-18 17:48 GMT

ಮುಂಬೈ, ಮೇ 18: 26/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿಯಾಗಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ನ್ಯಾಯಾಲಯ ಬುಧವಾರ ಒಪ್ಪಿಗೆ ನೀಡಿದೆ. 

ಹಸ್ತಾಂತರದ ಹಿನ್ನೆಲೆಯಲ್ಲಿ 62ರ ಹರೆಯದ ರಾಣಾನನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತ 2020 ಜೂನ್ 10ರಂದು ದೂರು ಸಲ್ಲಿಸಿತ್ತು. ಇದನ್ನು ಬಿಡೆನ್ ಆಡಳಿತ ಬೆಂಬಲಿಸಿದೆ ಹಾಗೂ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಅನುಮೋದನೆ ನೀಡಿದೆ. 
‘‘ನ್ಯಾಯಾಲಯ ವಿನಂತಿಯನ್ನು ಬೆಂಬಲಿಸಿ ಹಾಗೂ ವಿರೋಧಿಸಿ ಸಲ್ಲಿಸಲಾಗಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದೆ. ಅಲ್ಲದೆ, ವಿಚಾರಣೆಯಲ್ಲಿ ಪ್ರಸ್ತುಪಡಿಸಲಾದ ವಾದಗಳನ್ನು ಪರಿಗಣಿಸಿದೆ’’ ಎಂದು ಅಮೆರಿಕದ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ ಆಫ್ ಕ್ಯಾಲಿಫೋರ್ನಿಯಾದ ಅಮೆರಿಕದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಜಾಕ್ವೆಲಿನ್ ಚೂಲ್ಜಿಯಾನ್ ಅವರು ಬುಧವಾರ ಬಿಡುಗಡೆ ಮಾಡಿದ 48 ಪುಟಗಳ ಆದೇಶದಲ್ಲಿ ಹೇಳಿದ್ದಾರೆ. 

ಈ ಸಂದರ್ಭ ಹಸ್ತಾಂತರದ ಮನವಿಯನ್ನು ರಾಣಾ ವಕೀಲರು ವಿರೋಧಿಸಿದರು. ಆದರೆ, ಇದಕ್ಕೆ ನ್ಯಾಯಾಧೀಶರು ಭಾರತ-ಅಮೆರಿಕ ಆರೋಪಿಯ ಹಸ್ತಾಂತರ ಒಪ್ಪಂದ ಮಾಡಿಕೊಂಡಿವೆ. ರಾಣಾ ಹಸ್ತಾಂತರ ಈ ಒಪ್ಪಂದದ ಅಡಿಯಲ್ಲಿಯೇ ನಡೆಯುತ್ತದೆ  ಎಂದರು. 
ಮುಂಬೈ ಭಯೋತ್ಪಾದ ದಾಳಿಯ ಸಂಚು ಹಾಗೂ ಅದನ್ನು ಕಾರ್ಯಗತಗೊಳಿಸುವಲ್ಲಿ ರಾಣಾ ಮತ್ತು ಆತನ ಗೆಳೆಯ ಡೆವಿಡ್ ಕೋಲ್ಮನ್ ಹೆಡ್ಲಿ ಆಲಿಯಾಸ್ ದಾವೂದ್ ಗಿಲಾನಿ ಹಾಗೂ ಇತರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಭಾರತ ಆರೋಪಿಸಿದೆ.  ಈ ಬಗ್ಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. 

2008  ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಆಗಮಿಸಿದ್ದ  ಲಷ್ಕರ್ ತಯ್ಯಿಬದ ಭಯೋತ್ಪಾದಕರು ವಿವಿಧ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಅಮೆರಿಕದ ಆರು ಪ್ರಜೆಗಳು ಸೇರಿದಂತೆ ಒಟ್ಟು 166ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Similar News