ಭಾರತದ ಆಧುನಿಕ ಇತಿಹಾಸದಲ್ಲಿ ನಾಲ್ವರು ಗುಜರಾತಿಗಳು ಮಹತ್ವದ ಕೊಡುಗೆ ನೀಡಿದ್ದಾರೆ: ಅಮಿತ್ ಶಾ

Update: 2023-05-19 05:31 GMT

ಹೊಸದಿಲ್ಲಿ: ಭಾರತದ ಆಧುನಿಕ ಇತಿಹಾಸದಲ್ಲಿ ನಾಲ್ವರು ಗುಜರಾತಿಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಹಾಗೂ  ನರೇಂದ್ರ ಮೋದಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ( Amit Shah) ಗುರುವಾರ ಹೇಳಿದ್ದಾರೆ.

  ದಿಲ್ಲಿ  ಗುಜರಾತಿ ಸಮಾಜದ 125 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತದ ಕೀರ್ತಿ ಪ್ರಪಂಚದಾದ್ಯಂತ ಹರಡುತ್ತಿದೆ ಎಂದು ಹೇಳಿದರು.

"ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಹಾಗೂ  ನರೇಂದ್ರ ಮೋದಿ  ಈ ನಾಲ್ವರು ಗುಜರಾತಿಗಳು ಭಾರತದ ಆಧುನಿಕ ಇತಿಹಾಸದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ" ಎಂದು ಅವರು ಹೇಳಿದರು.

ಗಾಂಧೀಜಿಯವರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಸರ್ದಾರ್ ಪಟೇಲ್‌ ರಿಂದಾಗಿ ದೇಶವು ಒಗ್ಗೂಡಿತು, ಮೊರಾರ್ಜಿ ದೇಸಾಯಿ ಅವರಿಂದ ದೇಶದ ಪ್ರಜಾಪ್ರಭುತ್ವ ಪುನರುಜ್ಜೀವನಗೊಂಡಿದೆ ಹಾಗೂ  ನರೇಂದ್ರ ಮೋದಿಯಿಂದಾಗಿ ಭಾರತದ ಕೀರ್ತಿ  ವಿಶ್ವದಾದ್ಯಂತ ಪಸರಿಸಿದೆ ಎಂದು ಗೃಹ ಸಚಿವರು ಹೇಳಿದರು.

ಈ ನಾಲ್ವರು ಗುಜರಾತಿಗಳು ಉತ್ತಮ ಸಾಧನೆ ಮಾಡಿದ್ದಾರೆ ಹಾಗೂ  ಅವರು ಇಡೀ ರಾಷ್ಟ್ರದ ಹೆಮ್ಮೆ ಎಂದು ಗುಜರಾತಿ ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ಗುಜರಾತಿ ಸಮುದಾಯವು ದೇಶ ಹಾಗೂ ಪ್ರಪಂಚದಾದ್ಯಂತ ನೆಲೆಸಿದ್ದು,  ಎಲ್ಲ ಸಮಾಜದೊಂದಿಗೆ  ಯಾವಾಗಲೂ ಚೆನ್ನಾಗಿ ಬೆರೆತಿದೆ ಹಾಗೂ  ಸೇವೆ ಸಲ್ಲಿಸುತ್ತಿದೆ ಎಂದು ಶಾ ಹೇಳಿದರು.

Similar News