ಅದಾನಿ ಗುಂಪು ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಪುರಾವೆಯಿಲ್ಲ: ಸುಪ್ರೀಂ ಕೋರ್ಟ್ ಸಮಿತಿಯ ವರದಿ

Update: 2023-05-19 16:23 GMT

ಹೊಸದಿಲ್ಲಿ, ಮೇ 19: ಅದಾನಿ ಗುಂಪು ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ತನ್ನ ಶೇರುಗಳ ಬೆಲೆಯನ್ನು ಹೆಚ್ಚಿಸಿಕೊಂಡಿದೆ ಎನ್ನುವ ಆರೋಪಕ್ಕೆ ಮೇಲ್ನೋಟಕ್ಕೆ ಕಾಣುವ ಪುರಾವೆಯಿಲ್ಲ ಎಂದು ಅದಾನಿ ಗುಂಪು ನಡೆಸಿದೆಯೆನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯು ಹೇಳಿದೆ.

ಸಮಿತಿಯು ಮೇ 6ರಂದು ತನ್ನ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತ್ತು ಹಾಗೂ ಅದನ್ನು ಶುಕ್ರವಾರ ಬಹಿರಂಗಪಡಿಸಲಾಗಿದೆ.

ಬಿಲಿಯಾಧೀಶ ಗೌತಮ್ ಅದಾನಿಯ ಉದ್ಯಮ ಗುಂಪು ‘‘ಕಾರ್ಪೊರೇಟ್ ಇತಿಹಾಸದಲ್ಲೇ ಅತಿ ದೊಡ್ಡ ವಂಚನೆಯೊಂದನ್ನು ನಡೆಸುತ್ತಿದೆ’’ ಎಂಬುದಾಗಿ ಅಮೆರಿಕದ ಕಂಪೆನಿ ಹಿಂಡನ್‌ಬರ್ಗ್‌ ರಿಸರ್ಚ್‌ ತನ್ನ ಜನವರಿ 24ರ ವರದಿಯಲ್ಲಿ ಆರೋಪಿಸಿತ್ತು. ಅದರ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮಾರ್ಚ್ ನಲ್ಲಿ ಈ ಪರಿಣತ ಸಮಿತಿಯನ್ನು ರಚಿಸಿತ್ತು.

ಅದಾನಿ ಗುಂಪು ತನ್ನ ಕಂಪೆನಿಗಳ ಲಾಭದ ಬಗ್ಗೆ ತಪ್ಪು ಲೆಕ್ಕಗಳನ್ನು ನೀಡುತ್ತಿದೆ, ತೆರಿಗೆಮುಕ್ತ ದೇಶಗಳನ್ನು ತೆರಿಗೆ ವಂಚನೆ ಮತ್ತು ಕಪ್ಪುಹಣ ವನ್ನು ಬಿಳುಪು ಮಾಡಲು ಬಳಸುತ್ತಿದೆ ಎಂಬುದಾಗಿ ಹಿಂಡನ್ಬರ್ಗ್ ರಿಸರ್ಚ್ ಆರೋಪಿಸಿತ್ತು. ಈ ಆರೋಪಗಳನ್ನು ಅದಾನಿ ಗುಂಪು ನಿರಾಕರಿಸಿತ್ತು. ಆದರೆ, ಗುಂಪಿನ ಕಂಪೆನಿಗಳ ಶೇರುಗಳ ವೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿದಿದೆ.

ಸುಪ್ರೀಂ ಕೋರ್ಟ್ ನೇಮಿತ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಮ್. ಸಪ್ರೆ ವಹಿಸಿದ್ದಾರೆ. ಭಾರತೀಯ ಸ್ಟೇಟ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಒ.ಪಿ. ಭಟ್, ನಿವೃತ್ತ ನ್ಯಾಯಾಧೀಶ ಜೆ.ಪಿ. ದೇವದತ್ತ, ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ, ಐಸಿಐಸಿಐ ಬ್ಯಾಂಕ್ ನ ಮಾಜಿ ಮುಖ್ಯಸ್ಥ ಕೆ.ವಿ. ಕಾಮತ್ ಹಾಗೂ ವಕೀಲ ಮತ್ತು ಶೇರು ಮತ್ತು ನಿಯಂತ್ರಣ ವ್ಯವಸ್ಥೆ ಪರಿಣತ ಸೋಮಶೇಖರನ್ ಸುಂದರೇಶನ್ ಸಮಿತಿಯ ಸದಸ್ಯರಾಗಿದ್ದಾರೆ.

ತನಿಖೆಯ ವೇಳೆ, ಕೃತಕ ಶೇರು ವ್ಯವಹಾರ (ಆರ್ಟಿಫೀಶಿಯಲ್ ಟ್ರೇಡಿಂಗ್) ಅಥವಾ ಆಕ್ರಮಣಕಾರಿ ಶೇರು ವ್ಯವಹಾರ (ಅಬ್ಯೂಸಿವ್ ಟ್ರೇಡಿಂಗ್)ಕ್ಕೆ ಪುರಾವೆ ಲಭಿಸಿಲ್ಲ ಎಂದು ಸಮಿತಿ ಹೇಳಿದೆ.

ಸೆಬಿ ವಿಫಲವಾಗಿದೆಯೇ ಎಂದು ತೀರ್ಮಾನಿಸಲು ಸಾಧ್ಯವಾಗಿಲ್ಲ: ಸಮಿತಿ

ಶೇರುಗಳ ಬೆಲೆಗಳಲ್ಲಿ ಅದಾನಿ ಗುಂಪು ಮಾಡಿದೆಯೆನ್ನಲಾಗಿರುವ ಹಸ್ತಕ್ಷೇಪವನ್ನು ತಡೆಯುವಲ್ಲಿ ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಯು ವಿಫಲವಾಗಿದೆಯೇ ಎನ್ನುವುದನ್ನು ತೀರ್ಮಾನಿಸಲು ತನಗೆ ಸಾಧ್ಯವಾಗಿಲ್ಲ ಎಂದು ತನ್ನ ವರದಿಯಲ್ಲಿ ಸುಪ್ರಿಂ ಕೋರ್ಟ್ ನೇಮಿತ ಸಮಿತಿ ತಿಳಿಸಿದೆ.

ತನ್ನ ಕಂಪೆನಿಗಳ ಶೇರುಗಳು ಪಾತಾಳಕ್ಕೆ ಕುಸಿದಾಗ ಚಿಲ್ಲರೆ ಹೂಡಿಕೆದಾರರನ್ನು ಸಂತೈಸಲು ಅದಾನಿ ಗುಂಪು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ.

‘‘ಜನವರಿ 24ರ ಬಳಿಕ, ಅದಾನಿ ಶೇರುಗಳಲ್ಲಿ ಚಿಲ್ಲರೆ ಹೂಡಿಕೆದಾರರ ಹೂಡಿಕೆಯು ಹಲವು ಪಟ್ಟು ಹೆಚ್ಚಿರುವುದನ್ನು ಅಂಕಿಅಂಶಗಳು ತೋರಿಸಿವೆ. ಗುಂಪು ತೆಗೆದುಕೊಂಡ ಪರಿಹಾರ ಕ್ರಮಗಳು ಅದರ ಶೇರುಗಳ ಮೇಲಿನ ಜನರ ವಿಶ್ವಾಸ ವೃದ್ಧಿಗೆ ಸಹಕಾರಿಯಾಗಿವೆ. ಗುಂಪಿನ ಶೇರುಗಳು ಈಗ ಸ್ಥಿರವಾಗಿವೆ’’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

Similar News