ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್‌ಗೆ ಅರ್ಹತೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ

Update: 2023-05-20 14:58 GMT

ಹೊಸದಿಲ್ಲಿ, ಮೇ 20: ಓಪನರ್ ಡೆವೊನ್ ಕಾನ್ವೇ(87 ರನ್, 51 ಎಸೆತ) ಹಾಗೂ ಋತುರಾಜ್ ಗಾಯಕ್ವಾಡ್(79 ರನ್, 50 ಎಸೆತ)ಅರ್ಧಶತಕದ ಕೊಡುಗೆ , ದೀಪಕ್ ಚಹಾರ್(3-22) ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 77 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ಪ್ಲೇ ಆಫ್ ಸುತ್ತಿಗೆ ತೇರ್ಗಡೆಯಾಗಿದೆ.

14 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿ ಒಟ್ಟು 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ತನ್ನ ಲೀಗ್ ಹಂತದ ಅಭಿಯಾನ ಅಂತ್ಯಗೊಳಿಸಿದ ಧೋನಿ ಪಡೆ ಪ್ಲೇ ಆಫ್ ಸುತ್ತಿನಲ್ಲಿ ತನ್ನ ಸ್ಥಾನ ಖಾತ್ರಿಪಡಿಸಿಕೊಂಡಿತು.

ಡೆಲ್ಲಿ ತಂಡ 10 ಅಂಕವನ್ನು ಗಳಿಸಿ ತನ್ನ ಹೋರಾಟ ಅಂತ್ಯಗೊಳಿಸಿದೆ. ರವಿವಾರ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಫಲಿತಾಂಶದ ನಂತರ ಡೆಲ್ಲಿ ಅಂಕಪಟ್ಟಿಯಲ್ಲಿ ಯಾವ ಸ್ಥಾನದೊಂದಿಗೆ ಟೂರ್ನಿಯನ್ನು ಕೊನೆಗೊಳಿಸಲಿದೆ ಎನ್ನುವುದು ಗೊತ್ತಾಗಲಿದೆ.

ಶನಿವಾರ ನಡೆದ ಐಪಿಎಲ್‌ನ 67ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಡೇವಿಡ್ ವಾರ್ನರ್ ಸರ್ವಾಧಿಕ ಸ್ಕೋರ್(86 ರನ್, 58 ಎಸೆತ, 7 ಬೌಂಡರಿ, 5 ಸಿಕ್ಸರ್)ಗಳಿಸಿದರು. ಉಳಿದ ಬ್ಯಾಟರ್‌ಗಳು ದಿಟ್ಟ ಪ್ರದರ್ಶನ ನೀಡಲಿಲ್ಲ.

ದೀಪಕ್ ಚಹಾರ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಮಹೀಶ್ ತೀಕ್ಷಣ(2-23) ಹಾಗೂ ಮಥೀಶ ಪಥಿರಣ(2-22)ತಲಾ ಎರಡು ವಿಕೆಟ್‌ಗಳನ್ನು ಪಡೆದು ದೀಪಕ್‌ಗೆ ಸಾಥ್ ನೀಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ಕಾನ್ವೇ(87 ರನ್, 52 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ಋತುರಾಜ್ ಗಾಯಕ್ವಾಡ್(79 ರನ್, 50 ಎಸೆತ, 3 ಬೌಂಡರಿ, 7 ಸಿಕ್ಸರ್)ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 141 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಆದರೆ ಈ ಇಬ್ಬರನ್ನು ಹೊರತುಪಡಿಸಿ ಶಿವಂ ದುಬೆ(22 ರನ್, 9 ಎಸೆತ) ಹಾಗೂ ರವೀಂದ್ರ ಜಡೇಜ(ಔಟಾಗದೆ 20 ರನ್, 7 ಎಸೆತ)ಬಿರುಸಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಿದರು. ಡೆಲ್ಲಿ ಪರ ಚೇತನ್ ಸಕಾರಿಯ(1-36), ಅನ್ರಿಚ್ ನೋರ್ಟ್ಜೆ(1-43) ಹಾಗೂ ಖಲೀಲ್ ಅಹ್ಮದ್(1-45) ತಲಾ ಒಂದು ವಿಕೆಟ್ ಪಡೆದರು.
 

Similar News