×
Ad

ದಲಿತ ಮುಖ್ಯಮಂತ್ರಿ ಏಕಿಲ್ಲವೆಂದರೆ....

Update: 2023-05-21 09:56 IST

ಮುಖ್ಯಮಂತ್ರಿ ಆಗುವುದು ಅಥವಾ  ಪ್ರಧಾನಿಯಾಗುವುದು ನಾವಂದುಕೊಂಡಷ್ಟು ಸರಳವಾಗಿಲ್ಲ. ಈ ಸತ್ಯ ಜನರಿಗೂ ಗೊತ್ತು, ಪಕ್ಷಗಳ ಒಳಗಿರುವ ದಲಿತ ನಾಯಕರಿಗೂ ಗೊತ್ತು, ದಲಿತ ಸಂಘಟನೆಗಳಿಗೂ ಗೊತ್ತು.

ಬಹುಮತದ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿ ವಿಷಯದಲ್ಲಿ ಹಗ್ಗಜಗ್ಗಾಟ ನಡೆದು, ಕೊನೆಗೂ ಅನೇಕರ ನಿರೀಕ್ಷೆಯಂತೆ ಸಿದ್ದರಾಮಯ್ಯ ಸಿಎಂ ಆಗಿ, ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿದ್ದಾರೆ.

ಕಾಂಗ್ರೆಸ್ ಕಟ್ಟಲು ಈ ಇಬ್ಬರು ನಾಯಕರ ಶ್ರಮ, ಸುತ್ತಾಟ, ಖರ್ಚುವೆಚ್ಚ, ರಣತಂತ್ರ ಹೆಣೆದ ಬಗೆ, ಜನಾಭಿಪ್ರಾಯ ರೂಪಿಸಿದ ಬಗೆ, ಪ್ರತಿಪಕ್ಷಗಳ ದಾಳಿ ಎದುರಿಸಿದ ರೀತಿ ಎಲ್ಲವನ್ನೂ ನಾವು ನೋಡಿದ್ದೇವೆ.

ನಾನೇನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಲ್ಲ. ಆದರೂ ಇದನ್ನು ನಾನಿಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಒಬ್ಬ ರಾಜಕೀಯ ವಿಶ್ಲೇಷಕನಾಗಿ ಮತ್ತು ಬರಹಗಾರನಾಗಿ ಇದನ್ನಿಲ್ಲಿ ಹೇಳಬೇಕೆನಿಸಿತು.

ವಿಶೇಷ ಕಾರಣ, ಅನೇಕ ಸಹೋದರ ಸಹೋದರಿಯರು ದಲಿತ ಮುಖ್ಯಮಂತ್ರಿ ವಿಷಯದಲ್ಲಿ ಸಮುದಾಯ ಸೊಲ್ಲೆತ್ತಲಿಲ್ಲ, ಸಮುದಾಯದ ನಾಯಕರು ಮೌನ ಮುರಿಯಲಿಲ್ಲ, ದಲಿತ ಸಂಘಟನೆಯ ನಾಯಕರು ಮಾರಿಕೊಂಡು ಬಾಯಿಬಿಚ್ಚಲಿಲ್ಲ, ‘‘ಕಾಂಗ್ರೆಸ್ನವರು ನಮ್ಮ ಸಮುದಾಯದ ವೋಟುಗಳನ್ನು ಪಡೆದರು, ಸೀಟು ಮಾತ್ರ ತಾವು ಹೊಡೆದುಕೊಂಡರು’’ ಎಂದು ಅಲ್ಲಲ್ಲಿ ಗೋಳಾಡುತ್ತಾ ಗೊಣಗಾಡುತ್ತಾ ವಿನಾಕಾರಣ ನಮ್ಮ ಸಮುದಾಯದೊಳಗೆ ಒಂದು ಪಾಪಪ್ರಜ್ಞೆ ಬಿತ್ತುತ್ತಿದ್ದಾರೆ. ‘‘ದಲಿತ ಮುಖ್ಯಮಂತ್ರಿಯ ಆಸೆ ತೋರಿಸಿ ನಮ್ಮ ಜನರ ವೋಟು ಕಸಿದರು, ಮುಂದೆ ದಲಿತ ಪ್ರಧಾನಿಯ ಆಸೆ ತೋರಿಸಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಮ್ಮ ಮತ ದೋಚುತ್ತದೆ ಎಚ್ಚರ’’ ಎಂಬ ಸಲಹೆಗಳನ್ನು ನೀಡುತ್ತಿದ್ದಾರೆ. 

ಇನ್ನು ಕೆಲವರು ‘‘ದಲಿತರು ಹಣ ಹೆಂಡ ಬಾಡು ಮತ್ತು ಸಣ್ಣಪುಟ್ಟ ಆಮಿಷಗಳಿಗೆ ತಮ್ಮನ್ನು ತಾವು ಮಾರಿಕೊಂಡು ಕಾಂಗ್ರೆಸ್ ಬೆಂಬಲಿಸಿದರು. ಇವರಿಗೆ ದಲಿತ ಮುಖ್ಯಮಂತ್ರಿ ಕೇಳುವ ತಾಕತ್ತಿಲ್ಲ. ಪುಡಿಗಾಸಿಗೆ ಮಾರಿಕೊಳ್ಳುವುದಷ್ಟೇ ಗೊತ್ತು’’ ಎಂದೆಲ್ಲಾ ತಮ್ಮದೇ ಸಮುದಾಯದ ಜನರನ್ನು ಜಾಲತಾಣದಲ್ಲಿ ಬಹಳ ಕೀಳಾಗಿ ತುಚ್ಛವಾಗಿ ಹಂಗಿಸಲಾಗುತ್ತಿದೆ. 

ನಮ್ಮ ಜನರು ಅಷ್ಟು ದಡ್ಡರೇ!? ನಮ್ಮ ಜನ ಅಷ್ಟು ದುರ್ಬಲರೇ? ನಮ್ಮ ಜನ ಅಷ್ಟು ಸಲೀಸಾಗಿ ಆಮಿಷಗಳಿಗೆ ಮಾರುಹೋಗುವವರೇ!? ಹಾಗಿದ್ದರೆ ಬಿಜೆಪಿಯವರೂ ಆಮಿಷಗಳನ್ನು ಒಡ್ಡುತ್ತಲೇ ಇದ್ದಾರಲ್ಲವೇ? ಆದರೂ ಏಕೆ ಅವರ ಆಮಿಷಗಳಿಗೆ ಬಲಿಯಾಗುವುದಿಲ್ಲ!? ಎಂಬುದನ್ನು ನಾವು ಯೋಚಿಸಬೇಕು.

ಈ ಸಲ ದಲಿತ ಮುಖ್ಯಮಂತ್ರಿ ಮಾಡುತ್ತೇವೆಂದು ಕಾಂಗ್ರೆಸ್ ಹೇಳಿರಲಿಲ್ಲ. ಹಾಗೆಯೇ ಕಾಂಗ್ರೆಸ್ನಲ್ಲಿರುವ ದಲಿತ ನಾಯಕರೂ ಕೇಳಿರಲಿಲ್ಲ. ಅದಲ್ಲದೆ ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟು ದಲಿತರೂ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ವೋಟು ಹಾಕಿಲ್ಲ.

ಆಡಳಿತ ಪಕ್ಷದ ಉಸಿರುಗಟ್ಟಿಸುವ ನೀತಿಗೆ ಬೇಸತ್ತು ದಲಿತರೂ ಸೇರಿದಂತೆ ಬಹುಜನರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದರು.

ಇದು ಜನಸಮುದಾಯದ ಜಾಣನಡೆ. ಇದೇ ರಾಜಕಾರಣದ ರಣತಂತ್ರ. ಅದು ಜನರಿಗೆ ಗೊತ್ತಿದೆ.

ಮುಂದೆ ಲೋಕಸಭಾ ಚುನಾವಣೆಗೂ ಇದೇ ತಂತ್ರ ಅನುಸರಿಸುತ್ತಾರೆ! ಸದ್ಯಕ್ಕೆ ದಲಿತರಿಗೆ ಯಾವ ಪ್ರಧಾನಿ ಆಸೆಯೂ ಇಲ್ಲ. ಬದಲಿಗೆ ಇರುವ ಪ್ರಧಾನಿ ಹೋದರೆ ಸಾಕಾಗಿದೆ ಎಂಬುದೇ ಜನಾಭಿಪ್ರಾಯ.

ಮುಖ್ಯಮಂತ್ರಿ ಆಗುವುದು ಅಥವಾ  ಪ್ರಧಾನಿಯಾಗುವುದು ನಾವಂದುಕೊಂಡಷ್ಟು ಸರಳವಾಗಿಲ್ಲ. ಈ ಸತ್ಯ ಜನರಿಗೂ ಗೊತ್ತು ಪಕ್ಷಗಳ ಒಳಗಿರುವ ದಲಿತ ನಾಯಕರಿಗೂ ಗೊತ್ತು, ದಲಿತ ಸಂಘಟನೆಗಳಿಗೂ ಗೊತ್ತು. ಆ ಕಾರಣಕ್ಕೆ ಎಲ್ಲರೂ ಮೌನವಾಗಿದ್ದಾರೆ.

ಮುಂದೆ ಅಂತಹ ಒಂದು ಸನ್ನಿವೇಶವನ್ನು ಎಲ್ಲರೂ ಒಗ್ಗಟ್ಟಾಗಿ ಸೇರಿ ಚುನಾವಣೆಗೂ ಮುನ್ನ ರಣತಂತ್ರವಾಗಿ ರೂಪಿಸಬೇಕು. ಮುಂದೆ ಮಾಡೋಣ.

ಬರೀ ಮಾತಾಡುವುದರಿಂದ ಯಾವುದೂ ಆಗಲ್ಲ. ಕಾರ್ಯತಂತ್ರ ರೂಪಿಸಬೇಕು. ಕಾರ್ಯರೂಪಕ್ಕಿಳಿಸಬೇಕು.

ಅದನ್ನು ಈಗಿಂದಲೇ ರೂಪಿಸಬೇಕೇ ಹೊರತು ಚುನಾವಣೆ ಬಂದಾಗಲ್ಲ ಎಂಬುದನ್ನು ಅರ್ಥಮಾಡಿಕೊಂಡು ನಾವು ಮಾತಾಡುವುದು ಒಳ್ಳೆಯದು.

Similar News