×
Ad

ಬಿಜೆಪಿಯ ಸೋಲಿಗೆ ಕಾರಣಗಳನ್ನು ಹುಡುಕುತ್ತಾ...

Update: 2023-05-21 10:06 IST

ಚುನಾವಣೆ ಬರುತ್ತದೆ ಹೋಗುತ್ತದೆ, ಪಕ್ಷಗಳು ಹಾಗೂ ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಆಡಳಿತಕ್ಕೆ ಬಂದ ಸರಕಾರಗಳು ಅವರ ಅವಧಿಯಲ್ಲಿ ಮಾಡುವ ಜನಪರ, ಜೀವಪರ ಮತ್ತು ನಾಡನ್ನು ಕಟ್ಟುವಲ್ಲಿ ಭವಿಷ್ಯಕ್ಕೆ ಅವುಗಳು ಕೊಡುವ ಒಳ್ಳೆಯ ಕೆಲಸಗಳು ಮಾತ್ರ ಇತಿಹಾಸದಲ್ಲಿ ಉಳಿಯುತ್ತವೆ.

ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಯಾವ ಗ್ಯಾರಂಟಿಗಳು ಕಾರಣವಲ್ಲ. ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಹುಚ್ಚಾಟಗಳು, ಹುಸಿ ದೇಶಭಕ್ತಿಯ ಸೋಗು, ತಮ್ಮ ಪಕ್ಷದವರಲ್ಲದವರ ಬಗೆಗಿನ ಅಗೌರವ ಮತ್ತು ಗೇಲಿ, ನೆತ್ತಿಗೇರಿಸಿಕೊಂಡಿರುವ ಅಹಂಕಾರ, ಅಪ್ರಬುದ್ಧತೆ ಮತ್ತು ಜೀವವಿರೋಧಿ ಮನಸ್ಥಿತಿ.

ಹಿಂದಿನ ಸರಕಾರ ಹಾಗೂ ನಾಯಕರು ಏನೂ ಮಾಡಲಿಲ್ಲವೆಂದು ಹೇಳುತ್ತಿದ್ದ ಹಸಿಹಸಿ ಸುಳ್ಳು ಜನರು ಇವರ ಸಣ್ಣತನಗಳ ಬಗ್ಗೆ ಯೋಚಿಸುವಂತೆ ಮಾಡಿತು. ಎಲ್ಲದಕ್ಕೂ ಪಾಕಿಸ್ತಾನ, ಸೈನ್ಯ, ಕಾಂಗ್ರೆಸ್, ಧರ್ಮ, ದೇವರುಗಳನ್ನು ಎಳೆತಂದು ದಿನಕ್ಕೊಂದು ಬೀದಿರಂಪ ಹಾದಿರಂಪ ಮಾಡುತ್ತಿದ್ದುದು ಜನರ ನಿತ್ಯ ಬದುಕಿಗೆ ಕಿರಿಕಿರಿ ಮಾಡುತ್ತಿದ್ದುದು ಸುಳ್ಳಲ್ಲ.

ಹಿರಿಯ ನಾಯಕರುಗಳನ್ನು ನೆಡೆಸಿಕೊಳ್ಳುತ್ತಿದ್ದ ರೀತಿ, ವಿರೋಧಿಗಳನ್ನು ಅಣಕಿಸಿ ಅಪಹಾಸ್ಯ ಮಾಡುತ್ತಿದ್ದ ಬಿಜೆಪಿ ನಾಯಕರ ಅತಿರೇಕದ ವರ್ತನೆಗಳು ರಾಜ್ಯದ ಸೂಕ್ಷ್ಮಮತಿಗಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ.

ಬಿಜೆಪಿಯ ರಾಷ್ಟ್ರೀಯ ನಾಯಕರು ಚುನಾವಣಾ ಸಮಯದಲ್ಲಿ ರಾಜ್ಯದ ನಾಯಕರನ್ನು ಕಾಲಕಸ ಮಾಡಿಕೊಂಡಿದ್ದು, ಇಲ್ಲಿನ ಮತದಾರರೆಲ್ಲ ದಡ್ಡರು, ನಮ್ಮ ಮುಖನೋಡಿ ವೋಟುಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಕರ್ನಾಟಕವನ್ನು ತಮ್ಮ ಪಾಳೆಪಟ್ಟು ಎನ್ನುವಂತೆ ವರ್ತಿಸಿದ ನಾಯಕರ ದುರಹಂಕಾರ ಮುಂದಿನ ದಿನಗಳಲ್ಲಿ ತಮ್ಮ ಭವಿಷ್ಯವೇನು? ಎಂಬುದನ್ನು ಜನರು ಚಿಂತಿಸುವಂತೆ ಮಾಡಿತು. ಮುಸ್ಲಿಮ್ ದ್ವೇಷ, ಲಿಂಗಾಯತರ ನಿರ್ಲಕ್ಷ್ಯ, ಸುಳ್ಳು ಇತಿಹಾಸಗಳನ್ನೆ ಸೃಷ್ಟಿಸಲು ಹೊರಟ ಅಜ್ಞಾನ ಬಿಜೆಪಿಯ ಅದಃಪತನಕ್ಕೆ ಕಾರಣವಾಯಿತು.

ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ಸರ್ವರನ್ನು ಸಮಾನವಾಗಿ ಕಾಣಬೇಕು. ಆದರೆ ಬೊಮ್ಮಾಯಿಯವರು ಮಾತು ಮತ್ತು ಕೃತಿಗಳಲ್ಲಿ ಮಾಡಿದ ತಾರತಮ್ಯ, ಸಂವೇದನಾಶೀಲತೆಯನ್ನು ಕಳೆದುಕೊಂಡ ಮಂತ್ರಿಮಂಡಲ ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಉದ್ದಕ್ಕೂ ಹಿಜಾಬ್, ಪಠ್ಯಪುಸ್ತಕ ಪರಿಷ್ಕರಣೆ, ಸಾವುಗಳಲ್ಲಿ ಕೋಮುದ್ವೇಷ ಹಂಚುವುದು, ಎದುರಾಳಿಗಳ ಮೇಲೆ ತಾಕತ್ತು-ಗಂಡಸುತನದ ಸವಾಲುಗಳನ್ನು ಹಾಕುವುದು, ಜಾತಿಜಾತಿಗಳನ್ನು ಎತ್ತಿಕಟ್ಟುವುದು ಇಂತಹ ಸಮಾಜವಿರೋಧಿ ಕೃತ್ಯಗಳಲ್ಲಿಯೇ ತೊಡಗಿಸಿಕೊಂಡಿತು.

‘‘ಅಕ್ಕಿ ನಮ್ಮದು ಚೀಲವಷ್ಟೆ ಸಿದ್ದರಾಮಯ್ಯನವರದು’’ ಎಂದು ಅನ್ನಭಾಗ್ಯ ಯೋಜನೆ ಬಗ್ಗೆ ಗೇಲಿ ಮಾಡುತ್ತಿದ್ದ  ಬಿಜೆಪಿ ಸರಕಾರ ಬಡವರಿಗೆ ಕೊಡುತ್ತಿದ್ದ ಅಕ್ಕಿಯನ್ನು ಕಡಿಮೆ ಮಾಡಿ ತಾವು ಉಳ್ಳವರಪರ ಎನ್ನುವ ಧೋರಣೆಯನ್ನು ಸಾಬೀತು ಮಾಡಿತು. ಎಲ್ಪಿಜಿ ಸಿಲಿಂಡರ್ ಬೆಲೆ ದಿಢೀರನೆ ಹೆಚ್ಚಿಸಿ ಮಧ್ಯಮ ವರ್ಗದವರ ಕೈಸುಡುವಂತೆ ಮಾಡಿತು. ತಾವು ಮಾಡುವ ಎಲ್ಲಾ ಎಡವಟ್ಟುಗಳನ್ನು ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಗಳ ಮೇಲೆ ಆರೋಪಿಸುವ ಭಂಡತನ ಜನರಿಗೆ ಅರ್ಥವಾಗಿತ್ತು.

ಆಡಳಿತ ನಡೆಸುವವರ ಸೈರಣೆಗೆ ಮೀರಿದ ಭ್ರಷ್ಟಾಚಾರ, ಕಾರ್ಯಕರ್ತರು ತಮ್ಮ ಎದುರಿನವರ ಮೇಲೆ ಪ್ರದರ್ಶಿಸುತ್ತಿದ್ದ, ಈಗಲೂ ಪ್ರದರ್ಶಿಸುತ್ತಿರುವ ಅಸಹಿಷ್ಣುತೆ, ಅತಿಯಾದ ಸುಳ್ಳು, ಪ್ರಾಮಾಣಿಕತೆಯ ಸೋಗು ಜನರಿಗೆ ಅರ್ಥವಾಗುತ್ತಾ ಹೋಯಿತು.

ಹೀಗೆ ಬಿಜೆಪಿಗರ ಎಡವಟ್ಟುಗಳನ್ನು ಪಟ್ಟಿಮಾಡುತ್ತ ಹೋದರೆ ಸಾಕಷ್ಟು ಸಿಗುತ್ತವೆ. ಅಂತಿಮವಾಗಿ ವರಕವಿ ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ ‘‘ಅಂಗಾತ ಬಿತ್ತೊ ಹೆಗಲಾಗೆ ಎತ್ತೊ’’ ಎನ್ನುವ ಸ್ಥಿತಿಗೆ ಬಿಜೆಪಿಯ ಸ್ವಯಂಕೃತ ಎಳಸುತನಗಳೇ ಕಾರಣವಾದವು.

ಸೋಲು ಗೆಲುವು ಸಾಮಾನ್ಯವಾದುದ್ದು. ಮತ್ತೆ ಚುನಾವಣೆ ಬರುತ್ತದೆ ಹೋಗುತ್ತದೆ, ಪಕ್ಷಗಳು ಹಾಗೂ ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಆಡಳಿತಕ್ಕೆ ಬಂದ ಸರಕಾರಗಳು ಅವರ ಅವಧಿಯಲ್ಲಿ ಮಾಡುವ ಜನಪರ, ಜೀವಪರ ಮತ್ತು ನಾಡನ್ನು ಕಟ್ಟುವಲ್ಲಿ ಭವಿಷ್ಯಕ್ಕೆ ಅವುಗಳು ಕೊಡುವ ಒಳ್ಳೆಯ ಕೆಲಸಗಳು ಮಾತ್ರ ಇತಿಹಾಸದಲ್ಲಿ ಉಳಿಯುತ್ತವೆ.

ಈ ಸೋಲಿನಿಂದಲೂ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ಯಾರೋ ಬಂದರು, ಯಾರೋ ಹೋದರು, ಯಾರ್ಯಾರೋ ನಮ್ಮನ್ನಾಳಿದರು ಎನ್ನುವಷ್ಟಕ್ಕೆ ಸೀಮಿತರಾಗುತ್ತಾರೆ.

Similar News