ರಾಜಪ್ರಭುತ್ವ ಮುಗಿದಿದೆ

Update: 2023-05-22 07:11 GMT

ಕೆಲವು ಮಾಧ್ಯಮಗಳಲ್ಲಿ, ವರದಿಗಳಲ್ಲಿ, ಬರಹಗಳಲ್ಲಿ ಮಂತ್ರಿಗಳನ್ನು ಮಹಾ ರಾಜರಿಗೆ, ಯುವರಾಜರಿಗೆ, ಮಹಾರಾಣಿಗೆ ಹೋಲಿಸುವ ಪ್ರವೃತ್ತಿ ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಹೋಲಿಕೆಗಳು ಸರಿಯೇ?

ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೇರುವುದನ್ನು ಪಟ್ಟಾಭಿಷೇಕ, ಸಿಂಹಾಸನ ಅಲಂಕರಿಸುವುದು ಎಂದು ಹೋಲಿಸುವುದು; ಚುನಾವಣೆಗಳನ್ನು ಸಮರ, ಕುಸ್ತಿ, ಕಾದಾಟ, ರಣರಂಗ ಎಂದು ಬಿಂಬಿಸುವುದೆಲ್ಲವೂ ಪ್ರಜಾಪ್ರಭುತ್ವದ ಅಣಕಗಳೇ.

ಭಾರತ ರಾಜಪ್ರಭುತ್ವದಿಂದ ಕಳಚಿಕೊಂಡು ಪ್ರಜಾಪ್ರಭುತ್ವ ಬಂದು ಇಷ್ಟು ವರ್ಷಗಳಾಗಿದ್ದರೂ ಮಾನಸಿಕ ಸ್ಥಿತಿ ಮಾತ್ರ ಬದಲಾಗಿಲ್ಲದಿರುವುದಕ್ಕೆ ಇಂತಹ ಅಸಂಬದ್ಧ ಹೋಲಿಕೆಗಳೇ ಸಾಕ್ಷಿ.

ಮಹಾರಾಜ, ಯುವರಾಜ, ಮಹಾರಾಣಿ ಎಂದು ಬಣ್ಣಿಸುವುದೇ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ. ಅದು ಪ್ರಜೆಗಳಿಗೆ ಮಾಡುವ ಅಪಚಾರ. ಮಾತ್ರವಲ್ಲ ನಮಗೆ ನಾವೇ ಮಾಡಿಕೊಳ್ಳುವ ಅಪಚಾರ. ಇಲ್ಲಿ ಪ್ರಧಾನಿಯಿಂದ ಹಿಡಿದು ಗ್ರಾಪಂ ಸದಸ್ಯನ ತನಕ ಎಲ್ಲಾ ಚುನಾಯಿತ ಜನಪ್ರತಿನಿಧಿಗಳೇ ಅಂದರೆ, ಜನಸೇವಕರೇ....

ಇದನ್ನು ಬರಹಗಾರರು, ಮಾಧ್ಯಮದವರು, ಹೋರಾಟಗಾರರು, ಸಾಹಿತಿಗಳು ಬಹಳ ಎಚ್ಚರಿಕೆಯಿಂದ ಬಳಸುವುದನ್ನು ಅರಿತುಕೊಳ್ಳಬೇಕು.

ತಿಳಿದವರೇ ಹೀಗೆ ನಾಜೂಕಿಗಾಗಿಯೋ.. ಆಕರ್ಷಣೆಗಾಗಿಯೋ ಅಥವಾ ಅಕ್ಷರದೊಡನೆ ಆಟವಾಡಲೋ ಮನಸ್ಸಿಗೆ ತೋಚಿದಂತೆ ಬರೆಯುವುದು ಬಹಳ ತಪ್ಪು ಸಂದೇಶ ಸಾರುತ್ತದೆ.

ಪ್ರಧಾನ ಮಂತ್ರಿ, ಕೇಂದ್ರ ಮಂತ್ರಿ, ಮುಖ್ಯಮಂತ್ರಿ ಹೀಗೆ ಪದವಿಗೆ ಏರಿದವರಿಗೆ ರಾಜ ಮರ್ಯಾದೆಗಳು ಸಿಗಬಹುದು. ಹಾಗೆಂದು ಅವರು ರಾಜರೇ ಎಂದು ಭ್ರಮಿಸುವಂತೆ ನಾವೇ ಅವರಿಗೆ ಹೇಳಿಕೊಡುತ್ತಾ ಪ್ರಜೆಗಳನ್ನು ರಾಜನ ಕೈಕೆಳಗೆ ಆಳಿಸಿಕೊಳ್ಳುವವರು ಎಂಬ ಭಾವವನ್ನು ಸೃಷ್ಟಿಸಬಾರದು.

ಇಂತಹ ಯಡವಟ್ಟುಗಳ ಪರಿಣಾಮವೇನಾಗಿದೆ?

ಇಂದು ಗ್ರಾಪಂ ಸದಸ್ಯನಿಗೂ ತಾನೊಬ್ಬ ಜನಸೇವಕ ಎಂಬ ಭಾವ ಹೋಗಿ ತಾನೊಬ್ಬ ಪಾಳೇಗಾರ ಎಂಬ ದೌಲತ್ತು ಬಂದಿದೆ. ಹೀಗಿರುವಾಗ ಮಂತ್ರಿ, ಮುಖ್ಯಮಂತ್ರಿಗಳನ್ನು ಕೇಳಬೇಕೆ? ಅವರು ಅಧಿಕಾರ ಸಿಗುವ ತನಕ ಜನರ ಕಾಲಿಗೆ ಬೀಳುತ್ತಾರೆ. ಅಧಿಕಾರ ಸಿಕ್ಕಮೇಲೆ ಅಕ್ಷರಶಃ ಮಹಾರಾಜರಂತೆಯೇ ಆಡುತ್ತಾರೆ. ತನ್ನನ್ನು ಆರಿಸಿದ ಜನರಿಂದ ಬಹಳ ಅಂತರ ಕಾಯ್ದುಕೊಳ್ಳುತ್ತಾರೆ.

ಜನರೂ ಅಷ್ಟೆ; ತಾವೇ ತಮ್ಮ ಮತ‘ದಾನ’ದ ಮೂಲಕ ಗೆಲ್ಲಿಸಿದವನ ಮುಂದೆ ಗುಲಾಮರಂತೆ ನಿಲ್ಲುತ್ತಾರೆ! ಯಾರೋ ಗಣ್ಯಾತಿಗಣ್ಯ ಬಂದಂತೆ ಭಯ ಭೀತ ರಾಗುತ್ತಾರೆ. ಬಹಳ ಗೌರವಾದರಗಳಿಂದ ನಡೆದುಕೊಳ್ಳುತ್ತಾರೆ. ಅವರನ್ನು ಕೇವಲ ನೋಡಿದರೇ ಕೃತಾರ್ಥರಾದಂತೆ ಅಂದುಕೊಳ್ಳುತ್ತಾರೆ. ಅವರಿಂದ ಸಣ್ಣ ಕೆಲಸ ಮಾಡಿಸಿಕೊಳ್ಳಲು ಇನ್ನಿಲ್ಲದಂತೆ ಕಾಯುತ್ತಾರೆ.

ಅವರ ಸುತ್ತಲ ಪುಢಾರಿಗಳ ಪಟಾಲಮ್ಮನ್ನು ಮೀರಿ ಮಂತ್ರಿಗಳನ್ನು ನೋಡು ವುದೇ ಜನಸಾಮಾನ್ಯರಿಗೆ ದುಸ್ತರವಾಗುವಂತಹ ಸ್ಥಿತಿ ನಿರ್ಮಾಣವಾದುದೇ ಇಂತಹ ಅಸಂಬದ್ಧ್ದಗಳನ್ನು ಸೃಷ್ಟಿಸಿದ್ದರಿಂದ!

ಪ್ರಜ್ಞಾವಂತರು ಇಂತಹ ಮನೋಭಾವವನ್ನು ಜನಮನಕ್ಕೆ ತುಂಬುವುದು ದೊಡ್ಡ ತಪ್ಪು. ಜನನಾಯಕ ಜನಸೇವಕನಾಗಿ ಇರಬೇಕು. ತನ್ನ ಜನರಿಗಾಗಿ ಸದಾ ಲಭ್ಯವಿರಬೇಕು. ಜನರೊಡನೆ ಪ್ರೀತಿಯಿಂದ ಸಹಜವಾಗಿ ಬೆರೆಯಬೇಕು. ಈ ರೀತಿಯ ನಡವಳಿಕೆಯನ್ನು ಪ್ರಜ್ಞಾವಂತರು ಜನಪ್ರತಿನಿಧಿಗಳಿಗೆ ಕಲಿಸಬೇಕಾದುದನ್ನು ಬಿಟ್ಟು, ನಾವೇ ಅವರನ್ನು ಈ ರೀತಿ ರಾಜ, ಮಹಾರಾಜ, ಯುವರಾಜ, ಸಿಂಹಾಸನದೀಶ ಎಂದೆಲ್ಲಾ ಹಾಡಿಹೊಗಳಿದರೆ ಅವರ ಅಹಂಕಾರ ಅಟ್ಟಕ್ಕೇರುತ್ತದೆ. ಅದೇ ಈಗ ಆಗಿರೋದು. ಅಕ್ಷರಶಃ ಈ ಜನಪ್ರತಿನಿಧಿಗಳು ತಮ್ಮನ್ನು ರಾಜರಂತೆಯೇ ನೋಡಬೇಕು, ಮೆರೆಸಬೇಕೆಂಬ ಹುಚ್ಚುತನಕ್ಕಿಳಿದು ತಮ್ಮ ಮೆರವಣಿಗೆಗಾಗಿ ಜನರ ಖಜಾನೆಯ ಹಣ ಸುರಿಯುತ್ತಾರೆ, ಟ್ರಾಫಿಕ್ ಬಂದ್ ಮಾಡಿ ಜನಸಾಮಾನ್ಯರಿಗೆ ವಿಪರೀತ ಹಿಂಸೆ ಕೊಡುತ್ತಾರೆ. ಬಹಳವೇ ಮೆರೆಯುತ್ತಾರೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುವ ನಡತೆ. ಬಾಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೇಳುವ ನಾವು ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಿಕ್ಕರಿಸುತ್ತಲೇ ಇದ್ದೇವೆ ಅಲ್ಲವೇ...?

Similar News